ADVERTISEMENT

ಬೆಂಗಳೂರಿಗೆ ನೀಡಿದ್ದ ’ವಚನ’ ಮರೆತ ಬಿಜೆಪಿ

ನಗರದ ಸೌಂದರ್ಯ ಕಾಪಾಡಲು ಫ್ಲೆಕ್ಸ್‌ ಬ್ಯಾನರ್‌ ನಿಷೇಧಿಸುವುದಾಗಿ ಪ್ರಣಾಳಿಕೆಯಲ್ಲಿ ಭರವಸೆ ನೀಡಿತ್ತು ಪಕ್ಷ

​ಪ್ರಜಾವಾಣಿ ವಾರ್ತೆ
Published 28 ಜುಲೈ 2021, 19:51 IST
Last Updated 28 ಜುಲೈ 2021, 19:51 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಜಾಹೀರಾತು ಮಾಫಿಯಾಕ್ಕೆ ಮಣೆ– ಭಾಗ 2

ಬೆಂಗಳೂರು: ‘ಸ್ವಚ್ಛ ನಗರ ನಿರ್ಮಾಣಕ್ಕಾಗಿ ನಗರದಲ್ಲಿ ಫ್ಲೆಕ್ಸ್‌ ಹಾಗೂ ಬ್ಯಾನರ್‌ಗಳಿಗೆ ಸಂಪೂರ್ಣ ನಿಷೇಧ ಹೇರುತ್ತೇವೆ’... 2018ರ ವಿಧಾನಸಭಾ ಚುನಾವಣೆಯಲ್ಲಿ ಬೆಂಗಳೂರಿನ ಅಭಿವೃದ್ಧಿ ಕುರಿತು ಬಿಡುಗಡೆ ಮಾಡಿದ್ದ ‘ನಮ್ಮ ಬೆಂಗಳೂರಿಗೆ ನಮ್ಮ ವಚನ’ ಪ್ರಣಾಳಿಕೆಯಲ್ಲಿ ಬಿಜೆಪಿ ನೀಡಿದ್ದ ಭರವಸೆ ಇದು.

ಆದರೆ, ಬಿ.ಎಸ್‌.ಯಡಿಯೂರಪ್ಪ ನೇತೃತ್ವದ ಸರ್ಕಾರ ಕೊನೆಯ ದಿನ‘ಬಿಬಿಎಂಪಿ ಜಾಹೀರಾತು ನಿಯಮಗಳು 2019’ ಅನ್ನು ಜಾರಿಗೊಳಿಸುವ ಸಲುವಾಗಿ ಹೊರಡಿಸಿದ ಅಧಿಸೂಚನೆ ಈ ‘ವಚನ’ಕ್ಕೆ ತದ್ವಿರುದ್ಧವಾಗಿದೆ. ವಾಣಿಜ್ಯ ಉದ್ದೇಶದ ಹೋರ್ಡಿಂಗ್‌ಗಳಿಗೆ ಈಗಾಗಲೇ ಜಾರಿಯಲ್ಲಿದ್ದ ನಿಷೇಧವನ್ನು ತೆರವುಗೊಳಿಸುವ ಮೂಲಕ ‘ನಗರದ ಸೌಂದರ್ಯ’ ಕಾಪಾಡುವ ‘ವಚನ’ವನ್ನು ಪಕ್ಷವು ಮರೆತೇ ಬಿಟ್ಟಿದೆ. ‘ಇಂತಹ ತೀರ್ಮಾನವನ್ನು ನಮ್ಮ ಪಕ್ಷದ ಸರ್ಕಾರ ಕೈಗೊಳ್ಳಬಾರದಿತ್ತು’ ಎಂದು ಬಿಜೆಪಿಯ ಪದಾಧಿಕಾರಿಗಳೇ ಹೇಳುವ ಪರಿಸ್ಥಿತಿ ನಿರ್ಮಾಣವಾಗಿದೆ.

