
ಬೆಂಗಳೂರು: ಸೈಲೆನ್ಸರ್, ಗಾಜು, ಬಣ್ಣ, ಲೈಟ್ ಮಾರ್ಪಾಡು ಮಾಡಿದ್ದ ಕಾರಿಗೆ ಯಲಹಂಕ ಪ್ರಾದೇಶಿಕ ಸಾರಿಗೆ ಕಚೇರಿ ಅಧಿಕಾರಿಗಳು ₹1,11,500 ದಂಡ ವಿಧಿಸಿದ್ದಾರೆ. ಕಾರು ಸುಮಾರು 17 ವರ್ಷಗಳಷ್ಟು ಹಳೆಯದಾಗಿದ್ದು ₹70 ಸಾವಿರ ಮೌಲ್ಯ ಎಂದು ಅಂದಾಜಿಸಲಾಗಿದೆ. ಕಾರಿನ ಮೌಲ್ಯಕ್ಕಿಂತ ದಂಡದ ಮೊತ್ತವೇ ಹೆಚ್ಚಿದೆ.
ಕೇರಳದ ಎರ್ನಾಕುಲಂ ಆರ್‌ಟಿಒ ನೋಂದಣಿ ಸಂಖ್ಯೆ (ಕೆಎಲ್7 ಎಬಿ 8764) ಹೊಂದಿರುವ ಕಾರು ಭಾರತಿ ನಗರ–ಹೆಣ್ಣೂರು ರಸ್ತೆಯಲ್ಲಿ ಕರ್ಕಶವಾಗಿ ಸದ್ದು ಮಾಡುತ್ತಾ ಸಾಗುತ್ತಿತ್ತು. ಕಿರಿಕಿರಿ ಸಹಿಸಲಾಗದ ಸಾರ್ವಜನಿಕರು ಇದರ ವಿಡಿಯೊ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಲ್ಲದೇ ಪೊಲೀಸರಿಗೆ ಮಾಹಿತಿ ನೀಡಿದ್ದರು.
ಯಲಹಂಕ ಸಂಚಾರ ಪೊಲೀಸರು ಕಾರ್ಯಾಚರಣೆ ನಡೆಸಿ ಈ ಕಾರನ್ನು ಪತ್ತೆ ಹಚ್ಚಿದರು. ಬೆಂಗಳೂರಿನಲ್ಲಿ ಓದುತ್ತಿರುವ ಕೇರಳದ ಮಹಮ್ಮದ್ ಸೈಫನ್ ಎಂಬ ವಿದ್ಯಾರ್ಥಿ ಚಲಾಯಿಸುತ್ತಿದ್ದ ಈ ಕಾರಿನ ಸೈಲೆನ್ಸರ್ ಸೇರಿದಂತೆ ಪೂರ್ಣವಾಗಿ ಮಾರ್ಪಾಡು ಆಗಿರುವುದನ್ನು ಕಂಡ ಪೊಲೀಸರು ಯಲಹಂಕ ಪ್ರಾದೇಶಿಕ ಸಾರಿಗೆ ಕಚೇರಿಗೆ ಮಾಹಿತಿ ನೀಡಿದ್ದರು.
ಸಾರಿಗೆ ಇನ್‌ಸ್ಪೆಕ್ಟರ್ ನಾಗರತ್ನ ಮತ್ತು ಸಿಬ್ಬಂದಿ ಬಂದು ಕಾರನ್ನು ವಶಕ್ಕೆ ತೆಗೆದುಕೊಂಡರು. 2007–08 ಮಾಡೆಲ್ ಕಾರು ಇದಾಗಿದ್ದು, ಕಾರಿನಲ್ಲಿ ಯಾರಿದ್ದಾರೆ ಎಂಬುದು ಗೊತ್ತಾಗದಂತೆ ಕಪ್ಪು ಗಾಜು ಅಳವಡಿಸಲಾಗಿತ್ತು. ಬಹುಬಣ್ಣದ ಕಾರನ್ನಾಗಿ ಪರಿವರ್ತಿಸಲಾಗಿತ್ತು. ಹೆಡ್‌ಲೈಟ್ ಅನ್ನು ಡಿಸ್ಕೊಲೈಟ್ ಆಗಿ ಮಾರ್ಪಾಡು ಮಾಡಲಾಗಿತ್ತು. ಮಾಲೀಕರಿಗೆ ಮೋಟಾರು ವಾಹನ ಕಾಯ್ದೆಯ 182 (1)ಎ ಸೆಕ್ಷನ್ ಪ್ರಕಾರ ದಂಡ ವಿಧಿಸಲಾಗಿದೆ.
ಕಾರಿನ ನೋಂದಣಿ ಪ್ರಮಾಣಪತ್ರವನ್ನು, ಮಹಮ್ಮದ್ ಸೈಫನ್‌ನ ಚಾಲನಾ ಪರವಾನಗಿಯನ್ನು ಅಮಾನತು ಮಾಡಲು ಸಾರಿಗೆ ಪ್ರಾಧಿಕಾರಕ್ಕೆ ಬರೆಯಲಾಗಿದೆ ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿ ಅಮರೇಶ್ ಚೆಲುವ ತಿಳಿಸಿದ್ದಾರೆ.
‘ಈ ರೀತಿ ಸೈಲೆನ್ಸರ್ ಮಾರ್ಪಾಡು ಮಾಡಿ ಕರ್ಕಶ ಸದ್ದು ಮಾಡಿಕೊಂಡು ಹೋಗುವ ಕಾರುಗಳ ಬಗ್ಗೆ ದೂರು ನೀಡಿದರೆ, ಇಲ್ಲವೇ ನಮ್ಮ ಅಧಿಕಾರಿಗಳ ಗಮನಕ್ಕೆ ಬಂದರೆ ಅಂಥ ಕಾರುಗಳ ನೋಂದಣಿ ಪ್ರಮಾಣಪತ್ರ (ಆರ್‌ಸಿ) ಹಾಗೂ ಚಾಲಕರ ಚಾಲನಾ ಪರವಾನಗಿ (ಡಿಎಲ್) ರದ್ದು ಮಾಡಲಾಗುವುದು ಎಂದು ಸಾರಿಗೆ ಹೆಚ್ಚುವರಿ ಆಯುಕ್ತ (ಪ್ರವರ್ತನ) ಸಿ. ಮಲ್ಲಿಕಾರ್ಜುನ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.