ADVERTISEMENT

ಬೆಂಗಳೂರು | ಐಷಾರಾಮಿ ಬೈಕ್ ಕಳ್ಳನ ಬಂಧನ: ಏಳು ದ್ವಿಚಕ್ರ ವಾಹನ ವಶ

​ಪ್ರಜಾವಾಣಿ ವಾರ್ತೆ
Published 31 ಡಿಸೆಂಬರ್ 2024, 15:23 IST
Last Updated 31 ಡಿಸೆಂಬರ್ 2024, 15:23 IST
ಸಿರಾಜ್ ಶೇಖ್
ಸಿರಾಜ್ ಶೇಖ್   

ಬೆಂಗಳೂರು: ನಗರದ ವಿವಿಧೆಡೆ ರಾಯಲ್ ಎನ್‌ಫೀಲ್ಡ್‌ 350 ಕ್ಲಾಸಿಕ್ ದ್ವಿಚಕ್ರ ವಾಹನ ಕಳವು ಮಾಡುತ್ತಿದ್ದ ಆರೋಪಿಯನ್ನು ಸುದ್ದಗುಂಟೆ ಪಾಳ್ಯ ಠಾಣೆ ಪೊಲೀಸರು ಬಂಧಿಸಿ, ₹ 15 ಲಕ್ಷ ಮೌಲ್ಯದ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.

ತಾವರೆಕೆರೆ ನಿವಾಸಿ ಸಿರಾಜ್ ಶೇಖ್ (35) ಬಂಧಿತ. ಆರೋಪಿಯಿಂದ ಏಳು ದ್ವಿಚಕ್ರ ವಾಹನಗಳನ್ನು ಜಪ್ತಿ ಮಾಡಲಾಗಿದೆ.

ಠಾಣಾ ವ್ಯಾಪ್ತಿಯ ನಿವಾಸಿಯೊಬ್ಬರು ಮನೆಯ ಮುಂಭಾಗ ನಿಲ್ಲಿಸಿದ್ದ ರಾಯಲ್ ಎನ್‌ಫೀಲ್ಡ್‌ ವಾಹನ ಕಳವಾಗಿತ್ತು. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದ ಪೊಲೀಸರು, ಬಾತ್ಮೀದಾರರ ಮಾಹಿತಿ, ಸಿಸಿಟಿವಿ ಕ್ಯಾಮೆರಾ ಸುಳಿವು ಆಧರಿಸಿ ಆರೋಪಿಯನ್ನು ಕೃಷ್ಣಮೂರ್ತಿ ಲೇಔಟ್‌ನಲ್ಲಿ ಬಂಧಿಸಿದ್ದಾರೆ .

ADVERTISEMENT

‘ಆರೋಪಿಯು ತನ್ನ ಇಬ್ಬರು ಸಹಚರರ ಜತೆ ಸೇರಿ ಮನೆ ಹಾಗೂ ಪೇಯಿಂಗ್ ಗೆಸ್ಟ್‌ ಮುಂಭಾಗ ನಿಲ್ಲಿಸಿದ ಹ್ಯಾಂಡಲ್ ಲಾಕ್‌ ಹಾಕದ ಐಷಾರಾಮಿ ದ್ವಿಚಕ್ರ ವಾಹನಗಳನ್ನು ಕಳವು ಮಾಡುತ್ತಿದ್ದ. ಕದ್ದ ವಾಹನಗಳನ್ನು ಬೆಳಗಾವಿ ಜಿಲ್ಲೆಯಲ್ಲಿ ಮಾರಾಟ ಮಾಡಿದ್ದ. ವಾಹನಗಳ ದಾಖಲೆ ಇಲ್ಲದ ಕಾರಣ ಲಕ್ಷಾಂತರ ರೂಪಾಯಿ ಮೌಲ್ಯದ ವಾಹನಗಳನ್ನು ₹ 40,000ದಿಂದ ₹ 50,000ಕ್ಕೆ ಗ್ರಾಮಾಂತರ ಪ್ರದೇಶದಲ್ಲಿ ಮಾರಾಟ ಮಾಡುತ್ತಿದ್ದ’ ಎಂದು ಪೊಲೀಸರು ತಿಳಿಸಿದ್ದಾರೆ.

‘ಸುಲಭವಾಗಿ ಹಣ ಸಂಪಾದಿಸುವ ಉದ್ದೇಶದಿಂದ ಆರೋಪಿ ಕಳ್ಳತನಕ್ಕೆ ಇಳಿದಿದ್ದ. ಕೃತ್ಯಕ್ಕೆ ಸಹಕರಿಸಿದ ಇಬ್ಬರು ನಾಪತ್ತೆಯಾಗಿದ್ದಾರೆ. ಅವರ ಪತ್ತೆಗೆ ಶೋಧ ಕಾರ್ಯ ಕೈಗೊಳ್ಳಲಾಗಿದೆ. ಆರೋಪಿಯು ಬೆಳಗಾವಿ ಮತ್ತು ಮಹಾರಾಷ್ಟ್ರದಲ್ಲಿ ಮಾರಾಟ ಮಾಡಿದ್ದ ಹಾಗೂ ಬಚ್ಚಿಟ್ಟಿದ್ದ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ’ ಎಂದು ಹೇಳಿದರು.

ಆರೋಪಿಯ ಬಂಧನದಿಂದ ಸುದ್ದಗುಂಟೆ ಠಾಣೆಯ ವ್ಯಾಪ್ತಿಯಲ್ಲಿ ದಾಖಲಾಗಿದ್ದ ಏಳು ದ್ವಿಚಕ್ರ ವಾಹನ ಕಳವು ಪ್ರಕರಣಗಳು ಪತ್ತೆಯಾಗಿವೆ. ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.