ADVERTISEMENT

ಬೆಂಗಳೂರು: ಪತ್ನಿಯನ್ನು ಕೊಂದ ಪತಿಯ ಬಂಧನ

​ಪ್ರಜಾವಾಣಿ ವಾರ್ತೆ
Published 7 ನವೆಂಬರ್ 2025, 15:37 IST
Last Updated 7 ನವೆಂಬರ್ 2025, 15:37 IST
ರವಿಚಂದ್ರ
ರವಿಚಂದ್ರ   

ಬೆಂಗಳೂರು: ಪತ್ನಿ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಿದ್ದ ಪತಿಯನ್ನು ಅಮೃತಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

ತುಮಕೂರು ಜಿಲ್ಲೆ ಪಾವಗಡದ ಅಮೃತಹಳ್ಳಿಯ ಗಂಗಮ್ಮ ಬಡಾವಣೆ ನಿವಾಸಿ ಅಂಜಲಿ (25) ಕೊಲೆಯಾದವರು. ಇವರ ಪತಿ ಸುರಪುರದ ರವಿಚಂದ್ರ ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ.

‘ಕೊಲೆಯಾದ ಅಂಜಲಿ ಅವರು ತರಕಾರಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದರು. ಆರೋಪಿ ರವಿಚಂದ್ರ ಟ್ರಾವೆಲ್ಸ್ ಕಚೇರಿಯಲ್ಲಿ ಕಾರು ಚಾಲಕನಾಗಿ ಕೆಲಸ ಮಾಡುತ್ತಿದ್ದರು. ಅಂಜಲಿ ಹಾಗೂ ರವಿಚಂದ್ರ ಇಬ್ಬರಿಗೂ ಇದು 2ನೇ ವಿವಾಹವಾಗಿದೆ. ವಿವಾಹವಾದ ಆರಂಭದಲ್ಲಿ ಕೌಟುಂಬಿಕ ಜೀವನ ಉತ್ತಮವಾಗಿತ್ತು. ಬಳಿಕ, ದಂಪತಿ ಮಧ್ಯೆ ಗಲಾಟೆ ಆರಂಭವಾಗಿತ್ತು’ ಎಂದು ಪೊಲೀಸರು ಹೇಳಿದರು.

ADVERTISEMENT

‘ಪತ್ನಿಯ ಬಗ್ಗೆ ಅನುಮಾನ ವ್ಯಕ್ತಪಡಿಸಿ ರವಿಚಂದ್ರ ಗುರುವಾರ ರಾತ್ರಿ ಗಲಾಟೆ ಮಾಡಿದ್ದರು. ಗಲಾಟೆ ವಿಕೋಪಕ್ಕೆ ಹೋಗಿ ಪತ್ನಿಯ ಮೇಲೆ ಹಲ್ಲೆ ನಡೆಸಿ ಪರಾರಿ ಆಗಿದ್ದರು. ಮಾಹಿತಿ ತಿಳಿದು ಕೃತ್ಯ ನಡೆದ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದಾಗ ಅಂಜಲಿ ಅವರಿಗೆ ಜೀವ ಇರುವುದು ಕಂಡುಬಂದಿತ್ತು. ಕೂಡಲೇ ಅಮೃತಹಳ್ಳಿ ಠಾಣೆಯ ಪೊಲೀಸರು ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ, ಗಂಭೀರವಾಗಿ ಹಲ್ಲೆಗೆ ಒಳಗಾಗಿದ್ದ ಅವರು ಮೃತಪಟ್ಟಿದ್ದಾರೆ’ ಎಂದು ಮೂಲಗಳು ಹೇಳಿವೆ.

‘ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ. ಕಳೆದ 2–3 ದಿನಗಳಿಂದ ಅಂಜಲಿ ಅವರು ಮನೆಗೆ ಬಾರದೇ ಬೇರೆ ವ್ಯಕ್ತಿಯ ಜೊತೆಗೆ ಸುತ್ತಾಡುತ್ತಿದ್ದರು. ಆ ಕುರಿತು ಪ್ರಶ್ನಿಸಿದಾಗ ಗಲಾಟೆ ಆಗಿತ್ತು. ಹಲ್ಲೆ ನಡೆಸಿದ್ದೆ ಎಂಬುದಾಗಿ ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ’ ಎಂದು ಪೊಲೀಸ್‌ ಮೂಲಗಳು ಹೇಳಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.