ಲೋಕಸಭಾ ಚುನಾವಣಾ ಸಿದ್ಧತೆ ಕುರಿತು ಚರ್ಚಿಸಲು ಬೆಂಗಳೂರಿನ ರಮಾಡ ಹೋಟೆಲ್‌ನಲ್ಲಿ ಬುಧವಾರ ನಡೆದ ಸಭೆಯಲ್ಲಿ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಪಕ್ಷದ ಸಂಸ್ಥಾಪಕರಾದ ಶ್ಯಾಮಾಪ್ರಸಾದ್ ಮುಖರ್ಜಿ, ದೀನದಯಾಳ್ ಉಪಾಧ್ಯಾಯ ಮತ್ತು ಭಾರತಾಂಬೆಯ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.
–ಪ್ರಜಾವಾಣಿ ಚಿತ್ರ
ಬೆಂಗಳೂರು: ಲೋಕಸಭಾ ಚುನಾವಣಾ ಸಿದ್ಧತೆಗೆ ಬಿಜೆಪಿಯ ರಾಜ್ಯ ಘಟಕದ ಪ್ರಮುಖರು ಆರಂಭಿಸಿರುವ ಕ್ಲಸ್ಟರ್‌ವಾರು ಸಭೆಯ ಮೊದಲ ದಿನವೇ ಹಲವು ಕ್ಷೇತ್ರಗಳ ಅಭ್ಯರ್ಥಿಗಳನ್ನು ಬದಲಾವಣೆ ಮಾಡುವಂತೆ ಸ್ಥಳೀಯ ನಾಯಕರು ಬೇಡಿಕೆ ಇಟ್ಟಿದ್ದಾರೆ.
ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್. ಯಡಿಯೂರಪ್ಪ, ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ನೇತೃತ್ವದಲ್ಲಿ ನಗರದ ಹೊರ ವಲಯದ ರಮಾಡ ರೆಸಾರ್ಟ್‌ನಲ್ಲಿ ಬುಧವಾರ ಬೆಳಿಗ್ಗೆಯಿಂದ ಸಂಜೆಯವರೆಗೆ 13 ಲೋಕಸಭಾ ಕ್ಷೇತ್ರಗಳ ಮುಖಂಡರ ಸಭೆ ನಡೆಯಿತು. ಗುರುವಾರ 15 ಲೋಕಸಭಾ ಕ್ಷೇತ್ರಗಳ ಮುಖಂಡರ ಅಭಿಪ್ರಾಯ ಸಂಗ್ರಹಿಸಲಾಗುತ್ತದೆ.
ಸಂಸದ ಡಿ.ವಿ. ಸದಾನಂದ ಗೌಡ, ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ, ಬಿಜೆಪಿ ರಾಜ್ಯ ಘಟಕದ ಸಂಘಟನಾ ಕಾರ್ಯದರ್ಶಿ ಜಿ.ವಿ. ರಾಜೇಶ್, ಪ್ರಧಾನ ಕಾರ್ಯದರ್ಶಿ ವಿ. ಸುನಿಲ್ ಕುಮಾರ್, ಶಾಸಕರಾದ ಬಸವರಾಜ ಬೊಮ್ಮಾಯಿ, ಡಾ.ಸಿ.ಎನ್. ಅಶ್ವತ್ಥ ನಾರಾಯಣ, ಮಾಜಿ ಸಚಿವ ಸಿ.ಟಿ.ರವಿ ಸೇರಿದಂತೆ ಹಲವು ಪ್ರಮುಖರು ಸಭೆಯಲ್ಲಿದ್ದರು.
