ಬೆಂಗಳೂರು: ಜ್ಞಾನಭಾರತಿ ಬಳಿಯ ವರ್ತುಲ ರಸ್ತೆಯಲ್ಲಿರುವ ರಾಮಸಂದ್ರ ಸೇತುವೆ ಬಳಿ ರಸ್ತೆ ವಿಭಜಕಕ್ಕೆ ಡಿಕ್ಕಿಯಾದ ಟೆಂಪೊವೊಂದು ಎರಡು ತುಂಡಾಗಿ ಸೇತುವೆಯಿಂದ ಕೆಳಗೆ ಬಿದ್ದಿದ್ದು, ಚಾಲಕ ಸೇರಿ ಮೂವರು ತೀವ್ರವಾಗಿ ಗಾಯಗೊಂಡಿದ್ದಾರೆ.
ಬ್ಯಾಡರಹಳ್ಳಿಯಿಂದ ಕೆಂಗೇರಿ ಕಡೆಗೆ ತೆರಳುತ್ತಿದ್ದ ಬೆಡ್ಶೀಟ್, ಹತ್ತಿ ತುಂಬಿದ್ದ ಟೆಂಪೊ, ಚಾಲಕನ ನಿಯಂತ್ರಣ ತಪ್ಪಿ ರಸ್ತೆಯ ಬಲ ಭಾಗದ ವಿಭಜಕಕ್ಕೆ ಡಿಕ್ಕಿಯಾಗಿದೆ. ಅಪಘಾತದ ರಭಸಕ್ಕೆ ಟೆಂಪೊ ಕ್ಯಾಬಿನ್ ತುಂಡಾಗಿ ಸೇತುವೆಯಿಂದ ಕೆಳಗೆ ಬಿದ್ದಿದ್ದು, ಮತ್ತೊಂದು ತುಂಡು ರಸ್ತೆಯ ಮೇಲೆ ಉಳಿದುಕೊಂಡಿದೆ.
ಪರಿಣಾಮ ಚಾಲಕ ರಾಘವೇಂದ್ರ, ಜೊತೆಗಿದ್ದ ಸಲೀಂ, ಫಯಾಜ್ ಅವರಿಗೆ ಗಾಯಗಳಾಗಿವೆ. ಮೂವರನ್ನೂ ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಮುಂದುವರಿದಿದೆ ಎಂದು ಪಶ್ಚಿಮ ಸಂಚಾರ ವಿಭಾಗದ ಡಿಸಿಪಿ ಅನಿತಾ ಹದ್ದಣ್ಣವರ್ ಮಾಹಿತಿ ನೀಡಿದರು.
ಅಪಘಾತದ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಸ್ಥಳಕ್ಕೆ ಜ್ಞಾನಭಾರತಿ ಸಂಚಾರ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅಪಘಾತಕ್ಕೆ ಅತಿವೇಗವೇ ಕಾರಣ ಎಂಬುದು ಪೊಲೀಸರ ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ.
ಚಾಲಕ ರಾಘವೇಂದ್ರ ವಿರುದ್ಧ ಜ್ಞಾನಭಾರತಿ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು, ತನಿಖೆ ಕೈಗೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.