ADVERTISEMENT

ಗತಿಸಿದ ವರ್ಷ: ಮೆಟ್ರೊ ಸಂಚಾರದ ಸಿಹಿ, ನೋವು ಕಣ್ಣೀರಿಗೆ ಕಾರಣವಾದ ಘಟನೆಗಳು

ಬಾಲಕೃಷ್ಣ ಪಿ.ಎಚ್‌
ಕೆ.ಎಸ್.ಸುನಿಲ್
Published 30 ಡಿಸೆಂಬರ್ 2025, 19:05 IST
Last Updated 30 ಡಿಸೆಂಬರ್ 2025, 19:05 IST
<div class="paragraphs"><p>ಮೆಟ್ರೊ ರೈಲು ಹಾಗೂ ಅಪರಾಧ ಕೃತ್ಯದ&nbsp;ಚಿತ್ರ&nbsp;</p></div>

ಮೆಟ್ರೊ ರೈಲು ಹಾಗೂ ಅಪರಾಧ ಕೃತ್ಯದ ಚಿತ್ರ 

   

ಬೆಂಗಳೂರು: ನಗರ ಸಂಪರ್ಕ ಸಾರಿಗೆಯಲ್ಲಿ ಪ್ರಮುಖ ಸ್ಥಾನದಲ್ಲಿರುವ ನಮ್ಮ ಮೆಟ್ರೊ 2025ರಲ್ಲಿ ಪ್ರಯಾಣ ದರ ಏರಿಕೆ, ಹಳದಿ ಮಾರ್ಗದಲ್ಲಿ ಮೆಟ್ರೊ ಆರಂಭ ಇನ್ನಿತರ ಕಾರಣಕ್ಕೆ ಹೆಚ್ಚು ಸುದ್ದಿ ಮಾಡಿತು.

ಮತ್ತೊಂದೆಡೆ ನೋವು, ಕಣ್ಣೀರಿಗೆ ಕಾರಣವಾದ ಘಟನೆಗಳೂ ನಡೆದಿವೆ. ಬೆಂಕಿ ಅವಘಡದಲ್ಲಿ ಐವರು ಕಾರ್ಮಿಕರ ಸಜೀವ ದಹನ, ಕೈದಿಗಳು ಮದ್ಯ ಕುಡಿದು ನೃತ್ಯ ಮಾಡಿದ್ದ ವಿಡಿಯೊ ಹಾಗೂ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಎಲ್‌ಇಟಿ ಉಗ್ರನಿಗೆ ಜೈಲು ಅಧಿಕಾರಿ ಮತ್ತು ಮನೋವೈದ್ಯ ಸಹಕಾರ ನೀಡಿದ್ದು ಭಾರಿ ಸದ್ದು ಮಾಡಿತ್ತು. ನಿರೀಕ್ಷೆಗಳ ಹೊತ್ತಿನಲ್ಲಿ 2025ನೇ ಸಾಲಿನಲ್ಲಿ ನಗರದಲ್ಲಿ ಸದ್ದು ಮಾಡಿದ್ದ ಸುದ್ದಿಗಳತ್ತ ‘ಇಣುಕು ನೋಟ’ ಇಲ್ಲಿದೆ...

ADVERTISEMENT

ನಮ್ಮ ಮೆಟ್ರೊ: 

ಫೆ.9: ನಮ್ಮ ಮೆಟ್ರೊ ಪ್ರಯಾಣ ದರವನ್ನು ಶೇ 51.5ರಷ್ಟು ಹೆಚ್ಚಳ ಮಾಡುವಂತೆ ದರ ನಿಗದಿ ಸಮಿತಿ ಶಿಫಾರಸು ಮಾಡಿದ್ದರೂ ಬಿಎಂಆರ್‌ಸಿಎಲ್‌ ಶೇ 101ರಷ್ಟು ಹೆಚ್ಚಿಸಿತು.

ಫೆ.14: ವಿಪರೀತ ದರ ಏರಿಕೆಗೆ ಭಾರಿ ಆಕ್ರೋಶ ವ್ಯಕ್ತವಾದ ಮೇಲೆ ಶೇ 30ರಷ್ಟು ದರ ಇಳಿಸಿದ ಬಿಎಂಆರ್‌ಸಿಎಲ್‌.

