ಬೆಂಗಳೂರು: ‘ಬೈಕ್ ಟ್ಯಾಕ್ಸಿಗಳಿಗೆ 13 ರಾಜ್ಯಗಳಲ್ಲಿ ನಿಯಮಾವಳಿ ರೂಪಿಸಿರುವಾಗ ನೀವು ಯಾಕೆ ನಿಷೇಧ ಹೇರಿದ್ದೀರಿ’ ಎಂದು ಸರ್ಕಾರವನ್ನು ಬುಧವಾರ ವಿಚಾರಣೆ ವೇಳೆ ಹೈಕೋರ್ಟ್ ಪ್ರಶ್ನಿಸಿತ್ತು. ಇದನ್ನೇ ಅನುಮತಿ ಎಂದು ಭಾವಿಸಿದ ಅಗ್ರಿಗೇಟರ್ ಕಂಪನಿಗಳು ಗುರುವಾರ ಬೈಕ್ ಟ್ಯಾಕ್ಸಿಗಳನ್ನು ರಸ್ತೆಗಳಿಸಿವೆ.
ಸರ್ಕಾರವು ಬೈಕ್ ಟ್ಯಾಕ್ಸಿಗಳಿಗೆ ಜೂನ್ 16ರಿಂದ ನಿಷೇಧ ಹೇರಿತ್ತು. ಇದನ್ನು ‘ಎಎನ್‌ಐ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್ (ಓಲಾ)’ ಕಂಪನಿ ಪ್ರಶ್ನಿಸಿ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿತ್ತು. ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ನೇತೃತ್ವದ ವಿಭಾಗೀಯ ನ್ಯಾಯಪೀಠ ಬುಧವಾರ ವಿಚಾರಣೆ ನಡೆಸಿತ್ತು. ನಿಷೇಧ ಹೇರುವುದು ತರವಲ್ಲ. ಈಗ ವಿಧಿಸಿರುವ ನಿಷೇಧವನ್ನು ತುಂಬಾ ಸಮಯ ಮುಂದುವರಿಸಲು ಸಾಧ್ಯವಿಲ್ಲ. ನೀತಿ ಚೌಕಟ್ಟು ರೂಪಿಸುವ ಬಗ್ಗೆ ಸರ್ಕಾರದ ನಿಲುವು ಏನು ಎಂಬುದನ್ನು ಸೆ.22ರ ಒಳಗೆ ಸ್ಪಷ್ಟಪಡಿಸಬೇಕು ಎಂದು ತಿಳಿಸಿತ್ತು.
ವಿಚಾರಣೆ ವೇಳೆ ಸರ್ಕಾರವನ್ನು ಪ್ರಶ್ನಿಸಿದ್ದನ್ನೇ ತಪ್ಪಾಗಿ ಅರ್ಥೈಸಿಕೊಂಡು ಅಗ್ರಿಗೇಟರ್‌ಗಳು ಬೈಕ್‌ಟ್ಯಾಕ್ಸಿ ಸಂಚಾರ ಆರಂಭಿಸಿದ್ದವು.
ಸಚಿವರಿಗೆ ಮನವಿ: ಹೈಕೋರ್ಟ್‌ನ ಸೂಚನೆಯಂತೆ ಸರ್ಕಾರವು ಬೈಕ್ ಟ್ಯಾಕ್ಸಿಗಳನ್ನು ನಿಷೇಧಿಸಿತ್ತು. ಹೈಕೋರ್ಟ್ ನಿಷೇಧವನ್ನು ತೆರವುಗೊಳಿಸಿಲ್ಲ. ಆದರೂ, ಬೈಕ್ ಟ್ಯಾಕ್ಸಿಗಳನ್ನು ಓಡಿಸಿರುವುದು ನ್ಯಾಯಾಂಗ ನಿಂದನೆಯಾಗಿದೆ. ಅಗ್ರಿಗೇಟರ್ ಕಂಪನಿಗಳು ಇಲ್ಲಿನ ಕಾನೂನಿಗೆ ಎಷ್ಟು ಬೆಲೆ ನೀಡುತ್ತವೆ ಎಂಬುದು ಇದರಿಂದ ಗೊತ್ತಾಗುತ್ತದೆ. ಕೂಡಲೇ ಆ ಕಂಪನಿಗಳ ಮೇಲೆ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಬೇಕು ಎಂದು ಒತ್ತಾಯಿಸಿ ರಾಜ್ಯ ಖಾಸಗಿ ಸಾರಿಗೆ ಸಂಘಗಳ ಒಕ್ಕೂಟವು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರಿಗೆ ಗುರುವಾರ ಮನವಿ ಸಲ್ಲಿಸಿತು.
‘ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಸಾರಿಗೆ ಇಲಾಖೆಯ ಅಧಿಕಾರಿಗಳಿಗೆ ಸಚಿವರು ಸ್ಥಳದಲ್ಲಿಯೇ ಸೂಚನೆ ನೀಡಿದ್ದಾರೆ’ ಎಂದು ಒಕ್ಕೂಟದ ಅಧ್ಯಕ್ಷ ನಟರಾಜ ಶರ್ಮ ‘ಪ್ರಜಾವಾಣಿ’ಗೆ ತಿಳಿಸಿದರು.
ಹೈಕೋರ್ಟ್ ತೀರ್ಪು ನಮ್ಮ ಪರ ಬರಲಿದೆ ಎಂಬ ವಿಶ್ವಾಸ ಇದೆ. ಆತುರದಿಂದ ಬೈಕ್ ಟ್ಯಾಕ್ಸಿಗಳನ್ನು ಓಡಿಸಿ ತೊಂದರೆ ತಂದುಕೊಳ್ಳುವುದು ಬೇಡ. ಒಂದು ತಿಂಗಳು ಕಾಯಬೇಕು’ ಎಂದು ಬೈಕ್ ಟ್ಯಾಕ್ಸಿ ಅಸೋಸಿಯೇಶನ್ ಅಧ್ಯಕ್ಷ ಮೊಹಮ್ಮದ್ ಸಲೀಂ ಅವರು ಮನವಿ ಮಾಡಿದ್ದಾರೆ. ಸರ್ಕಾರವನ್ನು ಹೈಕೋರ್ಟ್ ಪ್ರಶ್ನಿಸಲು ಆರಂಭಿಸಿದೆ. ಇಂಥ ಸಮಯದಲ್ಲಿ ಎಚ್ಚರದಿಂದ ಇರಬೇಕು ಎಂದು ತಿಳಿಸಿದ್ದಾರೆ. ‘ಅಗ್ರಿಗೇಟರ್ ಕಂಪನಿಗಳ ಒತ್ತಡಕ್ಕೆ ಮಣಿದು ಕೆಲವು ಬೈಕ್ ಟ್ಯಾಕ್ಸಿ ಚಾಲಕರು ರಸ್ತೆಗೆ ಇಳಿದಿದ್ದಾರೆ. ಕಂಪನಿಗಳಿಗೆ ತೊಂದರೆಯಾಗುವುದಿಲ್ಲ. ಬೈಕ್ ಟ್ಯಾಕ್ಸಿಯವರೇ ಸಮಸ್ಯೆ ಅನುಭವಿಸಬೇಕಾಗುತ್ತದೆ’ ಎಂದು ಬೈಕ್ ಟ್ಯಾಕ್ಸಿ ಚಾಲಕರೊಬ್ಬರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.