ADVERTISEMENT

ಬೆಂಗಳೂರು: ಕಳ್ಳತನದ ಬಳಿಕ ಹರಕೆ ತೀರಿಸಿದ್ದ ಆರೋಪಿಗಳು

ಉದ್ಯಮಿಯ ವಿಲ್ಲಾದಲ್ಲಿ ಚಿನ್ನಾಭರಣ ದೋಚಿದ್ದ ನಾಲ್ವರ ಸೆರೆ

​ಪ್ರಜಾವಾಣಿ ವಾರ್ತೆ
Published 6 ಜನವರಿ 2026, 16:40 IST
Last Updated 6 ಜನವರಿ 2026, 16:40 IST
ಆರೋಪಿಗಳಿಂದ ಜಪ್ತಿ ಮಾಡಿಕೊಂಡ ಚಿನ್ನಾಭರಣ
ಆರೋಪಿಗಳಿಂದ ಜಪ್ತಿ ಮಾಡಿಕೊಂಡ ಚಿನ್ನಾಭರಣ   

ಬೆಂಗಳೂರು: ಉದ್ಯಮಿಯ ವಿಲ್ಲಾದಲ್ಲಿ ಚಿನ್ನ ಹಾಗೂ ಬೆಳ್ಳಿಯ ಆಭರಣಗಳನ್ನು ದೋಚಿ ಪರಾರಿಯಾಗಿದ್ದ ನಾಲ್ವರನ್ನು ವಿದ್ಯಾರಣ್ಯಪುರ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ಮಂಜುನಾಥ, ಚಂದನ್, ನರೇಂದ್ರ ಹಾಗೂ ಮಂಜಿತ್ ಬಂಧಿತರು.

ಬಂಧಿತರಿಂದ 550 ಗ್ರಾಂ ಚಿನ್ನಾಭರಣ, ನಾಲ್ಕು ಕೆ.ಜಿ ಬೆಳ್ಳಿಯ ವಸ್ತುಗಳು, ₹ 4 ಲಕ್ಷ ನಗದು, 1 ದ್ವಿಚಕ್ರ ವಾಹನ ಸೇರಿದಂತೆ ₹1.3 ಕೋಟಿ ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ಹೇಳಿದರು.

ADVERTISEMENT

ಗೋಪಾಲ್‌ ಶಿಂಧೆ ಎಂಬುವರಿಗೆ ಸೇರಿದ ಲಕ್ಷ್ಮಿಪುರ ಕ್ರಾಸ್ ಬಳಿಯ ಡೊನಾಟಾ ಕೌಂಟಿ ವಿಲ್ಲಾದಲ್ಲಿ ಡಿಸೆಂಬರ್ 24ರಂದು ಕಳ್ಳತನ ನಡೆದಿತ್ತು. ಅವರು ನೀಡಿದ ದೂರಿನ ಮೇರೆಗೆ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.

‘ಉದ್ಯಮಿ ವಿಲ್ಲಾದಲ್ಲಿ ಬಿಹಾರದ ಮಂಜಿತ್‌ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ. ದೊಡ್ಡಬಳ್ಳಾಪುರದ ನರೇಂದ್ರ ಚಾಲಕನಾಗಿ ಕೆಲಸ ಮಾಡುತ್ತಿದ್ದ. ಅವರಿಬ್ಬರೂ ಮಂಜುನಾಥ್‌ ಹಾಗೂ ಚಂದನ್ ಜತೆಗೆ ಸೇರಿಕೊಂಡು ಕೃತ್ಯ ಎಸಗಿದ್ದರು’ ಎಂದು ಪೊಲೀಸರು ಹೇಳಿದರು.

