ADVERTISEMENT

ಭಾರತ ರಂಗ ಮಹೋತ್ಸವ–ರಂಗ ಪರಿಷೆ: ‘ಪರಿಪೂರ್ಣ ಕಲಾವಿದರಾಗಲು ರಂಗಭೂಮಿ ಸಹಕಾರಿ’ 

ಭಾರತ ರಂಗ ಮಹೋತ್ಸವ–ರಂಗ ಪರಿಷೆಯಲ್ಲಿ ಕೆ. ಶಿವರುದ್ರಯ್ಯಗೆ ‘ಉತ್ಸವ ಗೌರವ’

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2026, 20:36 IST
Last Updated 4 ಫೆಬ್ರುವರಿ 2026, 20:36 IST
<div class="paragraphs"><p>ಕಾರ್ಯಕ್ರಮದಲ್ಲಿ ಕೆ. ಶಿವರುದ್ರಯ್ಯ, ಸಿಹಿಕಹಿ ಚಂದ್ರು ಹಾಗೂ ಸಿಹಿಕಹಿ ಗೀತಾ ಅವರನ್ನು ಗೌರವಿಸಲಾಯಿತು.&nbsp;ನೀಲಮ್ಮ, ಜಿಪಿಒ ಚಂದ್ರು,&nbsp;ಮೋತಿಲಾಲ ರೂ. ಚೌವ್ಹಾಣ, ಕೆ.ವಿ. ನಾಗರಾಜಮೂರ್ತಿ,&nbsp;ಶುಭಾ ಧನಂಜಯ್,&nbsp;ವೀಣಾ ಶರ್ಮಾ ಉಪಸ್ಥಿತರಿದ್ದರು</p></div>

ಕಾರ್ಯಕ್ರಮದಲ್ಲಿ ಕೆ. ಶಿವರುದ್ರಯ್ಯ, ಸಿಹಿಕಹಿ ಚಂದ್ರು ಹಾಗೂ ಸಿಹಿಕಹಿ ಗೀತಾ ಅವರನ್ನು ಗೌರವಿಸಲಾಯಿತು. ನೀಲಮ್ಮ, ಜಿಪಿಒ ಚಂದ್ರು, ಮೋತಿಲಾಲ ರೂ. ಚೌವ್ಹಾಣ, ಕೆ.ವಿ. ನಾಗರಾಜಮೂರ್ತಿ, ಶುಭಾ ಧನಂಜಯ್, ವೀಣಾ ಶರ್ಮಾ ಉಪಸ್ಥಿತರಿದ್ದರು

   

ಪ್ರಜಾವಾಣಿ ಚಿತ್ರ

ಬೆಂಗಳೂರು: ‘ನಮ್ಮೊಳಗಿರುವ ಕಲಾವಿದನನ್ನು ಜಾಗೃತಗೊಳಿಸಲು, ಜೀವಂತವಾಗಿಟ್ಟುಕೊಳ್ಳಲು, ಕಲಾ ಕೌಶಲ ವೃದ್ಧಿಸಿಕೊಳ್ಳಲು ಹಾಗೂ ಪಾತ್ರವೇ ನಾವಾಗುವ ಪ್ರಕ್ರಿಯೆ ಯಶಸ್ವಿಗೊಳಿಸಲು ರಂಗಭೂಮಿಯಲ್ಲಿ ಅಭಿನಯ ಮಾಡಬೇಕು. ಇಲ್ಲವಾದಲ್ಲಿ ಕಲಾವಿದ ಪೂರ್ಣನಾಗಲು ಸಾಧ್ಯವಿಲ್ಲ’ ಎಂದು ನಟ ಸಿಹಿಕಹಿ ಚಂದ್ರು ಅಭಿಪ್ರಾಯಪಟ್ಟರು. 