ಬೀದರ್ ಲೋಕಸಭಾ ಕ್ಷೇತ್ರದಿಂದ ಸಭೆ ಆರಂಭಿಸಲಾಯಿತು. ಶಾಸಕರಾದ ಪ್ರಭು ಚವ್ಹಾಣ್ ಮತ್ತು ಶರಣು ಸಲಗರ ಕೇಂದ್ರ ಸಚಿವ ಭಗವಂತ್ ಖೂಬಾ ವಿರುದ್ಧ ಆಕ್ಷೇಪ ಎತ್ತಿದರು. ಸಚಿವರು ವಿಧಾನಸಭಾ ಚುನಾವಣೆಯಲ್ಲಿ ತಮ್ಮನ್ನು ಸೋಲಿಸಲು ಪ್ರಯತ್ನಿಸಿದ್ದು, ಲೋಕಸಭಾ ಚುನಾವಣೆಯಲ್ಲಿ ಅವರನ್ನು ಕಣಕ್ಕಿಳಿಸಬಾರದು ಎಂಬ ಬೇಡಿಕೆ ಮಂಡಿಸಿದರು. ಈ ಸಂದರ್ಭದಲ್ಲಿ ಸಚಿವರ ಬೆಂಬಲಿಗರು ಮತ್ತು ಶಾಸಕರ ಮಧ್ಯೆ ವಾಗ್ವಾದ ನಡೆದಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
‘ಚಿಕ್ಕಬಳ್ಳಾಪುರ, ಕೋಲಾರ, ತುಮಕೂರು, ಕೊಪ್ಪಳ, ಬಳ್ಳಾರಿ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಹಾಲಿ ಸಂಸದರ ಬದಲಿಗೆ ಬೇರೆ ಅಭ್ಯರ್ಥಿಗಳನ್ನು ಕಣಕ್ಕಿಳಿಸುವಂತೆ ಒತ್ತಾಯಿಸಿದ್ದಾರೆ. ಬಹುತೇಕ ಎಲ್ಲ ಕ್ಷೇತ್ರಗಳಿಂದಲೂ ಕೆಲವರ ಹೆಸರುಗಳನ್ನು ಸ್ಥಳೀಯ ಮುಖಂಡರು ಪ್ರಸ್ತಾಪಿಸಿದ್ದಾರೆ’ ಎಂದು ಪಕ್ಷದ ಮುಖಂಡರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.
ಕ್ಷೇತ್ರವಾರು ಯೋಜನೆಗೆ ನಿರ್ಧಾರ: ಪ್ರತಿ ಲೋಕಸಭಾ ಕ್ಷೇತ್ರದ ಪ್ರಸಕ್ತ ಸ್ಥಿತಿಗತಿ, ವಿಧಾನಸಭಾ ಚುನಾವಣೆ ಬಳಿಕ ಬಿಜೆಪಿಯ ಸ್ಥಿತಿ, ಕಾಂಗ್ರೆಸ್‌ನ ಪ್ರಾಬಲ್ಯದ ಕುರಿತು ನಾಯಕರು ಸ್ಥಳೀಯ ಮುಖಂಡರಿಂದ ಅಭಿಪ್ರಾಯ ಸಂಗ್ರಹಿಸಿದ್ದಾರೆ. ಜೆಡಿಎಸ್ ಜತೆಗಿನ ಸಮನ್ವಯದ ಕುರಿತೂ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಪ್ರತಿ ಗ್ರಾಮಕ್ಕೊಬ್ಬ ಪ್ರಮುಖರನ್ನು ನೇಮಿಸುವುದು, ಕೇಂದ್ರ ಸರ್ಕಾರದ ವಿವಿಧ ಯೋಜನೆಗಳ ಫಲಾನುಭವಿಗಳ ಸಮಾವೇಶ ಆಯೋಜನೆ, ಯುವ ಮತದಾರರನ್ನು ಬಿಜೆಪಿಯತ್ತ ಸೆಳೆಯುವುದು, ಜನವರಿ 24ರಂದು ರಾಜ್ಯದಾದ್ಯಂತ ಸಂಪರ್ಕ ಅಭಿಯಾನ ನಡೆಸುವುದು, ಬೆಂಗಳೂರಿನಲ್ಲಿ ಚುನಾವಣಾ ಕಚೇರಿ ಆರಂಭಿಸಿ ಎಲ್ಲ ಕ್ಷೇತ್ರಗಳೊಂದಿಗೆ ಸಂಪರ್ಕ ಸಾಧಿಸುವ ಬಗ್ಗೆ ಚರ್ಚೆ ನಡೆದಿದೆ.
