
ಸುರಂಗ ರಸ್ತೆಯ ಪ್ರತಿ 500 ಮೀಟರ್ ಅಂತರದಲ್ಲಿ ನಿರ್ಮಾಣವಾಗಲಿರುವ ‘ಟನಲ್ ಕ್ರಾಸ್ ಪ್ಯಾಸೇಜ್’
ಬೆಂಗಳೂರು: ಹೆಬ್ಬಾಳ ಜಂಕ್ಷನ್‌ನಿಂದ ಸಿಲ್ಕ್ ಬೋರ್ಡ್‌ವರೆಗಿನ ಸುರಂಗ ರಸ್ತೆ ಯೋಜನೆಯ ಟೆಂಡರ್‌ನಲ್ಲಿ ಪ್ರಮುಖ ಮೂಲಸೌಕರ್ಯ ಕಂಪನಿಗಳಾದ ಅದಾನಿ ಗ್ರೂಪ್, ದಿಲಿಪ್ ಬಿಲ್ಡ್‌ಕಾನ್, ವಿಶ್ವ ಸಮುದ್ರ ಎಂಜಿನಿಯರಿಂಗ್, ರೈಲ್ ವಿಕಾಸ್ ನಿಗಮ್ ಲಿಮಿಟೆಡ್ (ಆರ್‌ವಿಎನ್‌ಎಲ್) ಬಿಡ್ ಸಲ್ಲಿಸಿವೆ.
16.74 ಕಿ.ಮೀ ಉದ್ದದ ₹17,800 ಕೋಟಿ ವೆಚ್ಚದ ಸುರಂಗ ರಸ್ತೆಗೆ ಬಿಜೆಪಿ ನಾಯಕರ ವಿರೋಧದ ನಡುವೆಯೂ ಅಗ್ರ ಸಾಲಿನಲ್ಲಿರುವ ಸಂಸ್ಥೆಗಳು ಆಸಕ್ತಿ ತೋರಿವೆ.
ಬೆಂಗಳೂರು ಸ್ಮಾರ್ಟ್ ಇನ್‌ಫ್ರಾಸ್ಟ್ರಕ್ಚರ್ ನಿಯಮಿತ (ಬಿ–ಸ್ಮೈಲ್) ನಾಲ್ಕು ಬಾರಿ ಟೆಂಡರ್ ಅವಧಿಯನ್ನು ವಿಸ್ತರಿಸಿತ್ತು. ನಾಲ್ಕು ಸಂಸ್ಥೆಗಳು ನವೆಂಬರ್ 11ರ ಗಡುವಿನ ಒಳಗೆ ಬಿಡ್ ಸಲ್ಲಿಸಿವೆ ಎಂದು ಅಧಿಕಾರಿಗಳು ತಿಳಿಸಿದರು.
ಹಿಮಾಲಯದಲ್ಲಿ 200 ಕಿ.ಮೀ ಸುರಂಗ ರಸ್ತೆಯನ್ನು ನಿರ್ಮಿಸಿ ಅನುಭವ ಹೊಂದಿರುವ ಸರ್ಕಾರಿ ಸ್ವಾಮ್ಯದ ಆರ್‌ವಿಎನ್‌ಎಲ್, ಬೃಹತ್ ಹೆದ್ದಾರಿ ಯೋಜನೆಗಳನ್ನು ನಿರ್ವಹಿಸಿರುವ ಅದಾನಿ ಗ್ರೂಪ್ ಮತ್ತು ರಸ್ತೆ ನಿರ್ಮಾಣ ವಲಯದಲ್ಲಿ ದೀರ್ಘ ಕಾಲದಿಂದ ಹೆಸರುವಾಸಿಯಾಗಿರುವ ದಿಲಿಪ್ ಬಿಲ್ಡ್‌ಕಾನ್ ಬಿಡ್ ಸಲ್ಲಿಸಿವೆ.
ಬಿಡ್ ಪ್ರಕ್ರಿಯೆಯಲ್ಲಿ ಕಂಪನಿಗಳು ಗಂಭೀರವಾಗಿ ಭಾಗವಹಿಸಿದ್ದು, ₹44 ಕೋಟಿ ಬ್ಯಾಂಕ್ ಖಾತರಿಯನ್ನೂ ನೀಡಿವೆ. ಹೆಬ್ಬಾಳದಿಂದ ಶೇಷಾದ್ರಿ ರಸ್ತೆ, ಶೇಷಾದ್ರಿ ರಸ್ತೆಯಿಂದ ಸೆಂಟ್ರಲ್ ಸಿಲ್ಕ್ ಬೋರ್ಡ್‌ವರೆಗೆ ಎರಡು ಪ್ಯಾಕೇಜ್‌ಗಳಲ್ಲಿ ಬಿ–ಸ್ಮೈಲ್ ಜುಲೈನಲ್ಲಿ ಟೆಂಡರ್ ಆಹ್ವಾನಿಸಿತ್ತು.
ಸುರಂಗ ರಸ್ತೆ ಸಾರ್ವಜನಿಕ–ಖಾಸಗಿ ಸಹಭಾಗಿತ್ವ (ಪಿಪಿಪಿ) ಮಾದರಿಯದ್ದಾಗಿದ್ದು, ಸರ್ಕಾರ ಶೇ 40ರಷ್ಟು ಹಣವನ್ನು ಒದಗಿಸುತ್ತದೆ. ಉಳಿದ ಸುಮಾರು ₹10 ಸಾವಿರ ಕೋಟಿಯನ್ನು ಗುತ್ತಿಗೆ ಪಡೆದ ಕಂಪನಿ ಭರಿಸುತ್ತದೆ. 30 ವರ್ಷದ ಅವಧಿಗೆ ಶುಲ್ಕ ಸಂಗ್ರಹಿಸುವ ಷರತ್ತು ಇದ್ದು, ಅದನ್ನು ಇನ್ನೂ 10 ವರ್ಷ ವಿಸ್ತರಿಸಲು ಅವಕಾಶವಿದೆ. ಆರು ಎಕರೆ ಪ್ರದೇಶದಲ್ಲಿ ವಾಣಿಜ್ಯ ಚಟುವಟಿಕೆಗಳನ್ನು ನಡೆಸಬಹುದಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.