ಕರ್ನಾಟಕ ಚಿತ್ರಕಲಾ ಪರಿಷತ್ತು
ಬೆಂಗಳೂರು: ಕರ್ನಾಟಕ ಚಿತ್ರಕಲಾ ಪರಿಷತ್ತು ಆಯೋಜಿಸಿರುವ 22ನೇ ಚಿತ್ರಸಂತೆ ಜನವರಿ 5ರಂದು ಕುಮಾರಕೃಪಾ ರಸ್ತೆಯಲ್ಲಿರುವ ಪರಿಷತ್ತಿನ ಆವರಣದಲ್ಲಿ ನಡೆಯಲಿದೆ.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪರಿಷತ್ತಿನ ಅಧ್ಯಕ್ಷ ಬಿ.ಎಲ್. ಶಂಕರ್, ‘ಈ ಬಾರಿಯ ಚಿತ್ರಸಂತೆಯನ್ನು ಹೆಣ್ಣು ಮಗುವಿಗೆ ಸಮರ್ಪಣೆ ಮಾಡಲಾಗಿದೆ’ ಎಂದು ತಿಳಿಸಿದರು.
‘ಚಿತ್ರಸಂತೆಯಲ್ಲಿ ಕಲಾವಿದರ ಪ್ರತಿಭೆ ಅನಾವರಣಕ್ಕೆ ವೇದಿಕೆ ಕಲ್ಪಿಸುವ ಹಾಗೂ ಅವರು ರಚಿಸಿದ ಕಲಾಕೃತಿಗಳ ಮಾರಾಟಕ್ಕೆ ಅವಕಾಶ ಒದಗಿಸಲಾಗುತ್ತದೆ. ಕಲಾವಿದರಿಂದ ಯಾವುದೇ ರೀತಿಯ ಶುಲ್ಕವನ್ನು ಪಡೆದುಕೊಳ್ಳುವುದಿಲ್ಲ’ ಎಂದು ಮಾಹಿತಿ ನೀಡಿದರು.
‘ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಳಿಗ್ಗೆ 10.30ಕ್ಕೆ ಚಿತ್ರಸಂತೆಯನ್ನು ಉದ್ಘಾಟಿಸಲಿದ್ದಾರೆ. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕಲಾ ಪ್ರದರ್ಶನಕ್ಕೆ ಚಾಲನೆ ನೀಡಲಿದ್ದಾರೆ. ಕಾರ್ಯಕ್ರಮದ ಅಂಗವಾಗಿ ಚಿತ್ರಕಲಾ ಪರಿಷತ್ತಿನ ಗ್ಯಾಲರಿಗಳಲ್ಲಿ ಕರ್ನಾಟಕದ ಹಿರಿಯ ಕಲಾವಿದರು ರಚಿಸಿದ ಕಲಾಕೃತಿಗಳ ಪ್ರದರ್ಶನ ಇರಲಿದೆ’ ಎಂದರು.
‘ಕರ್ನಾಟಕ, ಕೇರಳ, ತಮಿಳುನಾಡು, ಆಂಧ್ರಪ್ರದೇಶ, ಗೋವಾ, ಮಹಾರಾಷ್ಟ್ರ, ತೆಲಂಗಾಣ, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ ಸೇರಿದಂತೆ ವಿವಿಧ ರಾಜ್ಯಗಳ 1,500 ಕಲಾವಿದರು ಚಿತ್ರ ಸಂತೆಯಲ್ಲಿ ಕಲಾಕೃತಿಗಳನ್ನು ಪ್ರದರ್ಶಿಸಲಿದ್ದಾರೆ. ಈ ಬಾರಿ ಚಿತ್ರಸಂತೆಯ ನೋಂದಣಿ, ಶುಲ್ಕ ಪಾವತಿ, ಕಲಾವಿದರ ಆಯ್ಕೆ, ಮಳಿಗೆಗಳ ವಿತರಣೆಯಂತಹ ಎಲ್ಲ ಪ್ರಕ್ರಿಯೆಗಳು ಆನ್‌ಲೈನ್ ಮೂಲಕ ನಡೆಯುವಂತೆ ವ್ಯವಸ್ಥೆ ಮಾಡಲಾಗಿದೆ’ ಎಂದು ಮಾಹಿತಿ ನೀಡಿದರು.
