ADVERTISEMENT

ಬೈಕ್ ಟ್ಯಾಕ್ಸಿಗೆ ಅನುಮತಿ ನೀಡದಂತೆ ಒತ್ತಾಯ: ವಿಷ ಕುಡಿದ ಆಟೊರಿಕ್ಷಾ ಚಾಲಕ‍

​ಪ್ರಜಾವಾಣಿ ವಾರ್ತೆ
Published 9 ಜನವರಿ 2023, 20:04 IST
Last Updated 9 ಜನವರಿ 2023, 20:04 IST
ಆಟೊರಿಕ್ಷಾ ಚಾಲಕರ ಪ್ರತಿಭಟನೆ
ಆಟೊರಿಕ್ಷಾ ಚಾಲಕರ ಪ್ರತಿಭಟನೆ   

ಬೆಂಗಳೂರು: ‘ರಾಜ್ಯದಲ್ಲಿ ಬೈಕ್‌ ಟ್ಯಾಕ್ಸಿಗಳಿಗೆ ಅನುಮತಿ ನೀಡಬಾರದು’ ಎಂದು ಆಗ್ರಹಿಸಿ ಸಾರಿಗೆ ಇಲಾಖೆ ಕಚೇರಿ ಎದುರು ಆಟೊರಿಕ್ಷಾ ಚಾಲಕರು ಸೋಮವಾರ ಪ್ರತಿಭಟನೆ ನಡೆಸಿದರು. ಇದೇ ವೇಳೆ ಚಾಲಕ ಸುನೀಲ್ ಎಂಬುವವರು ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದು, ಅಸ್ವಸ್ಥಗೊಂಡಿರುವ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಶಾಂತಿನಗರ ಬಸ್‌ ನಿಲ್ದಾಣ ಕಟ್ಟಡದ ಎರಡನೇ ಮಹಡಿಯಲ್ಲಿರುವ ಸಾರಿಗೆ ಇಲಾಖೆ ಮುಖ್ಯ ಕಚೇರಿ ಬಳಿ ಸೇರಿದ್ದ ಚಾಲಕರು, ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

ಶಾಂತಿನಗರ ಮುಖ್ಯರಸ್ತೆಯಲ್ಲೂ ಜಮಾಯಿಸಿದ್ದ ಚಾಲಕರು, ವಾಹನಗಳ ಸಂಚಾರಕ್ಕೆ ಅಡ್ಡಿಪಡಿಸಿ ಪ್ರತಿಭಟನೆ ಮುಂದುವರಿಸಿದರು. ಬಿಎಂಟಿಸಿ ಬಸ್‌ ಚಕ್ರದಡಿ ಮಲಗಿ ಆಕ್ರೋಶ ಹೊರಹಾಕಿದರು. ಪ್ರತಿಭಟನೆಯಿಂದಾಗಿ ಶಾಂತಿನಗರ ಹಾಗೂ ಸುತ್ತಮುತ್ತ ಸ್ಥಳಗಳಲ್ಲಿ ವಿಪರೀತ ದಟ್ಟಣೆ ಉಂಟಾಯಿತು.

ADVERTISEMENT

ಸ್ಥಳಕ್ಕೆ ಬಂದ ಪೊಲೀಸರು, ‘ಪ್ರತಿಭಟನೆಗೆ ಅನುಮತಿ ಇಲ್ಲ. ಸ್ಥಳದಿಂದ ಹೊರಟು ಹೋಗಿ’ ಎಂದರು. ಇದೇ ವೇಳೆ ಚಾಲಕರು ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿ ನಡೆಯಿತು. ಪೊಲೀಸರು, ಲಘು ಲಾಠಿ ಬೀಸಿ ಪ್ರತಿಭಟನಕಾರರನ್ನು ಚದುರಿಸಿದರು.

ಪ್ರತಿಭಟನೆ ನಡೆಸಿದರೂ ಕಿಮ್ಮತ್ತಿಲ್ಲ: ‘ಕೋವಿಡ್‌ ಲಾಕ್‌ಡೌನ್‌ನಿಂದ ಆಟೊ ಚಾಲಕರ ಬದುಕು ಬೀದಿಗೆ ಬಂದಿತ್ತು. ಕೋವಿಡ್ ನಂತರ ಆರ್ಥಿಕತೆಯಲ್ಲಿ ಚೇತರಿಕೆ ಕಂಡುಬಂದಿದೆ. ವ್ಯಾಪಾರ–ವಹಿವಾಟು ಯಥಾಸ್ಥಿತಿಗೆ ತಲುಪಿ, ಆಟೊ ಚಾಲಕರು ಸುಧಾರಿಸಿಕೊಳ್ಳುತ್ತಿದ್ದಾರೆ. ಇಂಥ ಸ್ಥಿತಿಯಲ್ಲಿ ಬೈಕ್‌ ಟ್ಯಾಕ್ಸಿಗೆ ಅನುಮತಿ ನೀಡಿ, ಚಾಲಕರಿಗೆ ಅನ್ಯಾಯ ಮಾಡಲಾಗುತ್ತಿದೆ’ ಎಂದು ಪ್ರತಿಭಟನಕಾರರು ದೂರಿದರು.

‘ಬೈಕ್ ಟ್ಯಾಕ್ಸಿ ವಿರೋಧಿಸಿ ನಿರಂತರವಾಗಿ ಪ್ರತಿಭಟನೆ ನಡೆಸಲಾಗುತ್ತಿದೆ. ನಮ್ಮ ಪ್ರತಿಭಟನೆಗೆ ಸಾರಿಗೆ ಇಲಾಖೆ ಸಚಿವರು ಹಾಗೂ ಅಧಿಕಾರಿಗಳು ಕಿಮ್ಮತ್ತು ನೀಡುತ್ತಿಲ್ಲ. ಇದೇ ವರ್ತನೆ ಮುಂದುವರಿದರೆ, ಗಂಭೀರ ಸ್ವರೂಪದ ಹೋರಾಟ ನಡೆಸಬೇಕಾಗುತ್ತದೆ’ ಎಂದು ಎಚ್ಚರಿಸಿದರು.

ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ: ‘ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿರುವ ಆಟೊ ಚಾಲಕ ಸುನೀಲ್‌ ಅವರಿಗೆ ವಿಲ್ಸನ್ ಗಾರ್ಡನ್ ಅಗಡಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. 24 ಗಂಟೆಯ ಬಳಿಕ ಅವರ ಆರೋಗ್ಯ ಸ್ಥಿತಿ ಬಗ್ಗೆ ಮಾಹಿತಿ ನೀಡಲಾಗುವುದೆಂದು ವೈದ್ಯರು ಹೇಳಿದ್ದಾರೆ’ ಎಂದು ಕುಟುಂಬದವರು ತಿಳಿಸಿದರು.

*
ಬೈಕ್ ಟ್ಯಾಕ್ಸಿ ಪರಿಚಯಿಸುವ ವಿಷಯ ಹೈಕೋರ್ಟ್‌ನಲ್ಲಿದ್ದು, ನ್ಯಾಯಾಲಯದಿಂದ ಸಮ್ಮತಿ ದೊರೆತರೆ ಮರುದಿನವೇ ಇ–ಬೈಕ್ ಟ್ಯಾಕ್ಸಿ ಪರಿಚಯಿಸಲು ನಿರ್ಧರಿಸಿದ್ದೇವೆ.
-ಹೇಮಂತ್‌ಕುಮಾರ್, ಸಾರಿಗೆ ಇಲಾಖೆ ಹೆಚ್ಚುವರಿ ಆಯುಕ್ತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.