ಮೇ 9: ಬೈಯಪ್ಪನಹಳ್ಳಿ ಮತ್ತು ಎಂ.ಜಿ. ರಸ್ತೆ ನಡುವಿನ ಆರು ಮೆಟ್ರೊ ನಿಲ್ದಾಣಗಳಲ್ಲಿ ಸುಧಾರಿತ ಸಿ.ಸಿ.ಟಿ.ವಿ ಕ್ಯಾಮೆರಾ ನಿಗಾ ವ್ಯವಸ್ಥೆ ಮತ್ತು ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನ ಅಳವಡಿಕೆ.

ಆ.10: ಆರ್‌ವಿ ರಸ್ತೆ–ಬೊಮ್ಮಸಂದ್ರ ‘ನಮ್ಮ ಮೆಟ್ರೊ’ ಹಳದಿ ಮಾರ್ಗಕ್ಕೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದರು. ಇದರಿಂದ ಮಾಹಿತಿ ತಂತ್ರಜ್ಞಾನದ (ಐ.ಟಿ) ಹಬ್‌ ಆಗಿರುವ ಎಲೆಕ್ಟ್ರಾನಿಕ್ ಸಿಟಿಗೆ ಮೆಟ್ರೊ ಸಂಚಾರ ಆರಂಭ. ಮೆಟ್ರೊ ಪ್ರಯಾಣಿಕರ ಸಂಖ್ಯೆ 1 ಲಕ್ಷ ಹೆಚ್ಚಳವಾಯಿತು.

ಸೆ.11: ನಮ್ಮ ಮೆಟ್ರೊ ಪ್ರಯಾಣ ದರ ಏರಿಕೆಯಾದ ಏಳು ತಿಂಗಳ ಬಳಿಕ ಬಿಎಂಆರ್‌ಸಿಎಲ್‌ ತನ್ನ ವೆಬ್‌ಸೈಟ್‌ನಲ್ಲಿ ದರ ನಿಗದಿ ಸಮಿತಿ ನೀಡಿರುವ ವರದಿಯನ್ನು ಪ್ರಕಟಿಸಿತು.

ಅ.2: ಕನ್ನಡ ಮಾತನಾಡುವ ವಿಚಾರವಾಗಿ ಮಹಿಳೆಯರ ನಡುವೆ ನಡೆದಿರುವ ವಾಗ್ವಾದಕ್ಕೆ ಸಂಬಂಧಿಸಿದ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿ ಚರ್ಚೆಗೆ ಗ್ರಾಸವಾಯಿತು.

ನ.2: ಮೆಜೆಸ್ಟಿಕ್‌ನಲ್ಲಿರುವ ನಮ್ಮ ಮೆಟ್ರೊ ನಿಲ್ದಾಣದಲ್ಲಿ ತಾಯಿಯಿಂದ ಬೇರ್ಪಟ್ಟ ಆರು ವರ್ಷದ ಬಾಲಕಿಯನ್ನು ಮೆಟ್ರೊ ಸಿಬ್ಬಂದಿ ಸುರಕ್ಷಿತವಾಗಿ ತಾಯಿಯ ಕೈಗೆ ಒಪ್ಪಿಸಿದ್ದರು.

ಡಿ. 5: ಕೆಂಗೇರಿ ಮೆಟ್ರೊ ನಿಲ್ದಾಣದಲ್ಲಿ ಮೆಟ್ರೊ ಬರುವ ಸಮಯದಲ್ಲಿ ಹಾರಿ ವಿಜಯಪುರದ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡರು. ಈ ವರ್ಷ ಒಟ್ಟು ಐದು ಜನರು ಮೆಟ್ರೊ ಹಳಿಗೆ ಹಾರಿದ್ದು, ನಾಲ್ಕು ಜನರು ಮೆಟ್ರೊ ಸಿಬ್ಬಂದಿಯ ತಕ್ಷಣದ ಸ್ಪಂದನದಿಂದಾಗಿ ಬದುಕಿ ಉಳಿದರು.

ಅಪರಾಧ ಲೋಕ: 

* ಮಾರ್ಚ್‌ 24: ಸಾರ್ವಜನಿಕ ಸ್ಥಳದಲ್ಲಿ ಮಾರಕಾಸ್ತ್ರ ಹಿಡಿದು ‘ರೀಲ್ಸ್‌’ ಮಾಡಿ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದ ಕಿರುತೆರೆಯ ನಟರಾದ ರಜತ್‌ ಕಿಶನ್‌ ಹಾಗೂ ವಿನಯ್‌ ಗೌಡ ಅವರನ್ನು ಬಸವೇಶ್ವರ ನಗರ ಠಾಣೆಯ ಪೊಲೀಸರು ಬಂಧಿಸಿದರು. ಕನ್ನಡ ವಾಹಿನಿಯೊಂದರಲ್ಲಿ ಪ್ರಸಾರವಾಗುವ ‘ಬಿಗ್‌ಬಾಸ್‌’ ಕಾರ್ಯಕ್ರಮದಲ್ಲಿ ಇಬ್ಬರೂ ಸ್ಪರ್ಧಿಸಿದ್ದರು.

