ADVERTISEMENT

ಬೆಂಗಳೂರು: ಹೆಬ್ಬಾಳ-ಸಿಲ್ಕ್‌ ಬೋರ್ಡ್‌ ಜಂಕ್ಷನ್‌ ಅವಳಿ ಸುರಂಗ ರಸ್ತೆಗೆ ಟೆಂಡರ್‌

ನಿರ್ಮಾಣ ಅವಧಿ 50 ತಿಂಗಳು; 34 ವರ್ಷ ನಿರ್ವಹಣೆ ಗುತ್ತಿಗೆ

​ಪ್ರಜಾವಾಣಿ ವಾರ್ತೆ
Published 16 ಜುಲೈ 2025, 0:15 IST
Last Updated 16 ಜುಲೈ 2025, 0:15 IST
‘ಅವಳಿ ಸುರಂಗ ರಸ್ತೆ’ ಮಾದರಿ
‘ಅವಳಿ ಸುರಂಗ ರಸ್ತೆ’ ಮಾದರಿ   

ಬೆಂಗಳೂರು: ಹೆಬ್ಬಾಳ ಜಂಕ್ಷನ್‌ನಿಂದ ಸಿಲ್ಕ್‌ ಬೋರ್ಡ್‌ ಜಂಕ್ಷನ್‌ವರೆಗೆ (ಉತ್ತರ–ದಕ್ಷಿಣ ಕಾರಿಡಾರ್) ಮೂರು ಪಥಗಳ ಅವಳಿ ಸುರಂಗ ರಸ್ತೆ (ಟ್ವಿನ್‌ ಟನಲ್‌) ನಿರ್ಮಾಣಕ್ಕೆ ₹17,698 ಕೋಟಿ ಅಂದಾಜು ವೆಚ್ಚದಲ್ಲಿ ಟೆಂಡರ್‌ ಆಹ್ವಾನಿಸಲಾಗಿದೆ.

ನಗರದ ಬೃಹತ್‌ ಮೂಲಸೌಕರ್ಯಗಳ ಅಭಿವೃದ್ಧಿಗೆ ರಚಿಸಲಾಗಿರುವ ವಿಶೇಷ ಉದ್ದೇಶದ ಸಂಸ್ಥೆ (ಎಸ್‌ಪಿವಿ)– ‘ಬೆಂಗಳೂರು ಸ್ಮಾರ್ಟ್‌ ಇನ್‌ಫ್ರಾಸ್ಟ್ರಕ್ಚರ್‌ ಲಿಮಿಟೆಡ್‌ ಸಂಸ್ಥೆ’ (ಬಿ–ಸ್ಮೈಲ್‌) ವತಿಯಿಂದ ಎರಡು ಪ್ಯಾಕೇಜ್‌ಗಳಲ್ಲಿ ‘ನಿರ್ಮಾಣ– ಕಾರ್ಯಾಚರಣೆ– ವರ್ಗಾವಣೆ’ (ಬೂಟ್‌) ಮಾದರಿಯಲ್ಲಿ ಟೆಂಡರ್ ಕರೆಯಲಾಗಿದೆ. 

ಅವಳಿ ಸುರಂಗ ರಸ್ತೆಯ ಜೊತೆಗೆ ಮೂರು ಪಥ ಅಥವಾ ಎರಡು ಪಥದ ಪ್ರವೇಶ ನಿರ್ಗಮನದ ರ್‍ಯಾಂಪ್‌ಗಳನ್ನು ನಿರ್ಮಿಸಿ, ಕಾರ್ಯಾಚರಣೆ ಮಾಡಿ, ನಿರ್ವಹಣೆ ಮಾಡಲು ಟೆಂಡರ್‌ ಆಹ್ವಾನಿಸಲಾಗಿದೆ. ಸೆಪ್ಟೆಂಬರ್‌ 3ರಂದು ಬಿಡ್‌ ಸಲ್ಲಿಸಲು ಅಂತಿಮ ದಿನವಾಗಿದ್ದು, 4ರಂದು ಆರ್ಥಿಕ ಬಿಡ್‌ ತೆರೆಯಲಾಗುತ್ತದೆ.

ADVERTISEMENT

ಬಿಬಿಎಂಪಿ, ಬಿ–ಸ್ಮೈಲ್‌ ನೋಂದಣಿಯಾಗಿರುವ ಗುತ್ತಿಗೆದಾರರು ಅಥವಾ ಕೇಂದ್ರ ಲೋಕೋಪಯೋಗಿ, ರಾಜ್ಯ ಲೋಕೋಪಯೋಗಿ ಇಲಾಖೆ, ರೈಲ್ವೆ, ರಾಷ್ಟ್ರೀಯ ಹೆದ್ದಾರಿಗಳಲ್ಲಿ ನೋಂದಣಿಯಾಗಿರುವ ಗುತ್ತಿಗೆದಾರರು ಬಿಡ್‌ ಸಲ್ಲಿಸಲು ಅರ್ಹರಾಗಿರುತ್ತಾರೆ. ಜಂಟಿ ಸಂಸ್ಥೆಗಳಾಗಿ ಅಥವಾ ಒಕ್ಕೂಟಗಳಾಗಿಯೂ ಬಿಡ್‌ ಸಲ್ಲಿಬಹುದಾಗಿದೆ ಎಂದು ಟೆಂಡರ್ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

‘ಯಾವುದೇ ಕಾರಣವನ್ನು ನೀಡದೆ ಎಲ್ಲ ಅಥವಾ ಯಾವುದೇ ಬಿಡ್‌ ಅನ್ನು ಒಪ್ಪಿಕೊಳ್ಳುವ ಇಲ್ಲವೇ ತಿರಸ್ಕರಿಸುವ ಹಕ್ಕನ್ನು ಬಿ–ಸ್ಮೈಲ್‌ ಕಾಯ್ದಿರಿಸಿಕೊಂಡಿದೆ’ ಎಂದು ಸ್ಪಷ್ಟಪಡಿಸಲಾಗಿದೆ.

ಅವಳಿ ಸುರಂಗ ರಸ್ತೆಯನ್ನು ಬೂಟ್‌ ಆಧಾರದಲ್ಲಿ ನಿರ್ಮಿಸಲು ಜೂನ್ 5ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.