ಬೆಂಗಳೂರು: ಬಸ್ ನಿಲ್ದಾಣಗಳ ಪುನರ್ ಅಭಿವೃದ್ಧಿ, ಸಾರಿಗೆ ಹಬ್ ಮತ್ತು ವಾಣಿಜ್ಯ ಸಂಕೀರ್ಣ ನಿರ್ಮಿಸುವ ‘ಪ್ರಾಜೆಕ್ಟ್ ಮೆಜೆಸ್ಟಿಕ್’ ಯೋಜನೆಗಾಗಿ ತಾಂತ್ರಿಕ ಸಲಹೆಗಾರರನ್ನು ನೇಮಿಸಿಕೊಳ್ಳಲು ಕೆಎಸ್‌ಆರ್‌ಟಿಸಿ ನಿರ್ಧರಿಸಿದೆ. ಅವರಿಂದ ಸಲಹೆ ಪಡೆದ ಬಳಿಕ ಯೋಜನೆಯ ನೀಲನಕ್ಷೆ ತಯಾರಿ, ಟೆಂಡರ್ ಪ್ರಕ್ರಿಯೆಗಳು ನಡೆಯಲಿವೆ.
ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ(ಪಿಪಿಪಿ) ಕೆಂಪೇಗೌಡ ಬಸ್ ನಿಲ್ದಾಣದಲ್ಲಿ ‘ಪ್ರಾಜೆಕ್ಟ್ ಬೆಂಗಳೂರು’ ನಿರ್ಮಾಣಗೊಳ್ಳಲಿದ್ದು, ನಗರ ಸಾರಿಗೆ, ಅಂತರಜಿಲ್ಲಾ ಸಾರಿಗೆ, ಮೆಟ್ರೊ, ರೈಲು, ಉಪನಗರ ರೈಲುಗಳ ನಡುವೆ ಉತ್ತಮ ಸಂಪರ್ಕ ಕಲ್ಪಿಸುವ ಹಬ್ ಇದಾಗಲಿದೆ.
ಕೆಎಸ್‌ಆರ್‌ಟಿಸಿಗೆ ಸೇರಿದ 40 ಎಕರೆ ಜಮೀನು ಇಲ್ಲಿ ಇತ್ತು. ಅದರಲ್ಲಿ ಐದು ಎಕರೆಯನ್ನು ‘ನಮ್ಮ ಮೆಟ್ರೊ’ಗೆ ನೀಡಲಾಗಿದೆ. ಉಳಿದ 35 ಎಕರೆಯಲ್ಲಿ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ, ಬಿಎಂಟಿಸಿ ನಿಲ್ದಾಣ, ಕೆಎಸ್‌ಆರ್‌ಟಿಸಿ ಕಾರ್ಯಾಗಾರ, ಡಿಪೊಗಳಿವೆ. ಈ 35 ಎಕರೆಯಲ್ಲಿ ಹಬ್ ನಿರ್ಮಿಸಲು ಯೋಜಿಸಲಾಗಿದೆ.
ಪ್ರತಿದಿನ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣಕ್ಕೆ 3,000 ಬಸ್‌ಗಳು ಬಂದು ಹೋಗುತ್ತವೆ. ಬಿಎಂಟಿಸಿ ಬಸ್ ನಿಲ್ದಾಣಕ್ಕೆ ಸುಮಾರು 10,000 ಬಸ್‌ಗಳು ಬಂದು ಹೋಗುತ್ತವೆ. ಅದಕ್ಕೆ ಸರಿಯಾಗಿ ನಿಲ್ದಾಣದ ಅಭಿವೃದ್ಧಿ, ಪಕ್ಕದಲ್ಲೇ ಇರುವ ಮೆಟ್ರೊ, ರೈಲು ನಿಲ್ದಾಣಗಳನ್ನು ಸುಲಭವಾಗಿ ಸಂಪರ್ಕಿಸುವ ರೀತಿಯಲ್ಲಿ ಯೋಜನೆ ಇರಲಿದೆ. ಸಂಪರ್ಕವೂ ಸುಲಭವಾಗುವಂತೆ ಮಾಡಲಾಗುವುದು ಎಂದು ಕೆಎಸ್‌ಆರ್‌ಟಿಸಿ ಅಧಿಕಾರಿಗಳು ತಿಳಿಸಿದ್ದಾರೆ.