* ಏಪ್ರಿಲ್ 21 : ಎಚ್‌ಎಎಲ್‌ ರಸ್ತೆಯ ಗೋಪಾಲನ್ ಮಾಲ್ ಬಳಿ ದ್ವಿಚಕ್ರ ವಾಹನ ಸವಾರ ಎಸ್‌.ಜೆ.ವಿಕಾಸ್‌ ಕುಮಾರ್ ಅವರ ಮೇಲೆ ವಾಯುಪಡೆ ಕೋಲ್ಕತ್ತ ನೆಲೆಯ ವಿಂಗ್ ಕಮಾಂಡರ್‌ ಶಿಲಾದಿತ್ಯ ಬೋಸ್‌ ಹಲ್ಲೆ ಮಾಡಿದ್ದರು. ದ್ವಿಚಕ್ರ ವಾಹನ ಸವಾರನ ಮೇಲೆ ಶಿಲಾದಿತ್ಯ ಬೋಸ್‌ ಹಲ್ಲೆ ನಡೆಸಿದ್ದ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿ, ರಾಜ್ಯದಲ್ಲಿ ಭಾರಿ ಸದ್ದು ಮಾಡಿತ್ತು.

* ಜುಲೈ 14: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಎಲ್‌ಇಟಿ ಉಗ್ರ ನಾಸೀರ್‌ಗೆ ಕಾರಾಗೃಹ ಮನೋವೈದ್ಯ ಡಾ.ನಾಗರಾಜ್ ಹಾಗೂ ಜೈಲಿನ ಎಎಸ್‌ಐ ಚಾಂದ್‌ ಪಾಷಾ ಸಹಕಾರ ನೀಡಿದ್ದ ಆರೋಪದ ಮೇರೆಗೆ ಇಬ್ಬರ ಬಂಧನ. ಈ ಇಬ್ಬರು  ಕೈದಿಗಳಿಗೆ ಹಾಗೂ ಉಗ್ರರಿಗೆ ಹಣದ ಆಸೆಗೆ ಮೊಬೈಲ್ ಹಾಗೂ ಶಂಕಿತ ಉಗ್ರರಿಗೆ ಮಾಹಿತಿ ನೀಡುತ್ತಿದ್ದರು ಎಂಬುದು ವಿಚಾರಣೆ ವೇಳೆ ಗೊತ್ತಾಗಿತ್ತು.

ಜುಲೈ 28: ನಟ ದರ್ಶನ್ ಅವರ ಅಭಿಮಾನಿಗಳು ಎಂದು ಹೇಳಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಅಶ್ಲೀಲ ಹಾಗೂ ಅವಹೇಳನಕಾರಿ ಸಂದೇಶಗಳನ್ನು ಹಾಕಿ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ನಟಿ ರಮ್ಯಾ ಅವರು ನಗರ ಪೊಲೀಸ್ ಕಮಿಷನರ್‌ ಸೀಮಾಂತ್ ಕುಮಾರ್ ಸಿಂಗ್‌ ಅವರಿಗೆ ನಾಲ್ಕು ಪುಟಗಳ ದೂರು ನೀಡಿದರು. 43 ಖಾತೆಗಳನ್ನು ಉಲ್ಲೇಖಿಸಿ ದೂರು ನೀಡಿ ಕ್ರಮಕ್ಕೆ ಕೋರಿದರು.

ಆ.19: ಹಲಸೂರು ಗೇಟ್‌ ಸಮೀಪದ ನಗರ್ತಪೇಟೆಯಲ್ಲಿ ನಡೆದ ಪ್ಲಾಸ್ಟಿಕ್ ಮ್ಯಾಟ್‌ ಗೋದಾಮಿನಲ್ಲಿ ಸಂಭವಿಸಿದ ಬೆಂಕಿ ಅವಘಡದಲ್ಲಿ ರಾಜಸ್ಥಾನದ ಇಬ್ಬರು ಮಕ್ಕಳು ಸೇರಿ ಐವರು ಕಾರ್ಮಿಕರು ಸಜೀವ ದಹನವಾಗಿದ್ದರು. ಘಟನೆಗೆ ಶಾರ್ಟ್‌ ಸರ್ಕಿಟ್‌ ಕಾರಣ ಎಂದು ಶಂಕಿಸಲಾಗಿತ್ತು.

