ADVERTISEMENT

ಬೆಂಗಳೂರು ಉಪನಗರ ರೈಲು: ಹೊಸ ಟೆಂಡರ್‌ ಕರೆಯಲು ಅನುಮತಿ

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2025, 0:08 IST
Last Updated 7 ಅಕ್ಟೋಬರ್ 2025, 0:08 IST
ಉಪನಗರ ರೈಲು
ಉಪನಗರ ರೈಲು   

ಬೆಂಗಳೂರು: ಬೆಂಗಳೂರು ಉಪನಗರ ರೈಲು ಯೋಜನೆಯ (ಬಿಎಸ್‌ಆರ್‌ಪಿ) ಕಾರಿಡಾರ್–2ಕ್ಕೆ ಸಂಬಂಧಿಸಿದಂತೆ ಹೊಸದಾಗಿ ಟೆಂಡರ್‌ ಕರೆಯಲು ಮುಖ್ಯಕಾರ್ಯದರ್ಶಿ ಅವರು ಕರ್ನಾಟಕ ರೈಲು ಮೂಲಸೌಕರ್ಯ ಅಭಿವೃದ್ಧಿ ಎಂಟರ್‌ಪ್ರೈಸರ್ಸ್‌ಗೆ (ಕೆ- ರೈಡ್) ಅನುಮತಿ ನೀಡಿದ್ದಾರೆ. ಎಲ್‌ ಆ್ಯಂಡ್‌ ಟಿ ಗುತ್ತಿಗೆ ಕಂಪನಿಯು ಕಾಮಗಾರಿಯನ್ನು ಅರ್ಧದಲ್ಲೇ ನಿಲ್ಲಿಸಿ ಹೊರ ನಡೆದಿರುವುದರಿಂದ ಮೂರು ಪ್ಯಾಕೇಜ್‌ಗಳಲ್ಲಿ ಹೊಸ ಟೆಂಡರ್‌ ಆಹ್ವಾನಿಸಲು ಕೆ–ರೈಡ್‌ ಸಿದ್ಧತೆ ಮಾಡಿಕೊಂಡಿದೆ.

ಚಿಕ್ಕಬಾಣಾವರ–ಬೆನ್ನಿಗಾನಹಳ್ಳಿ ನಡುವಿನ ಕಾರಿಡಾರ್‌–2 ಮಲ್ಲಿಗೆ ಮಾರ್ಗವನ್ನು ಕಾರ್ಯಗತಗೊಳಿಸಲು ಎಲ್‌ ಆ್ಯಂಡ್‌ ಟಿ ಕಂಪನಿಯು 2022ರಲ್ಲಿ ಗುತ್ತಿಗೆ ಪಡೆದಿತ್ತು. ಹೀಲಲಿಗೆ- ರಾಜಾನುಕುಂಟೆ ನಡುವಿನ ಕಾರಿಡಾರ್ -4 ಕನಕ ಮಾರ್ಗವನ್ನು ನಿರ್ಮಿಸಲು 2023ರಲ್ಲಿ ಗುತ್ತಿಗೆ ಪಡೆದಿತ್ತು. ಗುತ್ತಿಗೆದಾರರ ಕೋರಿಕೆಯ ಮೇರೆಗೆ ಒಪ್ಪಂದದ ಅವಧಿಯನ್ನು ಕ್ರಮವಾಗಿ ಸೆಪ್ಟೆಂಬರ್ -2026 ಮತ್ತು ಅಕ್ಟೋಬರ್ -2026 ರವರೆಗೆ ವಿಸ್ತರಿಸಲಾಗಿತ್ತು. 

ಈ ಮಧ್ಯೆ ಕಳೆದ ಮಾರ್ಚ್‌ನಲ್ಲಿ ಎಲ್‌ ಆ್ಯಂಡ್‌ ಟಿ ಕಂಪನಿಯು ಕಾಮಗಾರಿ ಸ್ಥಗಿತಗೊಳಿಸಿತ್ತು. ಗುತ್ತಿಗೆಯನ್ನು ರದ್ದುಗೊಳಿಸಬೇಕು ಎಂದು ಕೋರ್ಟ್‌ ಮೆಟ್ಟಿಲೇರಿತ್ತು.

ADVERTISEMENT

ಕೆ–ರೈಡ್‌ ಮತ್ತು ಎಲ್‌ ಆ್ಯಂಡ್‌ ಟಿ ನಡುವೆ ಮಧ್ಯಸ್ಥಿಕೆ ಪ್ರಕ್ರಿಯೆಗಳು ಕೂಡ ಪ್ರಾರಂಭವಾಗಿವೆ. ಮೂರು ಸದಸ್ಯರ  ಮಧ್ಯಸ್ಥಿಕೆ ಮಂಡಳಿಗೆ ಹೈಕೋರ್ಟ್‌, ಸುಪ್ರೀಂಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿಗಳನ್ನು ನಾಮನಿರ್ದೇಶನ ಮಾಡಲಾಗಿದೆ. ಅಲ್ಲದೇ ಕೆ–ರೈಡ್‌ ಬ್ಯಾಂಕ್ ಗ್ಯಾರಂಟಿಯನ್ನು ನಗದೀಕರಿಸಲು ವಾಣಿಜ್ಯ ನ್ಯಾಯಾಲಯ ನೀಡಿರುವ ತಡೆಯಾಜ್ಞೆಯನ್ನು ಕೂಡ ಪ್ರಶ್ನಿಸಲಾಗುತ್ತಿದೆ ಎಂದು ಕೆ–ರೈಡ್‌ ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.