ನೇಮಕವಾಗಲಿರುವ ತಾಂತ್ರಿಕ ಸಲಹೆಗಾರರು ಸ್ಥಳ ಪರಿಶೀಲನೆ, ಸಂಚಾರದ ಚಟುವಟಿಕೆ ವಿಶ್ಲೇಷಣೆ, ಮಾರುಕಟ್ಟೆ ಅಗತ್ಯದ ಮುನ್ಸೂಚನೆ, ಪರಿಸರ ಹಾಗೂ ಸಾಮಾಜಿಕ ಪರಿಣಾಮಗಳ ಅಧ್ಯಯನದೊಂದಿಗೆ ಕಾರ್ಯಸಾಧ್ಯತಾ ವರದಿಯನ್ನು (ಡಿಪಿಆರ್) ಸಿದ್ಧಪಡಿಸಲಿದ್ದಾರೆ. ವಿನ್ಯಾಸ, ಅಂದಾಜು ವೆಚ್ಚಗಳೆಲ್ಲ ಅದರಲ್ಲಿ ಇರಲಿವೆ ಎಂದು ಮಾಹಿತಿ ನೀಡಿದರು.
ಶಾಪಿಂಗ್ ಕಾಂಪ್ಲೆಕ್ಸ್, ಆಹಾರ ಮಳಿಗೆಗಳು, ಕಚೇರಿ ಪ್ರದೇಶ ಒಳಗೊಂಡಂತೆ ವಾಣಿಜ್ಯ ವ್ಯವಸ್ಥೆ ಇರಲಿವೆ. ಕೆಎಸ್‌ಆರ್‌ಟಿಸಿಯ ಮೂರು ಟರ್ಮಿನಲ್‌ಗಳಲ್ಲಿ ಅಂಗವಿಕಲರು, ವೃದ್ಧರಾದಿಯಾಗಿ ಎಲ್ಲರಿಗೂ ಓಡಾಡಲು ಅನುಕೂಲವಾಗುವ ವ್ಯವಸ್ಥೆಗಳು ಇರಲಿವೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಳೆದ ಬಜೆಟ್‌ನಲ್ಲಿ ಈ ಯೋಜನೆಯನ್ನು ಪ್ರಸ್ತಾಪಿಸಿದ್ದರು. ಈ ಯೋಜನೆ ಕಾರ್ಯರೂಪಗೊಳಿಸಲು ಪ್ರಕ್ರಿಯೆಗಳು ಈಗ ಆರಂಭವಾಗಿವೆ.
ಡಿಪಿಆರ್ ಬಳಿಕ ಟೆಂಡರ್ ಆಹ್ವಾನ ಅಂತರ್ಜಾಲ ಸಂಪರ್ಕ | ಸ್ಮಾರ್ಟ್ ಟಿಕೆಟ್‌ಗೆ ಅವಕಾಶ | ಅಂಗವಿಕಲರಿಗೆ ಅನುಕೂಲವಾಗುವ ವ್ಯವಸ್ಥೆ
ಬಸ್‌ನಿಲ್ದಾಣ ಪುನರ್ ನಿರ್ಮಾಣ ಅನಿವಾರ್ಯ
ಮೆಜೆಸ್ಟಿಕ್‌ನಲ್ಲಿ ಐವತ್ತು ವರ್ಷಗಳ ಹಿಂದೆ ನಿಲ್ದಾಣ ನಿರ್ಮಾಣವಾಗಿತ್ತು. ಈಗ ದಟ್ಟಣೆ ಹೆಚ್ಚಾಗಿದೆ. ಅದಕ್ಕೆ ತಕ್ಕಂತೆ ಮೇಲ್ದರ್ಜೆಗೆ ಏರಿಸುವುದು ಅನಿವಾರ್ಯ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು. ‘ಅದಕ್ಕಾಗಿ ತಾಂತ್ರಿಕ ಸಲಹೆಗಾರರನ್ನು ನೇಮಿಸಿಕೊಳ್ಳಲು ಟೆಂಡರ್ ಕರೆಯಲಾಗಿದೆ. ಮೆಜೆಸ್ಟಿಕ್‌ನಲ್ಲಿ ಏನೆಲ್ಲ ಇರಬೇಕು ಎಂಬುದನ್ನು ನಾವು ಅವರಿಗೆ ತಿಳಿಸುತ್ತೇವೆ. ಯಾವ ರೀತಿ ಇರಬೇಕು ಎಂಬುದರ ವಿನ್ಯಾಸ ಸಲಹೆಗಳನ್ನು ಅವರು ನೀಡಲಿದ್ದಾರೆ. ಮೂರ್ನಾಲ್ಕು ತಿಂಗಳಲ್ಲಿ ವಿಸ್ತೃತ ಯೋಜನಾ ವರದಿಯನ್ನು ತಯಾರು ಮಾಡಲಾಗುವುದು. ಬಳಿಕ ಕಾಮಗಾರಿಗೆ ಸಂಬಂಧಿಸಿದ ಟೆಂಡರ್ ಕರೆಯಲಾಗುವುದು’ ಎಂದು ಅವರು ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.