
ಬೆಂಗಳೂರು: ಬಿಹಾರದಲ್ಲಿ ಕೊಲೆ, ಕೊಲೆ ಯತ್ನ ಸೇರಿದಂತೆ 40ಕ್ಕೂ ಅಧಿಕ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿ ನಗರಕ್ಕೆ ಬಂದು ತಲೆಮರೆಸಿಕೊಂಡಿದ್ದ ತಂದೆ ಹಾಗೂ ಮಗನನ್ನು ಬೆಂಗಳೂರಿನ ಈಶಾನ್ಯ ವಿಭಾಗದ ಪೊಲೀಸರ ನೆರವು ಪಡೆದು, ಬಿಹಾರದ ವಿಶೇಷ ಕಾರ್ಯಪಡೆ ಪೊಲೀಸರು ಬಂಧಿಸಿದ್ದಾರೆ.
ಮಾಣಿಕ್ ಸಿಂಗ್ (30) ಹಾಗೂ ಅವರ ತಂದೆ ಮನೋಜ್ ಸಿಂಗ್ (65) ಬಂಧಿತರು. ಬಿಹಾರದಿಂದ ನಗರಕ್ಕೆ ಬಂದು ಕೊಡಿಗೇಹಳ್ಳಿ ವ್ಯಾಪ್ತಿಯಲ್ಲಿ ನೆಲಸಿದ್ದರು.
ಮಾಣಿಕ್ ಸಿಂಗ್ ಮತ್ತು ಮನೋಜ್ ಸಿಂಗ್ ಇಬ್ಬರೂ ಬಿಹಾರದ ರೌಡಿಶೀಟರ್‌ಗಳು. ಇಬ್ಬರ ವಿರುದ್ಧವೂ 24ಕ್ಕೂ ಅಧಿಕ ಕೊಲೆ, ಕೊಲೆ ಯತ್ನ ಆರೋಪ ಸೇರಿದಂತೆ ಒಟ್ಟು 40ಕ್ಕೂ ಅಧಿಕ ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು ಹೇಳಿದರು.
ಬಿಲ್ಡರ್‌ಗಳು, ಉದ್ಯಮಿಗಳಿಗೆ ಕರೆ ಮಾಡಿ ಬೆದರಿಕೆ ಹಾಕುತ್ತಿದ್ದರು. ಬಿಹಾರ, ಜಾರ್ಖಂಡ್ ಹಾಗೂ ಪಶ್ಚಿಮ ಬಂಗಾಳ ಸೇರಿದಂತೆ ಹಲವು ರಾಜ್ಯಗಳಲ್ಲಿ ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು ಹೇಳಿದರು.
ಇಬ್ಬರನ್ನೂ ಬಿಹಾರ ಪೊಲೀಸರ ವಶಕ್ಕೆ ಒಪ್ಪಿಸಲಾಗಿದೆ. ಆರೋಪಿಗಳು ಎರಡು ವರ್ಷಗಳಿಂದ ಕೊಡಿಗೇಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬಾಡಿಗೆ ಮನೆ ಪಡೆದು ವಾಸವಿದ್ದರು. ಇಬ್ಬರಿಗೂ ಆಶ್ರಯ ನೀಡಿದವರು ಯಾರು ಎಂಬುದರ ಕುರಿತು ತನಿಖೆ ನಡೆಸಲಾಗುತ್ತಿದೆ. ಆಶ್ರಯ ನೀಡಿದವರ ವಿರುದ್ಧವೂ ಕ್ರಮ ತೆಗೆದುಕೊಳ್ಳಲಾಗುವುದು ಎಂದು ನಗರ ಪೊಲೀಸ್ ಕಮಿಷನರ್ ಸೀಮಾಂತ್ ಕುಮಾರ್ ಸಿಂಗ್ ಮಾಹಿತಿ ನೀಡಿದರು.
ಮಾಣಿಕ್‌ಗಾಗಿ ಐದು ವರ್ಷಗಳಿಂದ ಬಿಹಾರ ಪೊಲೀಸರು, ಬೇರೆ ಕಡೆ ಹುಡುಕಾಟ ನಡೆಸುತ್ತಿದ್ದರು. ಆರೋಪಿಗಳ ಸುಳಿವು ಸಿಕ್ಕಿರಲಿಲ್ಲ. ಆರೋಪಿಗಳ ಬಂಧನಕ್ಕೆ ಕಾರ್ಯಾಚರಣೆ ನಡೆಸಿದ ತಂಡಗಳಿಗೆ ಬಿಹಾರ ಪೊಲೀಸರು ₹3 ಲಕ್ಷ ಬಹುಮಾನ ಘೋಷಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.