ADVERTISEMENT

ಸುರಂಗ ರಸ್ತೆ | ಅನುಮಾನಗಳಿಗೆ ಉತ್ತರ ಕೊಡಿ: ಎಸ್‌.ಆರ್‌.ವಿಶ್ವನಾಥ್‌ ಆಗ್ರಹ

ಡಿ.ಕೆ.ಶಿವಕುಮಾರ್‌ಗೆ ಎಸ್‌.ಆರ್‌.ವಿಶ್ವನಾಥ್‌ ಆಗ್ರಹ

​ಪ್ರಜಾವಾಣಿ ವಾರ್ತೆ
Published 4 ನವೆಂಬರ್ 2025, 15:33 IST
Last Updated 4 ನವೆಂಬರ್ 2025, 15:33 IST
ಎಸ್‌.ಆರ್‌.ವಿಶ್ವನಾಥ್‌ 
ಎಸ್‌.ಆರ್‌.ವಿಶ್ವನಾಥ್‌    

ಬೆಂಗಳೂರು: ‘ನಗರದಲ್ಲಿ ಸುರಂಗ ರಸ್ತೆ ನಿರ್ಮಾಣ ಮಾಡುವ ಕುರಿತು ಸರ್ಕಾರ ಜನಾಭಿಪ್ರಾಯ ಕೇಳಿಲ್ಲ, ತಜ್ಞರ ವರದಿ ಪಡೆದಿಲ್ಲ, ಮಣ್ಣಿನ ಪರೀಕ್ಷೆ ನಡೆಸಿಲ್ಲ, ತರಾತುರಿಯಲ್ಲಿ ಟೆಂಡರ್‌ ಕರೆದಿದ್ದಾರೆ. ಶಾಸಕರು, ತಜ್ಞರಿಗೆ ಪ್ರಾತ್ಯಕ್ಷಿಕೆ ತೋರಿಸಿ ಎಲ್ಲ ಅನುಮಾನಗಳನ್ನು ಬಗೆಹರಿಸಬೇಕಿತ್ತು’ ಎಂದು ಬಿಜೆಪಿ ಶಾಸಕ ಎಸ್‌.ಆರ್‌.ವಿಶ್ವನಾಥ್‌ ಹೇಳಿದ್ದಾರೆ.

‘ಯಾರ ಮಾತು ಕೇಳದೇ ಯೋಜನೆ ಮಾಡೇ ತೀರುತ್ತೇವೆ ಎಂದು ಹಟ ಹಿಡಿದು ಹೊರಟರೆ ಸಹಜವಾಗಿ ವಿರೋಧಿಸುತ್ತೇವೆ’ ಎಂದು ಅವರು ಸುದ್ದಿಗಾರರ ಜತೆ ಮಾತನಾಡಿ ತಿಳಿಸಿದರು.

‘ನಮ್ಮ ಪಕ್ಷದ ಮುಖಂಡರು ಕೆಲವು ವೈಜ್ಞಾನಿಕ ಅಂಶಗಳನ್ನು ಮುಂದಿಟ್ಟುಕೊಂಡು ಪ್ರಶ್ನಿಸಿದ್ದಾರೆ. ಸುರಂಗ ರಸ್ತೆ ಕನಿಷ್ಠ 60 ಅಡಿ ಆಳದಲ್ಲಿ ನಿರ್ಮಿಸಬೇಕಾಗುತ್ತದೆ. ಎಲ್ಲಿ ಗಟ್ಟಿ ಬಂಡೆ, ಮಣ್ಣು ಇದೆ. ಮೃದು ಬಂಡೆಗಳು ಎಲ್ಲೆಲ್ಲಿವೆ? ನೀರಿನ ಹರಿವು ಇದೆಯೇ? ಕಟ್ಟಡಗಳು ಸುರಕ್ಷಿತವಾಗಿರುತ್ತವೆಯೇ ಎಂಬುದನ್ನು ಪರಿಶೀಲನೆ ಮಾಡದೇ ಒಪ್ಪಿಗೆ ನೀಡಿರುವುದು ಅವ್ಯವಹಾರದ ಬಗ್ಗೆ ಸಂಶಯ ಮೂಡುವಂತೆ ಮಾಡಿದೆ’ ಎಂದು ಅವರು ದೂರಿದರು.

ADVERTISEMENT

‘ಬೆಂಗಳೂರಿನಲ್ಲಿ ಅಭಿವೃದ್ಧಿಗೆ ನಾವು ವಿರೋಧ ಮಾಡುತ್ತಿಲ್ಲ. ಪ್ರಶ್ನೆಗಳನ್ನು ಕೇಳಿದರೆ ಹರಿಹಾಯುತ್ತೀರಿ. ತೇಜಸ್ವಿ ಸೂರ್ಯ ಅತಿ ಹೆಚ್ಚು ಮತಗಳನ್ನು ಗಳಿಸಿ ಎರಡು ಬಾರಿ ಸಂಸದರಾಗಿದ್ದಾರೆ. ಸಂಸತ್ತಿನ ವಿವಿಧ ಸಮಿತಿಗಳಲ್ಲಿ ಸದಸ್ಯರಾಗಿದ್ದಾರೆ. ಅವರು ಎಳಸಾಗಿದ್ದರೆ ಅಲ್ಲಿಯವರೆಗೆ ಹೋಗಲು ಸಾಧ್ಯವಿತ್ತೇ? ಡಿ.ಕೆ.ಶಿವಕುಮಾರ್‌ ಕೂಡಾ ರಾಜಕೀಯದಲ್ಲಿ ಎಳಸಾಗಿಯೇ ಬಂದವರು. ಮೊದಲಿಗೆ ಜೈಲು ಮಂತ್ರಿಯಾಗಿದ್ದರು’ ಎಂದು ವಿಶ್ವನಾಥ್‌ ಹೇಳಿದರು.

‘ಬೆಂಗಳೂರಿನ ರಸ್ತೆ ಗುಂಡಿಗಳು ಅಂತರರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿವೆ. ರಸ್ತೆ ಗುಂಡಿ, ಕಸದ ಸಮಸ್ಯೆ, ಬೀದಿ ನಾಯಿ ಸಮಸ್ಯೆಗಳನ್ನು ಬಗೆಹರಿಸಿ. ಕೊಟ್ಟ ಸಲಹೆಗಳ ವಿರುದ್ಧ ಮಾತನಾಡುವುದು ಸರಿಯಲ್ಲ. ಅದು ನಿಮ್ಮ ಘನತೆಗೆ ತಕ್ಕುದಲ್ಲ’ ಎಂದು ಅವರು ಶಿವಕುಮಾರ್ ಅವರನ್ನು ಉದ್ದೇಶಿಸಿ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.