ADVERTISEMENT

ನಗರದಲ್ಲಿ ಫ್ಲೆಕ್ಸ್‌ಗಳ ಹಾವಳಿ ತಾರಕಕ್ಕೆ ಏರುವುದು ಧಾರ್ಮಿಕ ಹಬ್ಬ ಹರಿದಿನ, ಜಾತ್ರೆಗಳ ಕಾಲದಲ್ಲಿ. ಧಾರ್ಮಿಕ ಸಂಘ ಸಂಸ್ಥೆಗಳು, ಧಾರ್ಮಿಕ ಮುಖಂಡರು, ರಾಜಕೀಯ ಮುಖಂಡರು ಹಬ್ಬಕ್ಕೆ ಶುಭ ಕೋರಿ ಹಾಕುವಂತಹ ಫ್ಲೆಕ್ಸ್‌ ಬ್ಯಾನರ್‌ಗಳು ತಿಂಗಳಾನುಗಟ್ಟಲೆ ಅದೇ ಸ್ಥಳದಲ್ಲಿ ಉಳಿಯುತ್ತವೆ. ಕೆಲವು ಫ್ಲೆಕ್ಸ್‌ಗಳು ಅರ್ಧಕ್ಕೆ ತುಂಡಾಗಿ ಬೇಕಾಬಿಟ್ಟಿ ನೇತಾಡುತ್ತಿರುತ್ತವೆ. ನಗರದ ಅಂದಗೆಡಿಸುವಲ್ಲಿ ಇಂತಹ ಜಾಹೀರಾತುಗಳ ಪಾತ್ರವೇ ಜಾಸ್ತಿ.

ಕೆಲವೊಂದು ಜಾಹೀರಾತುಗಳನ್ನು ಉಚಿತವಾಗಿ ಹಾಕಲು ‘ಬಿಬಿಎಂಪಿ ಜಾಹೀರಾತು ನಿಯಮಗಳು 2019’ ಅವಕಾಶ ಕಲ್ಪಿಸುತ್ತದೆ. ಬಿಬಿಎಂಪಿಯ ಮುಖ್ಯ ಆಯುಕ್ತರು ವಿವೇಚನೆ ಬಳಸಿ ಈ ಉಚಿತ ಜಾಹೀರಾತುಗಳಿಗೆ ಅವಕಾಶ ನೀಡಬಹುದು. ಧಾರ್ಮಿಕ ದತ್ತಿ ಮತ್ತು ಹಿಂದೂ ಧಾರ್ಮಿಕ ದತ್ತಿ ಸಂಸ್ಥೆಗಳ ಇಲಾಖೆಯ ಮುಖ್ಯ ಆಯುಕ್ತರಲ್ಲಿ ಅಥವಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ನಿರ್ದೇಶಕರಲ್ಲಿ ನೋಂದಣಿ ಮಾಡಿಸಿದ ಸಂಸ್ಥೆಗಳು ಅಥವಾ ಸಂಘಟನೆಗಳ ಜಾಹೀರಾತುಗಳು ಕೂಡಾ ಉಚಿತವಾಗಿ ಪ್ರದರ್ಶಿಸಬಹುದಾದ ಜಾಹೀರಾತುಗಳ ಪಟ್ಟಿಯಲ್ಲಿವೆ.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಂಸ್ಥೆಗಳು, ಸರ್ಕಾರದ ಇಲಾಖೆಗಳು ಕೂಡಾ ಉಚಿತವಾಗಿ ಜಾಹೀರಾತು ಹಾಕಲು ಅವಕಾಶ ಕಲ್ಪಿಸಲಾಗಿದೆ. ಅಲ್ಲದೇ, ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗಳ ಧಾರ್ಮಿಕ, ಶೈಕ್ಷಣಿಕ ಅಥವಾ ದತ್ತಿ ಸಂಸ್ಥೆಗಳ ಅಥವಾ ಯಾವುದೇ ಕಲ್ಯಾಣದ ಉದ್ದೇಶದ ಜಾಹಿರಾತುಗಳ ಉಚಿತ ಪ್ರದರ್ಶನಕ್ಕೆ ಅವಕಾಶ ಕಲ್ಪಿಸುವ ವಿವೇಚನಾ ಅಧಿಕಾರವನ್ನು ಬಿಬಿಎಂಪಿ ಮುಖ್ಯ ಆಯುಕ್ತರಿಗೆ ನೀಡಲಾಗಿದೆ. ಇಂತಹ ಜಾಹೀರಾತುಗಳು ಮತ್ತೆ ನಗರದ ಅಂದಗೆಡಿಸಲು ಕಾರಣವಾಗುವ ಅಪಾಯವಿದೆ ಎಂದು ಸಾರ್ವಜನಿಕರು ಆತಂಕ ವ್ಯಕ್ತಪಡಿಸುತ್ತಾರೆ.

