ಬೆಂಗಳೂರು: ಬೆಂಗಳೂರು ನಗರ ವಿಶ್ವವಿದ್ಯಾನಿಲಯವು ವಿವಿಧ ವೃತ್ತಿಪರ ತರಬೇತಿ ಸಂಸ್ಥೆಗಳ ಸಹಯೋಗದಲ್ಲಿ ಶುಕ್ರವಾರ ಆಯೋಜಿಸಿದ್ದ ಉದ್ಯೋಗ ಮೇಳದಲ್ಲಿ 95 ಕಂಪನಿಗಳು ನಾಲ್ಕು ಸಾವಿರ ಆಕಾಂಕ್ಷಿಗಳ ಸಂದರ್ಶನ ನಡೆಸಲಾಯಿತು.
ವಿಶ್ವವಿದ್ಯಾಲಯದ ಪ್ರಭಾರ ಕುಲಪತಿ ಕೆ.ಆರ್. ಜಲಜಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ‘ಪಠ್ಯಕ್ರಮ ಬೋಧನೆಯ ಜೊತೆಗೆ ಕೈಗಾರಿಕಾ ಸಂಸ್ಥೆಗಳ ಸಹಕಾರದಿಂದ ಕೌಶಲ ಅಭಿವೃದ್ಧಿ ಮತ್ತು ತರಬೇತಿ ನೀಡುವ ಮೂಲಕ ವಿದ್ಯಾರ್ಥಿಗಳನ್ನು ವೃತ್ತಿರಂಗ ಪ್ರವೇಶಕ್ಕೆ ಸಜ್ಜುಗೊಳಿಸಲಾಗುತ್ತಿದೆ’ ಎಂದು ಹೇಳಿದರು.
ಕುಲಸಚಿವ ಬಿ. ರಮೇಶ್ ಮಾತನಾಡಿ, ‘ಬೆಂಗಳೂರು ನಗರ ವಿಶ್ವವಿದ್ಯಾಲಯದ ಜ್ಞಾನಜ್ಯೋತಿ ಕ್ಯಾಂಪಸ್ ಮಾತ್ರವಲ್ಲದೆ ಸಂಯೋಜಿತ ಕಾಲೇಜುಗಳ ವಿದ್ಯಾರ್ಥಿಗಳಿಗೂ ಉದ್ಯೋಗ ಮೇಳದಲ್ಲಿ ಪಾಲ್ಗೊಳ್ಳಲು ಅವಕಾಶ ಕಲ್ಪಿಸಲಾಗಿದೆ’ ಎಂದು ಮಾಹಿತಿ ನೀಡಿದರು.
ಉದ್ಯೋಗ ಮೇಳದ ಸಂಯೋಜಕರಾದ ತಾಂಡವಗೌಡ, ರಿತಿಕಾ ಸಿನ್ಹಾ, ಬಿಸಿಯು ವಿತ್ತಾಧಿಕಾರಿ ಎಂ.ವಿ.ವಿಜಯಲಕ್ಷ್ಮಿ, ಸಿಂಡಿಕೇಟ್ ಸದಸ್ಯರಾದ ಬಿ.ಆರ್. ಸುಪ್ರೀತ್, ಕೆ.ಪಿ. ಪಾಟೀಲ್, ಎಚ್. ಕೃಷ್ಣರಾಮ್, ವಿ.ಎನ್. ಶಿಲ್ಪಶ್ರೀ, ಪಿ.ಆರ್. ಚೇತನ, ಎಜು ಫ್ಯಾಕ್ಟರಿ ನಿರ್ದೇಶಕ ಪಿ. ನವೀನ್, ರೋಟರಿ ಪ್ರತಿನಿಧಿ ಯೋಗೀಶ್, ಡೆವಲಪ್ ಸಂಸ್ಥೆಯ ಸಂಜಯ್ ಹಾಗೂ ಕ್ವೆಸ್ ಸಂಸ್ಥೆಯ ಜೇಕಬ್ ಮ್ಯಾಥ್ಯೂ ಉಪಸ್ಥಿತರಿದ್ದರು.
ವಿಚಾರ ಸಂಕಿರಣ
ಬೆಂಗಳೂರು ನಗರ ವಿಶ್ವವಿದ್ಯಾಲಯದ ಜಾಗತಿಕ ಭಾಷಾ ಕೇಂದ್ರದ 40ನೇ ವಾರ್ಷಿಕೋತ್ಸವದ ಅಂಗವಾಗಿ ‘ವಿದೇಶಿ ಭಾಷಾ ಕಲಿಕೆಯಲ್ಲಿ ನವೀನ ಬೋಧನಾ ವಿಧಾನಗಳು’ ಕುರಿತು ವಿಚಾರ ಸಂಕಿರಣ ನಡೆಯಿತು.
ಜ್ಯೋತಿ ವೆಂಕಟೇಶ್ ಸಂತಾನ ಕೃಷ್ಣನ್ ಸುಜಾತಾ ಅವರ ಸಹಯೋಗದಲ್ಲಿ ರಚನೆಯಾದ ಫ್ರೆಂಚ್ ಭಾಷೆಯ ಪಠ್ಯಪುಸ್ತಕಗಳು ಮತ್ತು ಜೊನಾಥನ್ ಹೆರ್ನಾಂಡೆಜ್ ಕ್ಯಾಸ್ಟಿಲ್ಲೊ ಬರೆದ ಸ್ಪ್ಯಾನಿಷ್ ಪಠ್ಯಪುಸ್ತಕವನ್ನು ಈ ಸಂದರ್ಭದಲ್ಲಿ ಜನಾರ್ಪಣೆಗೊಳಿಸಲಾಯಿತು. ಕರ್ನಾಟಕ ಉನ್ನತ ಶಿಕ್ಷಣ ಮಂಡಳಿಯ ಉಪಾಧ್ಯಕ್ಷ ಎಸ್.ಆರ್. ನಿರಂಜನ್ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ನಿವೃತ್ತ ಕುಲಪತಿ ಲಿಂಗರಾಜ್ ಗಾಂಧಿ ಪ್ರಭಾರ ಕುಲಪತಿ ಕೆ.ಆರ್. ಜಲಜಾಕುಲಸಚಿವ ಬಿ. ರಮೇಶ್ ಹಣಕಾಸು ಅಧಿಕಾರಿ ವಿಜಯಲಕ್ಷ್ಮಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.