ಅ.16: ಪ್ರೀತಿಸಲು ನಿರಾಕರಿಸಿದ ಕಾರಣಕ್ಕೆ ವಿದ್ಯಾರ್ಥಿನಿ ಯಾಮಿನಿ ಪ್ರಿಯಾ ಅವರ ಕತ್ತು ಕೊಯ್ದು ಕೊಲೆ ಮಾಡಿದ್ದ ಘಟನೆ  ಶ್ರೀರಾಂಪುರ ಪೊಲೀಸ್ ಠಾಣೆ ವ್ಯಾಪ್ತಿಯ ರೈಲ್ವೆ ಹಳಿ ಬಳಿ ನಡೆದಿತ್ತು. ಪರೀಕ್ಷೆ ಬರೆದು ಕಾಲೇಜಿನಿಂದ ಮನೆಗೆ ಬರುತ್ತಿದ್ದ ಯುವತಿಯನ್ನು ಬರ್ಬರವಾಗಿ ಕೊಲೆಗೈದು ಪರಾರಿಯಾಗಿದ್ದ ಇಬ್ಬರನ್ನು ಪೊಲೀಸರು ಬಂಧಿಸಿದರು. 

ನ.5: ರಾಜಾರಾಮ್‌ ಮೋಹನರಾಯ್‌ ರಸ್ತೆಯಲ್ಲಿ ಇರುವ ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆಯ(ಇಪಿಎಫ್‌ಒ) ಸ್ಟಾಫ್‌ ಕ್ರೆಡಿಟ್ ಕೋ–ಆಪರೇಟಿವ್ ಸೊಸೈಟಿಯಲ್ಲಿ ನಡೆದಿರುವ ₹70 ಕೋಟಿ ಹಣ ದುರ್ಬಳಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸೊಸೈಟಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಸಿಇಒ) ಗೋಪಿನಾಥ್‌ ಹಾಗೂ ಸಿಬ್ಬಂದಿ ಲಕ್ಷ್ಮೀ ಅವರನ್ನು ಬಂಧಿಸಲಾಗಿದೆ.

ನ.10: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಕೈದಿಗಳಿಗೆ ವಿಶೇಷ ಸೌಲಭ್ಯ, ಮೊಬೈಲ್‌ ಬಳಕೆಗೆ ಅವಕಾಶ ನೀಡಿದ್ದ ಪ್ರಕರಣದಲ್ಲಿ ಜೈಲಿನ ಸೂಪರಿಂಟೆಂಡೆಂಟ್ ಇಮಾಮ್‌ಸಾಬ್‌ ಮ್ಯಾಗೇರಿ ಹಾಗೂ ಸಹಾಯಕ ಸೂಪರಿಂಟೆಂಡೆಂಟ್ ಅಶೋಕ್ ಭಜಂತ್ರಿ ಅವರನ್ನು ಅಮಾನತು ಮಾಡಲಾಗಿದೆ. ಕಾರಾಗೃಹದ ಮುಖ್ಯ ಅಧೀಕ್ಷಕ ಕೆ.ಸುರೇಶ್ ಅವರನ್ನು ವರ್ಗಾವಣೆ ಮಾಡಿ,  ಕಾರಾಗೃಹದ ಮುಖ್ಯ ಸೂಪರಿಂಟೆಂಡೆಂಟ್ ಜಾಗಕ್ಕೆ ಮೊದಲ ಬಾರಿಗೆ ಐಪಿಎಸ್‌ ಅಧಿಕಾರಿ ಅನ್ಶು ಕುಮಾರ್ ನಿಯೋಜಿಸಲಾಗಿದೆ. 

ನ.15: ಚರ್ಮ ರೋಗ ತಜ್ಞೆ ಡಾ.ಕೃತಿಕಾ ರೆಡ್ಡಿಗೆ ಅರಿವಳಿಕೆ ಚುಚ್ಚುಮದ್ದು ನೀಡಿ ಕೊಲೆ ಮಾಡಿದ ಆರೋಪದ ಮೇರೆಗೆ ಪತಿ ಡಾ.ಮಹೇಂದ್ರ ರೆಡ್ಡಿಯನ್ನು ಪೊಲೀಸರು ಬಂಧಿಸಿ, ಜೈಲಿಗೆ ಕಳುಹಿಸಿದರು.