ಜಾಹೀರಾತು– ನಾಲ್ಕು ವರ್ಗೀಕರಣ

2019ರ ಬಿಬಿಎಂಪಿ ಜಾಹೀರಾತು ನಿಯಮಗಳ ಪ್ರಕಾರ ಬಿಬಿಎಂಪಿ ವ್ಯಾಪ್ತಿಯಲ್ಲಿ ಅಳವಡಿಸಬಹುದಾದ ಜಾಹೀರಾತುಗಳನ್ನು ನಾಲ್ಕು ವರ್ಗಗಳಾಗಿ ವಿಂಗಡಿಸಲಾಗಿದೆ.

ವರ್ಗ 1: ಬಿಲ್‌ಬೋರ್ಡ್‌ಗಳು, ಒಂದು ಕಂಬ (ಯೂನಿಪೋಲ್‌), ಎರಡು ಕಂಬಗಳ (ಬೈಪೋಲ್‌), ಮೇಲೆ ಅಳವಡಿಸುವ ದೊಡ್ಡ ಪ್ರಮಾಣದ ಜಾಹೀರಾತುಗಳು, ಎಲ್‌ಇಡಿ, ಎಲ್‌ಸಿಡಿ ಮೊದಲಾದ ಪರದೆಗಳಲ್ಲಿ ತೋರಿಸುವ ಬದಲಾಗುವ ಜಾಹೀರಾತುಗಳು, ಸೇವೆ ಹಾಗೂ ಫ್ಲೈಓವರ್‌ಗಳ ಪ್ಯಾನೆಲ್‌ಗಳಲ್ಲಿ ಅಳವಡಿಸುವ ಜಾಹೀರಾತುಗಳು

ವರ್ಗ 2: ಸಾರ್ವಜನಿಕ ಶೌಚಾಲಯ, ಕಸ ಸಂಗ್ರಹ ತಾಣ ಮೊದಲಾದ ಸಾರ್ವಜನಿಕ ಸೌಕರ್ಯಗಳ ಮೇಲೆ ಅಳವಡಿಸುವ ಜಾಹೀರಾತುಗಳು

ವರ್ಗ 3: ಸಾರಿಗೆ ಆಧರಿತ ಜಾಹೀರಾತು

ವರ್ಗ 4: ವಾಣಿಜ್ಯ ಪ್ರದೇಶಗಳಲ್ಲಿ ಸ್ವಂತ ಪ್ರಚಾರಕ್ಕೆ ಬಳಸುವ ಜಾಹೀರಾತುಗಳು

ವಿರೂಪಗೊಳಿಸುವುದು ಅಪರಾಧ

ಬಿಬಿಎಂಪಿಯಿಂದ ಪರವಾನಗಿ ಪಡೆದು ಅಳವಡಿಸುವ ಯಾವುದೇ ಜಾಹೀರಾತುಗಳಲ್ಲಿ, ಬಿಬಿಎಂಪಿ ಮುಖ್ಯ ಆಯಕ್ತರು ಉಲ್ಲೇಖಿಸಿದ ಗುರುತು, ಸಂಕೇತ, ಪತ್ರ ಅಥವಾ ಪದಗಳನ್ನು ಯಾವುದೇ ವ್ಯಕ್ತಿಯು ವಿರೂಪಗೊಳಿಸುವಂತಿಲ್ಲ. ಇದನ್ನು ಅಪರಾಧ ಎಂದು ಪರಿಗಣಿಸಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.