
ರಸ್ತೆ ಗುಂಡಿ
ಬೆಂಗಳೂರು: ಬೆಂಗಳೂರಿನ ಕಸ ವಿಲೇವಾರಿ ಮತ್ತು ರಸ್ತೆ ಗುಂಡಿ ಸಮಸ್ಯೆಗಳ ವಿರುದ್ಧ ಒಂದು ವಾರ ಕಾಲ ಬಿಜೆಪಿ ಜನಪ್ರತಿನಿಧಿಗಳ ವತಿಯಿಂದ ಸರ್ಕಾರದ ವಿರುದ್ಧ ಅಭಿಯಾನ ನಡೆಸಲಾಗುವುದು ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ ಹೇಳಿದ್ದಾರೆ.
ಪಕ್ಷದ ಶಾಸಕರು ಮತ್ತು ಸಂಸದರೊಂದಿಗಿನ ಸಭೆ ಬಳಿಕ ಅವರು ಸುದ್ದಿಗಾರರ ಜತೆ ಮಾತನಾಡಿದರು.
‘ಬೆಂಗಳೂರಿನ ಸಮಸ್ಯೆಗಳ ಕುರಿತು ಚರ್ಚಿಸಲು ಎಲ್ಲ ಜನಪ್ರತಿನಿಧಿಗಳ ಸಭೆ ಮಾಡಿದ್ದೇವೆ. ಕಾಂಗ್ರೆಸ್ ಸರ್ಕಾರದ ದುರಾಡಳಿತದಿಂದಾಗಿ ಬೆಂಗಳೂರು ಗಾರ್ಬೇಜ್ ಸಿಟಿಯಾಗಿ ಬದಲಾಗಿದೆ. ಎಲ್ಲ ರಸ್ತೆಗಳಲ್ಲಿ ಗುಂಡಿಗಳು ಮತ್ತು ಕಸದ ರಾಶಿ ಕಂಡುಬರುತ್ತಿದೆ. ನಗರಕ್ಕೆ ದ್ರೋಹ ಬಗೆದ ಸರ್ಕಾರದ ವಿರುದ್ಧ ಹೋರಾಟ ಮಾಡಲಾಗುವುದು. ಅಲ್ಲದೇ, ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಇದೇ 6 ರಿಂದ 15 ರವರೆಗೆ ಸಹಿ ಸಂಗ್ರಹ ಅಭಿಯಾನವನ್ನೂ ನಡೆಸಲಾಗುವುದು’ ಎಂದರು.
‘ಎ ಖಾತಾ, ಬಿ ಖಾತಾ ವಿಚಾರವಾಗಿ ಜನರ ಅಭಿಪ್ರಾಯ ಸಂಗ್ರಹಿಸಲಾಗುವುದು. ಇದರಲ್ಲಿ ಸರ್ಕಾರ ದುಡ್ಡು ಹೊಡೆಯುವ ಸ್ಕೀಮು ಮಾಡಿದೆ. ಬೆಂಗಳೂರಿನ ಅಭಿವೃದ್ಧಿಗೆ ಸರ್ಕಾರದ ಬಳಿ ಹಣವಿಲ್ಲ. ಆ ಹಣವನ್ನು ಹೊಂದಿಸಲು ಈ ಕ್ರಮ ತರಬೇಕಾಗಿಲ್ಲ. ಇಷ್ಟೊಂದು ಹಣವನ್ನು ಜನರು ಪಾವತಿಸಲು ಸಾಧ್ಯವಿಲ್ಲ. ನೋಂದಣಿ ಮೇಲೆ ಶೇ 5ರಷ್ಟು ಹೆಚ್ಚಿಸಿ ಕಮಿಷನ್ ಹೊಡೆಯಲು ಪ್ರಯತ್ನ ನಡೆಸಲಾಗಿದೆ’ ಎಂದು ಅಶೋಕ ದೂರಿದರು.
‘ಕಸಕ್ಕೂ ಸೆಸ್ ಹಾಕಿ ಜನರ ಮೇಲೆ ಹೊರೆ ಹಾಕಲಾಗಿದೆ. ಬೆಸ್ಕಾಂನಲ್ಲಿ ಒಸಿ, ಸಿಸಿ ಮೂಲಕ ಹಣ ಸಂಗ್ರಹಿಸಲಾಗುತ್ತಿದೆ. ತಾತ್ಕಾಲಿಕವಾಗಿ ವಿದ್ಯುತ್ ಪಡೆದರೆ ಮೂರು ಪಟ್ಟು ಶುಲ್ಕ ನೀಡಬೇಕಿದ್ದು, ಇದನ್ನೇ ಬೆಸ್ಕಾಂನಿಂದ ಪ್ರೋತ್ಸಾಹಿಸಲಾಗುತ್ತಿದೆ. ಜನರಿಗೆ ಇಂತಹ ದುಬಾರಿ ಬ್ರ್ಯಾಂಡ್ ಬೆಂಗಳೂರು ಬೇಕಿಲ್ಲ. ಸಾಮಾನ್ಯ ಜನರ ಬಗ್ಗೆ ಚಿಂತಿಸುವ ಬೆಂಗಳೂರು ಬೇಕಿದೆ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.