ನೇರ ಖರೀದಿಗೆ ಅವಕಾಶ: ‘ಚಿತ್ರಸಂತೆಯಲ್ಲಿ ₹ 100 ರಿಂದ ಲಕ್ಷಾಂತರ ರೂಪಾಯಿ ಮೌಲ್ಯದ ಕಲಾಕೃತಿಗಳು ಇರಲಿವೆ. ಕಲಾವಿದರಿಂದ ನೇರವಾಗಿ ಕಲಾಕೃತಿಗಳನ್ನು ಖರೀದಿಸಬಹುದು’ ಎಂದು ಬಿ.ಎಲ್. ಶಂಕರ್ ವಿವರಿಸಿದರು.
‘ಹೊರಗಿನಿಂದ ಬರುವ 400ಕ್ಕೂ ಅಧಿಕ ಕಲಾವಿದರಿಗೆ ಉಚಿತ ವಸತಿ ವ್ಯವಸ್ಥೆ ಮಾಡಲಾಗಿದೆ. ಆವರಣದ ಹೊರಗೆ ಕೆನರಾ ಬ್ಯಾಂಕ್ ಹಾಗೂ ಎಸ್‌ಬಿಐ ಬ್ಯಾಂಕ್‌ನ ಸಂಚಾರಿ ಎಟಿಎಂ ಮತ್ತು ಸ್ವೈಪಿಂಗ್ ಯಂತ್ರಗಳ ವ್ಯವಸ್ಥೆ ಮಾಡಲಾಗುವುದು’ ಎಂದು ಹೇಳಿದರು.
‘ಐದು ಕಲಾವಿದರಿಗೆ ಚಿತ್ರಕಲಾ ಸಮ್ಮಾನ್ ಪ್ರಶಸ್ತಿ’
‘ಕರ್ನಾಟಕ ಚಿತ್ರಕಲಾ ಪರಿಷತ್ತು ನೀಡುವ ಚಿತ್ರಕಲಾ ಸಮ್ಮಾನ್ ಪ್ರಶಸ್ತಿಗೆ ಕಲಾವಿದರಾದ ಎಂ.ಎಸ್. ಮೂರ್ತಿ (ಡಿ. ದೇವರಾಜು ಅರಸು ಪ್ರಶಸ್ತಿ) ಎ. ರಾಮಕೃಷ್ಣಪ್ಪ (ಕೆ.ಎಸ್. ನಾಗರತ್ಮಮ್ಮ ಪ್ರಶಸ್ತಿ) ಜಿ.ಎಲ್. ಭಟ್ (ವೈ. ಸುಬ್ರಮಣ್ಯರಾಜು ಪ್ರಶಸ್ತಿ) ಸೂರ್ಯಪ್ರಕಾಶ್ ಗೌಡ (ಎಚ್.ಕೆ. ಕೇಜ್ರಿವಾಲ್ ಪ್ರಶಸ್ತಿ) ಸಿ.ಎಸ್. ನಿರ್ಮಲಾ ಕುಮಾರಿ (ಎಂ. ಆರ್ಯಮೂರ್ತಿ ಪ್ರಶಸ್ತಿ) ಆಯ್ಕೆಯಾಗಿದ್ದಾರೆ. ಪ್ರಶಸ್ತಿ ತಲಾ ₹50 ಸಾವಿರ ನಗದು ಫಲಕ ಒಳಗೊಂಡಿದೆ. ಜ. 4ರಂದು ಸಚಿವ ಎಚ್.ಕೆ. ಪಾಟೀಲ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ’ ಎಂದು ಬಿ.ಎಲ್. ಶಂಕರ್ ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.