ADVERTISEMENT

ಬೆಂಗಳೂರು| ಬ್ಲ್ಯಾಕ್‌ಮೇಲ್‌ ಮಾಡಿ ಸುಲಿಗೆ: ಕ್ಯಾಬ್‌ ಚಾಲಕನ ಬಂಧನ

​ಪ್ರಜಾವಾಣಿ ವಾರ್ತೆ
Published 2 ಆಗಸ್ಟ್ 2023, 15:47 IST
Last Updated 2 ಆಗಸ್ಟ್ 2023, 15:47 IST
ಕಿರಣ್‌ ಕುಮಾರ್
ಕಿರಣ್‌ ಕುಮಾರ್   

ಬೆಂಗಳೂರು: ಕ್ಯಾಬ್‌ನಲ್ಲಿ ಪ್ರಯಾಣಿಸುವಾಗ ಮಹಿಳಾ ಪ್ರಯಾಣಿಕರೊಬ್ಬರನ್ನು ಪರಿಚಯಿಸಿಕೊಂಡು ಬ್ಲ್ಯಾಕ್‌ಮೇಲ್‌ ಮಾಡಿ, ₹ 22 ಲಕ್ಷ ನಗದು ಹಾಗೂ 270 ಗ್ರಾಂ ಚಿನ್ನಾಭರಣ ಸುಲಿಗೆ ಮಾಡಿದ್ದ ಚಾಲಕನನ್ನು ರಾಮಮೂರ್ತಿ ನಗರ ಪೊಲೀಸರು ಬಂಧಿಸಿದ್ದಾರೆ.

ಹೆಸರಘಟ್ಟದ ಉಬರ್‌ ಕ್ಯಾಬ್‌ ಚಾಲಕ ಕಿರಣ್‌ ಕುಮಾರ್ ಬಂಧಿತ ಆರೋಪಿ. ಸುಲಿಗೆ ಮಾಡಿದ್ದ ಚಿನ್ನಾಭರಣ ಹಾಗೂ ನಗದು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದರು.

‘ಕಳೆದ ನವೆಂಬರ್‌ನಲ್ಲಿ ಮಹಿಳೆಯೊಬ್ಬರು ಇಂದಿರಾ ನಗರದಿಂದ ಬಾಣಸವಾಡಿವರೆಗೆ ಕ್ಯಾಬ್ ಬುಕ್‌ ಮಾಡಿದ್ದರು. ಪ್ರಯಾಣದ ವೇಳೆ ಚಾಲಕ ಆ ಮಹಿಳೆಯನ್ನು ಪರಿಚಯಿಸಿಕೊಂಡಿದ್ದ. ಪ್ರಯಾಣ ಅವಧಿಯಲ್ಲಿ ಮಾತನಾಡುವಾಗ ಮಹಿಳೆ ಗೆಳೆಯನ ಬಗ್ಗೆ ಮಾಹಿತಿ ನೀಡಿದ್ದರು. ಅದೇ ವಿಚಾರವನ್ನೇ ಬಂಡವಾಳ ಮಾಡಿಕೊಂಡು ಹಣ ಸುಲಿಗೆ ಮಾಡಿದ್ದ’ ಎಂದು ಪೊಲೀಸರು ಹೇಳಿದರು.

ADVERTISEMENT

‘ಮಹಿಳೆಯ ಕ್ಯಾಬ್‌ ಬುಕ್‌ ಮಾಡಿದ್ದ ವೇಳೆ ಮೊಬೈಲ್‌ ಸಂಖ್ಯೆಯನ್ನು ಬರೆದುಕೊಂಡಿದ್ದ ಆರೋಪಿ, ಬಾಲ್ಯ ಸ್ನೇಹಿತ ಎಂದು ಮೆಸೇಜ್‌ ಹಾಕಿದ್ದ. ತಾನು ಆರ್ಥಿಕವಾಗಿ ತೊಂದರೆಯಲ್ಲಿದ್ದೇನೆ. ಹಣಕಾಸು ನೆರವು ನೀಡುವಂತೆ ಮೆಸೇಜ್‌ನಲ್ಲಿ ಕೋರಿದ್ದ. ಅದನ್ನು ನಂಬಿದ ಮಹಿಳೆ ಹಂತ ಹಂತವಾಗಿ ₹ 22 ಲಕ್ಷ ನೀಡಿದ್ದರು. ಈ ಹಣವನ್ನು ಮೋಜು ಮಸ್ತಿಗೆ ಬಳಸುತ್ತಿದ್ದ. ಹಣ ಪಡೆದುಕೊಂಡಿದ್ದು ಗೆಳೆಯ ಅಲ್ಲ, ಕ್ಯಾಬ್‌ ಚಾಲಕ ಎಂದು ತಿಳಿದ ಮೇಲೆ ಹಣ ವಾಪಸ್‌ ನೀಡುವಂತೆ ಮಹಿಳೆ ಕೇಳಿದ್ದರು. ಅದಕ್ಕೆ ಆತ ಒಪ್ಪದೇ ನಿಮ್ಮ ಹಾಗೂ ಸ್ನೇಹಿತನ ವಿಚಾರವನ್ನು ಪತಿಗೆ ತಿಳಿಸಿ ಸಂಸಾರ ಹಾಳು ಮಾಡುತ್ತೇನೆ ಎಂದು ಬೆದರಿಕೆ ಹಾಕಿದ್ದ. ಬಳಿಕ ಮಹಿಳೆ ಇಂದಿರಾನಗರ ಠಾಣೆ ಪೊಲೀಸರಿಗೆ ದೂರು ನೀಡಿದ್ದರು’.

ಪೊಲೀಸರು ಆರೋಪಿಯನ್ನು ಬಂಧಿಸಿ ನಗದು ಹಾಗೂ ಚಿನ್ನಾಭರಣ ಜಪ್ತಿ ಮಾಡಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.