ನ.15: ಸಿಸಿಬಿ ವಿಶೇಷ ವಿಚಾರಣಾ ದಳ ಹಾಗೂ ಕೆಎಂಎಫ್ ಜಾಗೃತ ದಳದ ಸಿಬ್ಬಂದಿ ಜಂಟಿ ಕಾರ್ಯಾಚರಣೆ ನಡೆಸಿ, ನಂದಿನಿ ಬ್ರ್ಯಾಂಡ್‌ ಹೆಸರಿನಲ್ಲಿ ಕಲಬೆರಕೆ ತುಪ್ಪ ಮಾರಾಟ ಮಾಡುತ್ತಿದ್ದ ನಾಲ್ವರು ಆರೋಪಿಗಳನ್ನು ಬಂಧಿಸಿದರು. ಕೆಎಂಎಫ್‌ನ (ಕರ್ನಾಟಕ ಹಾಲು ಉತ್ಪಾದಕರ ಒಕ್ಕೂಟ) ಉತ್ಪನ್ನಗಳ ವಿತರಕ ಮಹೇಂದ್ರ ಹಾಗೂ ಕೃತ್ಯಕ್ಕೆ ಬೆಂಬಲ ನೀಡಿದ್ದ ದೀಪಕ್, ಮುನಿರಾಜು, ಅಭಿ ಅರಸು ಬಂಧಿತರು.

ಡಿ.12: ಗಿರಿನಗರದ ಅಪಾರ್ಟ್‌ಮೆಂಟ್‌ ಬಳಿ ಹಾದು ಹೋಗಿರುವ ಹೈಟೆನ್ಷನ್‌ ವಿದ್ಯುತ್ ಮಾರ್ಗದ ಕಂಬದ ಮೇಲೆ ಕುಳಿತಿದ್ದ ಸುಮಾರು ₹2 ಲಕ್ಷ ಬೆಲೆ ಬಾಳುವ ವಿದೇಶಿ ತಳಿಯ ಗಿಳಿಯನ್ನು ರಕ್ಷಣೆ ಮಾಡಲು ಹೋದ ನಾಗಮಂಗಲದ ಅರುಣ್ ಕುಮಾರ್ (32), ವಿದ್ಯುತ್‌ ಆಘಾತದಿಂದ ಮೃತಪಟ್ಟರು.

ಡಿ.23: ‌ಕೌಟುಂಬಿಕ ಕಲಹದ ಹಿನ್ನೆಲೆ ಪಿಸ್ತೂಲ್‌ನಿಂದ ಪತ್ನಿ ಭುವನೇಶ್ವರಿ (39) ಮೇಲೆ ಗುಂಡು ಹಾರಿಸಿ ಕೊಲೆ ಮಾಡಿದ ಬಳಿಕ ಆರೋಪಿ ಪತಿ ಬಾಲಮುರುಗನ್ (40) ಮಾಗಡಿ ರಸ್ತೆ ಪೊಲೀಸ್‌ ಠಾಣೆಗೆ ಬಂದು ಶರಣಾದರು. ಭುವನೇಶ್ವರಿ ಅವರು ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಬಸವೇಶ್ವರನಗರ ಶಾಖೆಯ ಸಹಾಯಕ ವ್ಯವಸ್ಥಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದರು. ಆರೋಪಿಯು ವೈಟ್‌ಫೀಲ್ಡ್‌ನಲ್ಲಿರುವ ಖಾಸಗಿ ಕಂಪನಿಯಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು.

ಡಿ.24: ಸಾಮಾಜಿಕ ಜಾಲತಾಣಗಳಲ್ಲಿ ಅಶ್ಲೀಲ ಹಾಗೂ ಅವಹೇಳನಕಾರಿ ಸಂದೇಶಗಳನ್ನು ಹಾಕಿರುವ ಕಿಡಿಗೇಡಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋರಿ ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರು ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ದೂರು ನೀಡಿದರು. ದೂರು ಆಧರಿಸಿ, ಯೋಗಿ ಕಿಚ್ಚ, ಮಿ.ಅನಾಥ, ಮಹಿ ಕಿಚ್ಚ, ವಿರಾಟ್ ಕಿಚ್ಚ ಎಂಬ ಖಾತೆ ಸೇರಿ 18 ಇನ್‌ಸ್ಟ್ರಾಗ್ರಾಂ ಖಾತೆಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡು, ತನಿಖೆ ನಡೆಸುತ್ತಿದ್ದಾರೆ.