ಕಳ್ಳತನ ಮಾಡಿ ಶ್ರೀಮಂತರಾಗಲು ಯೋಜನೆ: ಉದ್ಯಮಿಯ ವಿಲ್ಲಾಗೆ ಕನ್ನ ಹಾಕಿ ಶ್ರೀಮಂತರಾಗಲು ಆರೋಪಿಗಳು ಯೋಜನೆ ರೂಪಿಸಿದ್ದರು. ಸಣ್ಣಪುಟ್ಟ ಕಳ್ಳತನ ಮಾಡಿಕೊಂಡಿದ್ದ ಮಂಜುನಾಥ್‌ಗೆ ಮಂಜಿತ್‌ ಹಾಗೂ ನರೇಂದ್ರ ವಿಷಯ ತಿಳಿಸಿದ್ದರು. ಅದರಂತೆ ಮೂರು ತಿಂಗಳಿಂದ ಕಳ್ಳತನಕ್ಕೆ ಯೋಜನೆ ರೂಪಿಸಿದ್ದರು. ಈ ನಡುವೆ ಉದ್ಯಮಿ ಮನೆಯವರು ಕ್ರಿಸ್​​ಮಸ್ ರಜೆಗೆ ಪ್ರವಾಸಕ್ಕೆ ತೆರಳಿದ್ದರು. ಆಗ ನಾಲ್ವರು ವಿಲ್ಲಾದಲ್ಲಿ ಕಳ್ಳತನ ಮಾಡಿದ್ದರು ಎಂದು ಪೊಲೀಸರು ಹೇಳಿದರು.

‘ಆರೋಪಿಗಳ ಪೈಕಿ ಮಂಜುನಾಥ ಧರ್ಮಸ್ಥಳದ ಭಕ್ತನಾಗಿದ್ದ. ಕಳ್ಳತನದ ಬಳಿಕ ಹರಕೆ ತೀರಿಸಲು ಚಂದನ್​​ ಮತ್ತು ಮಂಜುನಾಥ್​ ಧರ್ಮಸ್ಥಳಕ್ಕೆ ತೆರಳಿದ್ದರು. ನಂತರ, ಸುಮಾರು ಮೂರು ದಿನಗಳ ಕಾಲ ಕದ್ದ ದುಡ್ಡಲ್ಲಿ ಪ್ರವಾಸ ಮಾಡಿದ್ದರು’ ಎಂದು ಪೊಲೀಸರು ಹೇಳಿದರು.

‘ಗೋಪಾಲ್‌ ಶಿಂಧೆ ಅವರು ಪ್ರವಾಸ ಮುಗಿಸಿ ವಿಲ್ಲಾಗೆ ವಾಪಸ್ ಆಗಿದ್ದರು. ವಿಲ್ಲಾದಲ್ಲಿ ಪರಿಶೀಲನೆ ನಡೆಸಿದಾಗ ಕಳ್ಳತನ ನಡೆದಿರುವುದು ಗೊತ್ತಾಗಿತ್ತು. ಬಳಿಕ ದೂರು ನೀಡಿದ್ದರು’ ಎಂದು ಪೊಲೀಸರು ಹೇಳಿದರು.

‘ಬಟ್ಟೆ ಒಗೆಯುವ ಸಂದರ್ಭದಲ್ಲಿ ಜೇಬಿನಲ್ಲಿ ಹಣ ಸಿಕ್ಕಿದರೂ ಮಂಜಿತ್ ವಾಪಸ್‌ ಕೊಡುತ್ತಿದ್ದ. ಮನೆ ಕೆಲಸದವರ ಮೇಲೆ ಉದ್ಯಮಿಗೆ ಅನುಮಾನ ಬಂದಿರಲಿಲ್ಲ. ಆದರೆ, ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾದ ದೃಶ್ಯಾವಳಿ ಪರಿಶೀಲನೆ ನಡೆಸಿದಾಗ ನಾಲ್ವರು ಕೃತ್ಯ ಎಸಗಿರುವುದು ಪತ್ತೆಯಾಗಿದೆ’ ಎಂದು ಪೊಲೀಸರು ಹೇಳಿದರು.