ADVERTISEMENT

ಗುಂಡಿ ಮುಚ್ಚಲು ಹಣವಿಲ್ಲ, ಸುರಂಗ ರಸ್ತೆಗೆ ಮಣೆ: ಸರ್ಕಾರದ ವಿರುದ್ಧ ಸಂಸದ ಮೋಹನ್

​ಪ್ರಜಾವಾಣಿ ವಾರ್ತೆ
Published 13 ನವೆಂಬರ್ 2025, 14:12 IST
Last Updated 13 ನವೆಂಬರ್ 2025, 14:12 IST
ಪಿ.ಸಿ.ಮೋಹನ್‌
ಪಿ.ಸಿ.ಮೋಹನ್‌   

ಬೆಂಗಳೂರು: ‘ಬೆಂಗಳೂರಿನ ರಸ್ತೆಗಳ ಗುಂಡಿಗಳನ್ನು ಮುಚ್ಚುವುದಕ್ಕೇ ರಾಜ್ಯ ಸರ್ಕಾರದ ಬಳಿ ಹಣವಿಲ್ಲ. ಆದರೂ ಹತ್ತಾರು ಸಾವಿರ ಕೋಟಿ ರೂಪಾಯಿ ವೆಚ್ಚದಲ್ಲಿ ಸುರಂಗ ರಸ್ತೆ ನಿರ್ಮಿಸಲು ಮುಂದಾಗಿದೆ. ಇದು ಭಂಡತನದ ನಿರ್ಧಾರ’ ಎಂದು ಬಿಜೆಪಿ ಸಂಸದ ಪಿ.ಸಿ.ಮೋಹನ್ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಗುರುವಾರ ಮಾತನಾಡಿದ ಅವರು, ‘ಈ ಸುರಂಗ ರಸ್ತೆಯಿಂದ ಯಾರಿಗೂ ಅನುಕೂಲ ಇಲ್ಲ. ಅನನುಕೂಲವೇ ಹೆಚ್ಚು. ಸಂಚಾರ ದಟ್ಟಣೆ ಇಲ್ಲದೇ ಇರುವ ಸ್ಥಳಗಳಲ್ಲೂ, ದಟ್ಟಣೆ ಹೆಚ್ಚಾಗಲು ಈ ಸುರಂಗ ರಸ್ತೆ ಕಾರಣವಾಗಲಿದೆ’ ಎಂದರು.

‘ಸಿಲ್ಕ್‌ ಬೋರ್ಡ್‌ ಬಳಿ ಸುರಂಗ ಆರಂಭವಾಗುತ್ತದೆ ಎಂದು ಹೇಳುತ್ತಿದ್ದಾರೆ. ಆದರೆ ವಾಸ್ತವದಲ್ಲಿ ಸಿಲ್ಕ್‌ ಬೋರ್ಡ್‌ನಿಂದ 1 ಕಿ.ಮೀ. ದೂರದಲ್ಲಿ ಸುರಂಗ ಆರಂಭವಾಗಲಿದೆ. ಮಡಿವಾಳದ ಸೇಂಟ್‌ ಜಾನ್ಸ್‌ ಆಸ್ಪತ್ರೆ ಬಳಿ ಪ್ರವೇಶ ಮತ್ತು ನಿರ್ಗಮನ ರ‍್ಯಾಂಪ್‌ ನಿರ್ಮಿಸಲಾಗುತ್ತಿದೆ. ಇದರಿಂದ ಸಿಲ್ಕ್‌ ಬೋರ್ಡ್‌ ವೃತ್ತದ ಬಳಿ ಸಂಚಾರ ದಟ್ಟಣೆ ವಿಪರೀತ ಹೆಚ್ಚಾಗಲಿದೆ’ ಎಂದು ವಿವರಿಸಿದರು.

ADVERTISEMENT

‘ಕೆ.ಆರ್‌.ವೃತ್ತ, ಲಾಲ್‌ಬಾಗ್‌, ರೇಸ್‌ಕೋರ್ಸ್‌, ಮೇಖ್ರಿ ವೃತ್ತಗಳ ಬಳಿ ನಿರ್ಗಮನ ಮತ್ತು ಪ್ರವೇಶ ರ‍್ಯಾಂಪ್‌ ನಿರ್ಮಿಸುತ್ತಿದ್ದಾರೆ. ಈ ವೃತ್ತಗಳ ಬಳಿ ಈಗಾಗಲೇ ವಿಪರೀತ ಎನಿಸುವಷ್ಟು ಸಂಚಾರ ದಟ್ಟಣೆ ಇದೆ. ಅದು ಇನ್ನಷ್ಟು ಹೆಚ್ಚಾಗಲಿದೆ. ಕೆಲವೆಡೆ ವಸತಿ ಪ್ರದೇಶಗಳ ಬಳಿ ಈ ರ‍್ಯಾಂಪ್‌ ನಿರ್ಮಿಸಲಾಗುತ್ತದೆ. ವಸತಿ ಕಟ್ಟಡಗಳಿಗೆ ಇದರಿಂದ ಹಾನಿಯಾಗಲಿದೆ’ ಎಂದು ಕಳವಳ ವ್ಯಕ್ತಪಡಿಸಿದರು.