ಡಿ.24: ಮಗಳನ್ನು ಮದುವೆ ಮಾಡಿಕೊಡಲು ನಿರಾಕರಿಸಿದ ಯುವತಿಯ ತಾಯಿ ಗೀತಾ (40) ಅವರ ಮೇಲೆ ಮುತ್ತು ಎಂಬಾತ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊಲೆ ಮಾಡಲು ಯತ್ನಿಸಿರುವ ಘಟನೆ ಸಾಣೇಗುರುವನಹಳ್ಳಿಯಲ್ಲಿ ನಡೆದಿದೆ. ಘಟನೆ ಬಳಿಕ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಬಸವೇಶ್ವರ ನಗರ ಠಾಣೆ ಪೊಲೀಸರು ಬಂಧಿಸಿದರು.

ಡಿ.28: ಕನ್ನಡ ಮತ್ತು ತಮಿಳಿನ ಕೆಲ ಧಾರಾವಾಹಿಗಳಲ್ಲಿ ನಟಿಸಿದ್ದ ಸಿ.ಎಂ.ನಂದಿನಿ (26) ಕೆಂಗೇರಿ ಬಳಿಯ ಪಿ.ಜಿ.ಯೊಂದರಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡರು. ವಿಜಯನಗರ ಜಿಲ್ಲೆಯ ಕೊಟ್ಟೂರಿನವರಾಗಿದ್ದು, ಕೆಲ ವರ್ಷಗಳಿಂದ ಬೆಂಗಳೂರಿನಲ್ಲಿ ವಾಸವಿದ್ದರು.

ಹಳದಿ ಮಾರ್ಗದ ರೈಲು
ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಮದ್ಯ ಕುಡಿದು ನೃತ್ಯ ಮಾಡುತ್ತಿರುವ ಕೈದಿಗಳು.
ಹಲಸೂರು ಗೇಟ್‌ ಸಮೀಪದ ನಗರ್ತಪೇಟೆಯ  ಪ್ಲಾಸ್ಟಿಕ್ ಮ್ಯಾಟ್‌ ಗೋದಾಮಿನಲ್ಲಿ ಸಂಭವಿಸಿದ ಬೆಂಕಿ ಅವಘಡ.

ಉಪನಗರ ರೈಲು

ಉಪನಗರ ರೈಲು ಯೋಜನೆಯು ವರ್ಷದ ಆರಂಭದಲ್ಲಿ ತೆವಳುತ್ತಿತ್ತು. ಆನಂತರ ಗುತ್ತಿಗೆ ಕಂಪನಿ ಯೋಜನೆಯಿಂದ ಹಿಂದಕ್ಕೆ ಸರಿದ ಕಾರಣ ಕಾಮಗಾರಿಯೇ ಸ್ಥಗಿತಗೊಂಡಿತು. ವರ್ಷದ ಅಂತ್ಯಕ್ಕೆ ಲಕ್ಷ್ಮಣ್‌ ಸಿಂಗ್‌ ಅವರನ್ನು ಕಾಯಂ ವ್ಯವಸ್ಥಾಪಕ ನಿರ್ದೇಶಕರನ್ನಾಗಿ ನೇಮಿಸುವ ಮೂಲಕ ಮತ್ತೆ ಯೋಜನೆಗೆ ಹುರುಪು ತುಂಬಲಾಯಿತು.

ಬೃಹತ್‌’ನಿಂದ ‘ಗ್ರೇಟರ್‌’ ಆದ ಬೆಂಗಳೂರು

ಬೆಂಗಳೂರು ( ವರದಿ–ಆರ್‌. ಮಂಜುನಾಥ್‌): ನಗರದಲ್ಲಿ ಅಭಿವೃದ್ಧಿ ಅಥವಾ ಮೂಲಸೌಕರ್ಯದ ಹೊಸ ಯೋಜನೆಗಳಿಗೆ ಚಾಲನೆ ಸಿಗಲಿಲ್ಲ. ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಅಸ್ತಿತ್ವ ಕಳೆದುಕೊಂಡು ಗ್ರೇಟರ್‌ ಬೆಂಗಳೂರು ಪ್ರಾಧಿಕಾರ (ಜಿಬಿಎ) ಸ್ಥಾಪನೆಗೊಂಡು ಐದು ನಗರ ಪಾಲಿಕೆಗಳು ರಚನೆಯಾದವು.