ADVERTISEMENT

ಕರ್ನಾಟಕ ನಾಟಕ ಅಕಾಡೆಮಿ ಮತ್ತು ನವದೆಹಲಿಯ ರಾಷ್ಟ್ರೀಯ ನಾಟಕ ಶಾಲೆ ಜಂಟಿಯಾಗಿ ‘ಪ್ರಜಾವಾಣಿ’ ಮತ್ತು ‘ಡೆಕ್ಕನ್ ಹೆರಾಲ್ಡ್’ ಮಾಧ್ಯಮ ಸಹಯೋಗದಲ್ಲಿ ಹಮ್ಮಿಕೊಂಡಿರುವ ‘ಭಾರತ ರಂಗ ಮಹೋತ್ಸವ’ ಹಾಗೂ ‘ರಂಗ ಪರಿಷೆ’ಯ ನಾಲ್ಕನೇ ದಿನವಾದ ಬುಧವಾರ ನಡೆದ ಕಾರ್ಯಕ್ರಮದಲ್ಲಿ, ಚಲನಚಿತ್ರ ನಿರ್ದೇಶಕ ಕೆ. ಶಿವರುದ್ರಯ್ಯ ಅವರಿಗೆ ‘ಉತ್ಸವ ಗೌರವ’ ನೀಡಿ ಸನ್ಮಾನಿಸಲಾಯಿತು.

ಈ ವೇಳೆ ಮಾತನಾಡಿದ ಸಿಹಿಕಹಿ ಚಂದ್ರು, ‘ನಾನು ಈಗಲೂ ರಂಗಭೂಮಿಯ ವಿದ್ಯಾರ್ಥಿಯಾಗಿದ್ದೇನೆ. ಪ್ರತಿ ನಾಟಕದಲ್ಲಿ ಹೊಸದನ್ನು ಕಲಿಯುತ್ತಾ ಇದ್ದೇನೆ. ಈ ಕ್ಷೇತ್ರದಲ್ಲಿ ಕಲಿಯುವುದು ಸಾಗರದಷ್ಟಿದೆ. ರಂಗಭೂಮಿ ಹಾಕಿದ ಅಡಿಪಾಯದಿಂದ ಚಲನಚಿತ್ರ, ಧಾರಾವಾಹಿಗಳಲ್ಲಿ ಪರಿಪೂರ್ಣವಾಗಿ ತೊಡಗಿಸಿಕೊಳ್ಳಲು ಸಾಧ್ಯವಾಗುತ್ತಿದೆ. ಎಲ್ಲ ಕೌಶಲಗಳನ್ನು ಜಾಗೃತವಾಗಿಟ್ಟುಕೊಳ್ಳಲು ರಂಗಭೂಮಿ ಸಹಕಾರಿ. ಈ ಕಲಾ ಪ್ರಕಾರದಲ್ಲಿ ನಮ್ಮನ್ನು ತೊಡಗಿಸಿಕೊಳ್ಳದಿದ್ದರೆ ಪರಿಪೂರ್ಣ ಕಲಾವಿದನಾಗಲು ಸಾಧ್ಯವಾಗದು’ ಎಂದು ಹೇಳಿದರು. 

ರಂಗ ಗೌರವ ಪ್ರದಾನ: 40 ವರ್ಷ ಪೂರೈಸಿರುವ ಉಡುಪಿಯ ‘ರಂಗಭೂಮಿ’ ಮತ್ತು ಚಾಮರಾಜನಗರದ ‘ಶಾಂತಲಾ ಕಲಾವಿದರು’ ತಂಡಗಳಿಗೆ ‘ರಂಗ ಗೌರವ’ ನೀಡಿ ಸನ್ಮಾನಿಸಲಾಯಿತು. 

ಕಲಾವಿದೆ ಸಿಹಿಕಹಿ ಗೀತಾ, ಕರ್ನಾಟಕ ಬಂಜಾರ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿಯ ಅಧ್ಯಕ್ಷ ಮೋತಿಲಾಲ ರೂ. ಚೌವ್ಹಾಣ, ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಅಧ್ಯಕ್ಷೆ ಶುಭಾ ಧನಂಜಯ್, ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷ ಕೆ.ವಿ. ನಾಗರಾಜಮೂರ್ತಿ, ರಿಜಿಸ್ಟ್ರಾರ್ ನೀಲಮ್ಮ, ರಾಷ್ಟ್ರೀಯ ನಾಟಕ ಶಾಲೆ ಬೆಂಗಳೂರು ಕೇಂದ್ರದ ನಿರ್ದೇಶಕಿ ವೀಣಾ ಶರ್ಮಾ ಉಪಸ್ಥಿತರಿದ್ದರು.