‘ವೈಜ್ಞಾನಿಕ ಅಧ್ಯಯನ ನಡೆಸದೆ, ಕಪ್ಪು ಪಟ್ಟಿಯಲ್ಲಿ ಇರುವ ಆಲ್ಟಿನಾಕ್ ಕನ್ಸಲ್ಟೆಂಟ್ ಮತ್ತು ರಾಡಿಕ್ ಕನ್ಸಲ್ಟೆಂಟ್ ಕಂಪನಿಗಳ ಮೂಲಕ ವಿಸ್ತೃತ ಯೋಜನಾ ವರದಿ (ಡಿಪಿಆರ್‌) ಹಾಗೂ ಕಾರ್ಯಸಾಧ್ಯತಾ ವರದಿ ತಯಾರಿಸಲಾಗಿದೆ. ಈ ಕಾರಣದಿಂದಲೇ ಅತ್ಯಂತ ಅವೈಜ್ಞಾನಿಕವಾಗಿ ಸುರಂಗ ರಸ್ತೆಯ ವಿನ್ಯಾಸ ಮಾಡಲಾಗಿದೆ. ಡಿಪಿಆರ್‌ ಮಾಡಿದವರು, ನೀಲನಕ್ಷೆ ತಯಾರಿಸಿದವರು ಎಲ್ಲರೂ ಡಿ.ಕೆ.ಶಿವಕುಮಾರ್ ಅವರ ತಾಳಕ್ಕೆ ತಕ್ಕಂತೆ ಕುಣಿದಿದ್ದಾರೆ. ಈ ಯೋಜನೆ ಸಂಪೂರ್ಣ ವಿಫಲವಾಗಲಿದೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

‘ರಾಷ್ಟ್ರ ಮಟ್ಟದಲ್ಲಿ ಮಾನ್ಯತೆ ಇರುವ ಭಾರತೀಯ ವಿಜ್ಞಾನ ಸಂಸ್ಥೆ, ಐಐಟಿಯಂತಹ ಸಂಸ್ಥೆಗಳ ಮೂಲಕ ತಾಂತ್ರಿಕ ಅಧ್ಯಯನ ಮಾಡಿಸಬೇಕಿತ್ತು. ಅಂತಹ ಸಂಸ್ಥೆಗಳು ಡಿ.ಕೆ.ಶಿವಕುಮಾರ್ ಅಥವಾ ಸರ್ಕಾರದ ತಾಳಕ್ಕೆ ತಕ್ಕಂತೆ ಕುಣಿಯುವುದಿಲ್ಲ. ಹೀಗಾಗಿ ಜನರಿಗೆ ಉಪಯೋಗ ಆಗುವಂತಹ ಯೋಜನೆ ರೂಪಿಸಬಹುದಿತ್ತು. ಆದರೆ, ಸರ್ಕಾರವು ಜನರ ಹಣ ಲೂಟಿ ಹೊಡೆಯಲು ತರಾತುರಿಯಲ್ಲಿ ಸುರಂಗ ತೋಡಲು ಮುಂದಾಗಿದೆ’ ಎಂದರು.

ಪತ್ರಿಕಾಗೋಷ್ಠಿಯಲ್ಲಿ ರಂಗಪ್ಪ, ಪ್ರಕಾಶ್ ಶೇಷರಾಘವಾಚಾರ್, ಬಿಜೆಪಿ ಬೆಂಗಳೂರು ಕೇಂದ್ರ ಜಿಲ್ಲಾ ಘಟಕದ ಅಧ್ಯಕ್ಷ ಸಪ್ತಗಿರಿ ಗೌಡ ಉಪಸ್ಥಿತರಿದ್ದರು.

ಹೊಸೂರು ರಸ್ತೆ ಕನಕಪುರ ರಸ್ತೆ ಮೈಸೂರು ರಸ್ತೆ ಮಾಗಡಿ ರಸ್ತೆ ಮತ್ತು ತುಮಕೂರು ರಸ್ತೆಗಳ ಮಧ್ಯೆ ಸಂಪರ್ಕಕ್ಕೆ ಈಗಾಗಲೇ ನೈಸ್‌ ರಸ್ತೆ ಇದೆ. ಹೀಗಿರುವಾಗ ಸುರಂಗ ರಸ್ತೆಯ ಅವಶ್ಯಕತೆ ಏನಿದೆ?
–ಪಿ.ಸಿ.ಮೋಹನ್‌, ಬಿಜೆಪಿ ಸಂಸದ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.