ಸುರಂಗ ರಸ್ತೆ ನಿರ್ಮಾಣದ ವಿವಾದ ಗುಂಡಿ ಮುಚ್ಚಿ ಎಂದು ಜನಪ್ರತಿನಿಧಿಗಳು ನಾಗರಿಕರು ರಸ್ತೆಗಿಳಿದಿದ್ದು ಈ ವರ್ಷದ ಪ್ರಮುಖಾಂಶಗಳು. 2007ರಲ್ಲಿ ರಚನೆಯಾಗಿದ್ದ ಬಿಬಿಎಂಪಿ ಗ್ರೇಟರ್‌ ಬೆಂಗಳೂರು ಆಡಳಿತ ಕಾಯ್ದೆ–2024ರ ಅನುಷ್ಠಾನದೊಂದಿಗೆ ಸೆಪ್ಟೆಂಬರ್‌ 2ರಂದು ಅಸ್ತಿತ್ವ ಕಳೆದುಕೊಂಡಿತು. ಜಿಬಿಎ ಮೂಲಕ ಬೆಂಗಳೂರು ಕೇಂದ್ರ ಉತ್ತರ ದಕ್ಷಿಣ ಪೂರ್ವ ಪಶ್ಚಿಮ ನಗರ ಪಾಲಿಕೆಗಳು ರಚನೆಯಾದವು. ಈ ನಗರ ಪಾಲಿಕೆಗಳಿಗೆ ಒಟ್ಟಾರೆ 369 ವಾರ್ಡ್‌ಗಳನ್ನು ಅಂತಿಮಗೊಳಿಸಿ ನವೆಂಬರ್‌ನಲ್ಲಿ ಅಧಿಸೂಚನೆಯನ್ನೂ ಹೊರಡಿಸಲಾಯಿತು. ಡಿಸೆಂಬರ್‌ಗೆ ನಗರ ಪಾಲಿಕೆಗಳಿಗೆ ಚುನಾವಣೆ ಎಂಬ ಮಾತು ಸೆಪ್ಟೆಂಬರ್‌ನಿಂದ ಹರಿದಾಡಿದರೂ ಚುನಾವಣೆ ನಡೆಯುವ ಲಕ್ಷಣಗಳು ವರ್ಷಾಂತ್ಯದವರೆಗೂ ಕಂಡುಬರಲಿಲ್ಲ.

ಜಿಬಿಎ ಆಗುವುದಕ್ಕೆ ಮುನ್ನವೇ ಹೆಬ್ಬಾಳ ಜಂಕ್ಷನ್‌ನಿಂದ ಸಿಲ್ಕ್‌ ಬೋರ್ಡ್‌ ಜಂಕ್ಷನ್‌ವರೆಗೆ (ಉತ್ತರ–ದಕ್ಷಿಣ ಕಾರಿಡಾರ್) ಮೂರು ಪಥಗಳ ಅವಳಿ ಸುರಂಗ ರಸ್ತೆ (ಟ್ವಿನ್‌ ಟನಲ್‌) ನಿರ್ಮಾಣಕ್ಕೆ ಜುಲೈ 16ರಂದು ಟೆಂಡರ್‌ ಆಹ್ವಾನಿಸಲಾಯಿತು. ಸುರಂಗ ರಸ್ತೆ ಯೋಜನೆ ಡಿಪಿಆರ್‌ನಲ್ಲಿ 131 ಲೋಪಗಳಿವೆ ಎಂದು ಸರ್ಕಾರವೇ ರಚಿಸಿದ್ದ ತಜ್ಞರ ಸಮಿತಿ ವರದಿ ನೀಡಿತು.  ಪ್ರತಿಪಕ್ಷಗಳು ಸೇರದಿಂತೆ ಪರಿಸರ ಕಾರ್ಯಕರ್ತರು ನಗರ ತಜ್ಞರು ಸುರಂಗ ರಸ್ತೆ ಯೋಜನೆಯನ್ನು ವಿರೋಧಿಸಿದರು. ಲಾಲ್‌ಬಾಗ್‌ ಸ್ಯಾಂಕಿ ಕೆರೆ ಹೆಬ್ಬಾಳ ಕೆರೆಗೆ ಹಾನಿ ಉಂಟುಮಾಡುವ ದುಂದು ವೆಚ್ಚದ ಸುರಂಗ ರಸ್ತೆ ಬೇಡ ಎಂದು ಪ್ರತಿಭಟನೆಗಳು ನಡೆದವು.

