
ಬೆಂಗಳೂರು: ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (ಬೆಸ್ಕಾಂ) ತನ್ನ ವ್ಯಾಪ್ತಿಯ ಎಂಟು ಜಿಲ್ಲೆಗಳಲ್ಲಿ ಇರುವ ಐದು ಲಕ್ಷಕ್ಕೂ ಅಧಿಕ ವಿದ್ಯುತ್ ಪರಿವರ್ತಕಗಳ (ಟಿ.ಸಿ) ಮುಂಜಾಗೃತ ನಿರ್ವಹಣೆ ಮಾಡಲು ಹಾಗೂ ಅದರ ಮೇಲೆ ನಿಗಾವಹಿಸಲು ಡಿಸ್ಟ್ರಿಬ್ಯೂಷನ್ ಟ್ರಾನ್ಸ್‌ಫಾರ್ಮರ್ ಲೈಫ್ ಸೈಕಲ್ ಮ್ಯಾನೇಜ್‌ಮೆಂಟ್ ಸಿಸ್ಟಂ (ಡಿಟಿಎಲ್‌ಎಂಎಸ್) ಆ್ಯಪ್ ಅನ್ನು ಅಭಿವೃದ್ದಿಪಡಿಸಿದೆ.
‘ಮೊಬೈಲ್ ಅಪ್ಲಿಕೇಶನ್ ಮೂಲಕ ಟಿ.ಸಿಗಳ ಕಾರ್ಯಾಚರಣೆ, ಮುಂಜಾಗೃತ ನಿರ್ವಹಣೆ, ದುರಸ್ತಿ ಹಾಗೂ ದಕ್ಷತೆಯ ಮೇಲೆ ನಿಗಾ ಇರಿಸಲಾಗುತ್ತದೆ. ಅಲ್ಲದೆ ಟಿ.ಸಿಗಳ ನಿರ್ವಹಣೆ ಕಾರ್ಯಗಳ ಮಾಹಿತಿಯನ್ನು ಆ್ಯಪ್‌ನಲ್ಲಿ ನಮೂದಿಸಲಾಗುತ್ತದೆ. ಇದರಿಂದಾಗಿ ಗ್ರಾಹಕರಿಗೆ ಗುಣಮಟ್ಟದ ಹಾಗೂ ತಡೆರಹಿತ ವಿದ್ಯುತ್ ಪೂರೈಸಲು ಅನುಕೂಲವಾಗಲಿದೆ’ ಎಂದು ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಎನ್.ಶಿವಶಂಕರ್ ತಿಳಿಸಿದ್ದಾರೆ.
ಡಿಟಿಎಲ್‌ಎಂಎಸ್ ಅಡಿಯಲ್ಲಿ ಅಭಿವೃದ್ಧಿಪಡಿಸಿದ ಡಿಟಿಸಿ (ಡಿಸ್ಟ್ರಿಬ್ಯೂಷನ್ ಟ್ರಾನ್ಸ್‌ಫಾರ್ಮರ್ ಸೆಂಟರ್) ನಿರ್ವಹಣೆ ಮಾಡ್ಯೂಲ್ ವಿದ್ಯುತ್ ವಿತರಣಾ ವ್ಯವಸ್ಥೆಯ ಕಾರ್ಯಕ್ಷಮತೆ, ವಿಶ್ವಾಸಾರ್ಹತೆ ಮತ್ತು ನಿರಂತರತೆಯನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ ಎಂದು ಹೇಳಿದ್ದಾರೆ.
ಈ ನಿರ್ವಹಣಾ ಮಾಡ್ಯೂಲ್ ಮೂಲಕ ಬೆಸ್ಕಾಂ ಕ್ಷೇತ್ರ ಅಧಿಕಾರಿಗಳಿಗೆ ಅವರ ವ್ಯಾಪ್ತಿಯಲ್ಲಿರುವ ಎಲ್ಲಾ ಟ್ರಾನ್ಸ್‌ಫಾರ್ಮರ್‌ಗಳನ್ನು ತ್ರೈಮಾಸಿಕವಾಗಿ ನಿರ್ವಹಣೆ ಮಾಡಿ, ವಿದ್ಯುತ್ ವಿತರಣೆಯಲ್ಲಾಗುವ ಸೋರಿಕೆಯನ್ನು ತಡೆಗಟ್ಟಿ, ಗ್ರಾಹಕರಿಗೆ ಗುಣಮಟ್ಟದ ವಿದ್ಯುತ್ ಪೂರೈಸಲು ಸಹಕಾರಿಯಾಗಲಿದೆ ಎಂದಿದ್ದಾರೆ.
ಡಿಟಿಎಲ್‌ಎಂಎಸ್ ಆ್ಯಪ್ ಅನ್ನು ಇಂಧನ ಸಚಿವ ಕೆ.ಜೆ.ಜಾರ್ಜ್ ಅವರು ಈಚೆಗೆ ಬಿಡುಗಡೆ ಮಾಡಿದ್ದು ಟಿ.ಸಿಗಳ ನಿರ್ವಹಣೆಯ ಮೊದಲು ಹಾಗೂ ನಿರ್ವಹಣೆಯ ನಂತರದ ಫೋಟೊಗಳನ್ನು ಕ್ಷೇತ್ರಾಧಿಕಾರಿಗಳು ಆ್ಯಪ್‌ನಲ್ಲಿ ಕಡ್ಡಾಯವಾಗಿ ದಾಖಲಿಸಬೇಕು. ಇದರಿಂದಾಗಿ ವಿದ್ಯುತ್ ಪರಿವರ್ತಕಗಳ ಸಮರ್ಪಕ ನಿರ್ವಹಣೆ ಮಾಹಿತಿ ಜೊತೆಗೆ ಟಿ.ಸಿ ಆವರಣದಲ್ಲಿರುವ ಕಸಕಡ್ಡಿಗಳನ್ನು ತೆರವು ಮಾಡಿ ಅವುಗಳನ್ನು ಸುರಕ್ಷಿತವಾಗಿಡಲು ನೆರವಾಗಲಿದೆ.
ಡಿಟಿಎಲ್‌ಎಮ್‌ಎಸ್ ಆ್ಯಪ್ ಮೂಲಕ ವಿದ್ಯುತ್ ಪರಿವರ್ತಕಗಳ ತೈಮಾಸಿಕ ನಿರ್ವಹಣೆ, ದೋಷಗಳನ್ನು ದಾಖಲಿಸುವುದು, ದುರಸ್ತಿ ವಿವರಗಳ ವಿಶ್ಲೇಷಣೆಯನ್ನು ಡಿಜಿಟಲ್ ರೂಪದಲ್ಲಿ ಪರಿಣಾಮಕಾರಿಯಾಗಿ ಮಾಡಬಹುದು ಎಂದು ಶಿವಶಂಕರ್ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.