‘ಪ್ರತಿ ಕ್ಷೇತ್ರಕ್ಕೂ ಪ್ರತ್ಯೇಕ ಕಾರ್ಯತಂತ್ರ’
‘ಪ್ರತಿ ಲೋಕಸಭಾ ಕ್ಷೇತ್ರಕ್ಕೂ ಪ್ರತ್ಯೇಕವಾದ ಚುನಾವಣಾ ಕಾರ್ಯತಂತ್ರ ರೂಪಿಸಲು ಬುಧವಾರದ ಸಭೆಯಲ್ಲಿ ತೀರ್ಮಾನಿಸಲಾಗಿದೆ’ ಎಂದು ಸಂಸದ ಡಿ.ವಿ. ಸದಾನಂದ ಗೌಡ ತಿಳಿಸಿದರು. ಸಭೆಯ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು ‘ಮುಂದಿನ ದಿನಗಳಲ್ಲಿ ಜಿಲ್ಲಾ ಮಟ್ಟದಲ್ಲಿ ಇಂತಹ ಸಭೆ ನಡೆಸುವುದಾಗಿ ಪಕ್ಷದ ರಾಜ್ಯ ಘಟಕದ ಅಧ್ಯಕ್ಷರು ತಿಳಿಸಿದ್ದಾರೆ. ಅಲ್ಲಿ ಸ್ಥಳೀಯವಾಗಿ ಚುನಾವಣಾ ಕಾರ್ಯತಂತ್ರ ನಿರ್ಧರಿಸಲಾಗುವುದು’ ಎಂದರು. ಸ್ಥಳೀಯವಾಗಿ ಬಿಜೆಪಿ ಮುಖಂಡರಲ್ಲಿ ಇರುವ ಭಿನ್ನಾಭಿಪ್ರಾಯ ಗೊಂದಲಗಳನ್ನು ಪರಿಹರಿಸುವ ಕೆಲಸ ಆರಂಭವಾಗಿದೆ. ಆದಷ್ಟು ಬೇಗ ಎಲ್ಲವನ್ನೂ ಪರಿಹರಿಸಲಾಗುವುದು ಎಂದು ಹೇಳಿದರು.
ಕೇಂದ್ರ ಗೃಹ ಸಚಿವ ಅಮಿತ್ ಶಾ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರು ಫೆಬ್ರುವರಿ 19ರೊಳಗೆ ರಾಜ್ಯದಲ್ಲಿ ಮೊದಲ ಸುತ್ತಿನ ಚುನಾವಣಾ ಪ್ರಚಾರ ಸಭೆಗಳನ್ನು ನಡೆಸಲಿದ್ದಾರೆ ಎಂಬ ಮಾಹಿತಿಯನ್ನು ಪಕ್ಷದ ರಾಜ್ಯ ನಾಯಕರು ಹಂಚಿಕೊಂಡಿದ್ದಾರೆ. ಲೋಕಸಭಾ ಕ್ಷೇತ್ರ ಮಟ್ಟದ ಸ್ಥಳೀಯ ಮುಖಂಡರ ಸಭೆಯಲ್ಲಿ ಯಡಿಯೂರಪ್ಪ ಮತ್ತು ವಿಜಯೇಂದ್ರ ಈ ಮಾಹಿತಿ ನೀಡಿದ್ದು ‘ದಿನವೊಂದರಲ್ಲಿ ಮೂವರೂ ತಲಾ ಪ್ರತ್ಯೇಕವಾಗಿ ಒಂದೊಂದು ಕ್ಷೇತ್ರಗಳಿಗೆ ಭೇಟಿ ನೀಡುತ್ತಾರೆ. ಅದಕ್ಕೆ ಪೂರಕವಾಗಿ ಪ್ರವಾಸದ ಸಿದ್ಧತೆ ಮಾಡಬೇಕು’ ಎಂಬ ಸೂಚನೆ ನೀಡಿದ್ದಾರೆ. ರಾಜ್ಯದಲ್ಲಿ ಲೋಕಸಭಾ ಚುನಾವಣೆಯ ಕಾರ್ಯತಂತ್ರ ರೂಪಿಸಲು ಅಮಿತ್ ಶಾ ಅವರು ಎರಡು ದಿನಗಳನ್ನು ಮೀಸಲಿಡಲಿದ್ದಾರೆ ಎಂಬುದನ್ನೂ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.