‘ನಗರದ ಸುಗಮ ಸಂಚಾರಕ್ಕೆ ಸುರಂಗ ರಸ್ತೆ ನಿರ್ಮಿಸಿಯೇ ಸಿದ್ಧ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಹೇಳಿದ್ದರು. ಮೂರು ಬಾರಿ ಟೆಂಡರ್‌ ಅವಧಿಯನ್ನು ವಿಸ್ತರಿಸಲಾಯಿತು. ಅದಾನಿ ಗ್ರೂಪ್‌ ದಿಲಿಪ್‌ ಬಿಲ್ಡ್‌ಕಾನ್‌ ವಿಶ್ವ ಸಮುದ್ರ ಎಂಜಿನಿಯರಿಂಗ್‌ ರೈಲ್‌ ವಿಕಾಸ್‌ ನಿಗಮ್‌ ಲಿಮಿಟೆಡ್‌ (ಆರ್‌ವಿಎನ್‌ಎಲ್‌) ಬಿಡ್‌ ಸಲ್ಲಿಸಿದ್ದಾರೆಂದು ಹೇಳಲಾಗಿರುವ ಟೆಂಡರ್‌ ಪ್ರಕ್ರಿಯೆ ಇನ್ನೂ ಪೂರ್ಣಗೊಂಡಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೀಡಿದ ಹೆಚ್ಚಿನ ಅನುದಾನದಲ್ಲಿ ನಗರದ ಪ್ರಮುಖ ಸ್ಥಳಗಳಿಗೆ ಡಾಂಬರು ಹಾಕಲಾಗಿದೆ ಎಂಬುದು ಬಿಟ್ಟರೆ 2025ರಲ್ಲಿ ನಗರದಲ್ಲಿ ಹೇಳಿಕೊಳ್ಳುವಂತಹ ಕಾಮಗಾರಿಗಳು ನಡೆದಿಲ್ಲ.

ಬಿಡಿಎ...

ಆ.18: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಹೆಬ್ಬಾಳ ಜಂಕ್ಷನ್ ಬಳಿ ನಿರ್ಮಿಸಿರುವ 700 ಮೀಟರ್ ಉದ್ದದ ಲೂಪ್ (ಪಥ) ಅನ್ನು ಸಂಚಾರಕ್ಕೆ ಮುಕ್ತಗೊಳಿಸಲಾಯಿತು. ಕೆ.ಆರ್. ಪುರ ಕಡೆಯಿಂದ ಮೇಖ್ರಿ ವೃತ್ತಕ್ಕೆ ಸಂಚಾರ ಸುಗಮಗೊಳಿಸಿದ್ದು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ಬೆಂಗಳೂರು ಸೆಂಟ್ರಲ್​ ಕಡೆಗಿನ ಪ್ರಯಾಣಕ್ಕೆ ಅನುಕೂಲ ಮಾಡಿಕೊಡುತ್ತಿದೆ.

* ಡಿ.20:  ಹೆಬ್ಬಾಳ ಮಾರ್ಗದಲ್ಲಿ ಬಿಡಿಎ ನಿರ್ಮಿಸಿರುವ ಎರಡನೇ ಲೂಪ್‌ ರ್‍ಯಾಂಪ್‌ನಲ್ಲಿ ಪ್ರಾಯೋಗಿಕವಾಗಿ ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದ್ದು ಈ ಮಾರ್ಗದಲ್ಲಿ ಶೇ 25ರಷ್ಟು ದಟ್ಟಣೆ ಸಮಸ್ಯೆ ತಗ್ಗಿದೆ.

ಬೆಂಗಳೂರು ಜಲಮಂಡಳಿ- 2025

ಬೆಂಗಳೂರು ಜಲಮಂಡಳಿ ಮೇ 1ರಿಂದ ನೀರಿನ ದರ ಏರಿಕೆ ಮಾಡಿತ್ತು. ನೀರು ಹಾಗೂ ಒಳಚರಂಡಿಯ ಅಕ್ರಮ ಸಂಪರ್ಕ ತಡೆಗೆ ನೀಲಿ ಪಡೆ ರಚಿಸಲಾಗಿದೆ. ಅಲ್ಲದೆ ನೀರಿನ ಸೋರಿಕೆ ಅಕ್ರಮ ತಡೆಗೆ ರೋಬೋಟಿಕ್‌ ತಂತ್ರಜ್ಞಾನ ಬಳಕೆ ಮಾಡಲಾಗುತ್ತಿದೆ.