ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್
ಬೆಂಗಳೂರು: ನಗರದ 1,650 ಕಿ.ಮೀ ಪ್ರಮುಖ ರಸ್ತೆಗಳಲ್ಲಿ ಸದ್ಯ 83 ರಸ್ತೆಗಳ 148 ಕಿ.ಮೀ ವೈಟ್ ಟಾಪಿಂಗ್ ಕಾಮಗಾರಿ ₹18 ಕೋಟಿ ವೆಚ್ಚದಲ್ಲಿ ಜಾರಿಯಲ್ಲಿದೆ. ಇನ್ನೂ 500 ಕಿ.ಮೀ ರಸ್ತೆಗಳ ಕಾಮಗಾರಿಗಳನ್ನು ₹4 ಸಾವಿರ ಕೋಟಿ ವೆಚ್ಚದಲ್ಲಿ ಕೈಗೆತ್ತಿಕೊಳ್ಳಲು ವಿಸ್ತೃತ ಯೋಜನಾ ವರದಿ( ಡಿಪಿಆರ್) ಸಿದ್ದಪಡಿಸಲಾಗುತ್ತಿದೆ. ಅದು ಮುಂದಿನ ವಾರ ಅಂತಿಮಗೊಳ್ಳಲಿದೆ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ತಿಳಿಸಿದರು.
‘ವೈಟ್ ಟಾಪಿಂಗ್ ರಸ್ತೆ ನಿರ್ಮಾಣದಿಂದ ಮುಂದಿನ ಮೂರು ದಶಕ, ರಸ್ತೆ ಬಾಳಿಕೆ ಬರಲಿದೆ. ಇದಲ್ಲದೇ ಬೆಂಗಳೂರಿನ 350 ಕಿ.ಮೀ ಉದ್ದದ 182 ರಸ್ತೆಗಳಲ್ಲಿ ಬ್ಲ್ಯಾಕ್ ಟಾಪಿಂಗ್ ಕಾಮಗಾರಿಯನ್ನು ₹695 ಕೋಟಿ ವೆಚ್ಚದಲ್ಲಿ ನಡೆಸಲಾಗುತ್ತಿದೆ. ಮುಖ್ಯಮಂತ್ರಿಯವರು ಕೂಡ ರಸ್ತೆಗಳ ಗುಂಡಿ ಮುಚ್ಚಲು ₹1,100 ಕೋಟಿ ಅನುದಾನ ಒದಗಿಸಿದ್ದು, 500 ಕಿ.ಮೀ ಡಾಂಬರೀಕರಣ ಮಾಡಲಾಗುತ್ತಿದೆ’ ಎಂದು ಹೇಳಿದರು.
‘ಭವಿಷ್ಯದ ಬೆಂಗಳೂರಿಗಾಗಿ 113 ಕಿ.ಮೀ ಎಲಿವೇಟೇಡ್ ಮೇಲ್ಸೇತುವೆ, 40 ಕಿ.ಮೀ ಸುರಂಗ ರಸ್ತೆ ಯೋಜನೆಯೂ ಸೇರಿದೆ. 117 ಕಿ.ಮೀ ಉದ್ದದ ಬೆಂಗಳೂರು ಬ್ಯುಸಿನೆಸ್ ಕಾರಿಡಾರ್ ನಿರ್ಮಾಣಕ್ಕೆ ಸಂಪುಟ ಅನುಮತಿ ನೀಡಿ ಭೂಸ್ವಾಧೀನಕ್ಕೆ ದರ ನಿಗದಿ ಮಾಡಲಾಗಿದೆ. ಜಿಬಿಎ ರಚನೆ ಹಿಂದಿರುವ ಆಶಯವೂ ಬೆಂಗಳೂರು ಪ್ರಗತಿಯೇ. ಈಗಾಗಲೇ 10 ಸಾವಿರ ರಸ್ತೆ ಗುಂಡಿ ಮುಚ್ಚಿದ್ದೇವೆ. ಹೀಗಿದ್ದರೂ ಬಿಜೆಪಿಯವರು ಸುಮ್ಮನೆ ಟೀಕೆ ಮಾಡುತ್ತಿದ್ದಾರೆ. ಕೆಂಪೇಗೌಡರು ಕಟ್ಟಿದ ಬೆಂಗಳೂರನ್ನು ಅಂತರರಾಷ್ಟ್ರೀಯ ಮಟ್ಟಕ್ಕೆ ಬೆಳೆಸಲು ಮುಂದಾಗಿದ್ದೇವೆ. ಮುಂದಿನ 10 ವರ್ಷದ ನಂತರ ಇಲ್ಲಿನ ಜನರು ನೆನಪಿಸಿಕೊಳ್ಳುವ ಪ್ರಗತಿ ಕಾಣಲಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.