ಇದಕ್ಕೂ ಮೊದಲು ನಡೆದ ‘ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪ ಶತಮಾನೋತ್ಸವ ಸಂಭ್ರಮ’ ಕವಿಗೋಷ್ಠಿಯಲ್ಲಿ, ಕವಯತ್ರಿ ಹೇಮಲತಾ ವಸ್ತ್ರದ ಅವರು ಅಧ್ಯಕ್ಷತೆ ವಹಿಸಿದ್ದರು. ಚಿತ್ರ ವೆಂಕಟರಾಜು ಅವರು ರಂಗ ಚಿಂತನೆ ನಡೆಸಿಕೊಟ್ಟರು. ಪದ್ಮ ಟಿ. ಚಿನ್ಮಯಿ, ಜಯಶ್ರೀ ಕಂಬಾರ, ಕುಮಾರಸ್ವಾಮಿ ಬಿಜ್ಜಿಹಳ್ಳಿ, ಲಕ್ಷ್ಮೀ ಶ್ರೀನಿವಾಸ, ಶಶಿಕಲಾ ಆರ್. ಯರ್ತಿಗಾನಹಳ್ಳಿ, ಕುಮಾರ್ ಇಂದ್ರಬೆಟ್ಟ, ದಯಾ ಗಂಗನಗಟ್ಟ, ನೂತನ್ ದೋಶೆಟ್ಟಿ, ರಂಗಸ್ವಾಮಿ ಸಿದ್ದಯ್ಯ, ಸೈಯದ್ ಯೇಜಸ್ ಪಾಷ, ಮಂಜು ಪಾಂಡವಪುರ, ಶಿವಕುಮಾರ್ ಕೆಂಪನಪುರ, ಆನಂದ ಕುಮಾರ್ ಎಸ್.ಬಿ. ಹಾಗೂ ಪ್ರೇಮಾ ಪಿ.ವೈ.ಕೆ. ಮೋಳೆ ಕವಿಗೋಷ್ಠಿಯಲ್ಲಿ ಭಾಗವಹಿಸಿದ್ದರು.

ನಾಟಕಗಳ ಪ್ರದರ್ಶನ

ಕೋಲ್ಕತ್ತದ ಭಗ್ವತಿ ನೃತ್ಯ ಮಂದಿರ ತಂಡವು ‘ರುದ್ರಗಣಿಕ’ ಮೂಕ ನಾಟಕ ಪ್ರದರ್ಶಿಸಿತು. ಧಾರವಾಡ ರಂಗಾಯಣದಿಂದ ‘ಕಂದಗಲ್ಲರಿಗೆ ನಮಸ್ಕಾರ ಅರ್ಥಾತ್ ಕಂದಗಲ್ಲ ಭಾರತ’ ನಾಟಕ ಯುವ ರಂಗ ಸಂಭ್ರಮದ ಭಾಗವಾಗಿ ‘ಶತಮರ್ಕಟ’ ನಾಟಕವನ್ನು ಪ್ರಸ್ತುತಪಡಿಸಲಾಯಿತು. ರಂಗಬದುಕು ಟ್ರಸ್ಟ್ ವತಿಯಿಂದ ವೃತ್ತಿ ಭೂಮಿಯ ರಂಗಗೀತೆಗಳು ಪದ ದೇವರಾಜ್ ತಂಡದಿಂದ ಪೌರಾಣಿಕ ರಂಗಗೀತೆಗಳು ರಂಗಚಕ್ರ ತಂಡದಿಂದ ರಂಗಗೀತೆಗಳು ಮಹಾದೇವಿ ರಾಠೋಡ್ ತಂಡ ಮತ್ತು ಕಲಬುರಗಿಯ ಬಂಜಾರ ಮಹಿಳಾ ನೃತ್ಯ ಮಂದೇವಾಲ ತಾಂಡ ತಂಡಗಳು ಲಂಬಾಣಿ ನೃತ್ಯ ಪ್ರದರ್ಶಿಸಿದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.