ADVERTISEMENT

ಬೆಂಗಳೂರು | ಜಾಲಹಳ್ಳಿಯ ಕದಂಬ ಗಾರ್ಡೇನಿಯಾ ಹೋಟೆಲ್‌ಗೆ ಬಾಂಬ್‌ ಬೆದರಿಕೆ ಪತ್ರ

​ಪ್ರಜಾವಾಣಿ ವಾರ್ತೆ
Published 22 ಏಪ್ರಿಲ್ 2024, 10:32 IST
Last Updated 22 ಏಪ್ರಿಲ್ 2024, 10:32 IST
<div class="paragraphs"><p>ಕದಂಬ ಗಾರ್ಡೇನಿಯಾ ಹೋಟೆಲ್</p></div>

ಕದಂಬ ಗಾರ್ಡೇನಿಯಾ ಹೋಟೆಲ್

   

ಬೆಂಗಳೂರು: ಜಾಲಹಳ್ಳಿಯಲ್ಲಿರುವ ಎಚ್‌ಎಂಟಿ ಮೈದಾನ ಬಳಿಯ ಕದಂಬ ಗಾರ್ಡೇನಿಯಾ ಹೋಟೆಲ್‌ನಲ್ಲಿ ಬಾಂಬ್ ಸ್ಫೋಟಿಸುವುದಾಗಿ ಬೆದರಿಕೆ ಪತ್ರ ಬಂದಿದ್ದು, ಪೊಲೀಸರು ಹಾಗೂ ಬಾಂಬ್ ನಿಷ್ಕ್ರಿಯ ದಳದ ಸಿಬ್ಬಂದಿ ತಪಾಸಣೆ ನಡೆಸುತ್ತಿದ್ದಾರೆ.

‘ಹೋಟೆಲ್‌ನಲ್ಲಿ ಬಾಂಬ್ ಇಟ್ಟಿರುವುದಾಗಿ ಹೇಳಿ ವ್ಯಕ್ತಿಯೊಬ್ಬ ಪೊಲೀಸ್ ಠಾಣೆಗೆ ಪತ್ರ ಕಳುಹಿಸಿದ್ದಾನೆ. ಪೊಲೀಸರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಪತ್ರ ಬರೆದಿರುವ ವ್ಯಕ್ತಿ, ‘ರಾಮೇಶ್ವರಂ ಕೆಫೆಯಲ್ಲಿ ಸ್ಫೋಟ ಮಾಡಿದ್ದು ನಾನೇ. ಈಗ ಕದಂಬ ಗಾರ್ಡೇನಿಯಾ ಹೋಟೆಲ್‌ನಲ್ಲಿಯೂ ಬಾಂಬ್ ಇಟ್ಟಿರುವುದು ಕೂಡ ನಾನೇ’ ಎಂದು ಬೆದರಿಸಿದ್ದಾನೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

ADVERTISEMENT

‘ಅಂಚೆ ಸಿಬ್ಬಂದಿ ತಂದುಕೊಟ್ಟ ಪತ್ರ ಗಮನಿಸಿದ ಠಾಣೆ ಸಿಬ್ಬಂದಿ, ಹಿರಿಯ ಅಧಿಕಾರಿಗೆ ಮಾಹಿತಿ ನೀಡಿದ್ದರು. ನಂತರ, ಬಾಂಬ್ ನಿಷ್ಕ್ರಿಯ ದಳದ ಸಿಬ್ಬಂದಿ ಸಮೇತ ಹೋಟೆಲ್‌ನಲ್ಲಿ ತಪಾಸಣೆ ನಡೆಸಲಾಗುತ್ತಿದೆ’ ಎಂದು ತಿಳಿಸಿವೆ.

ಹೋಟೆಲ್‌ನಲ್ಲಿ ಸೀಮಂತ ಕಾರ್ಯಕ್ರಮವೊಂದು ನಡೆಯುತ್ತಿತ್ತು. ಜನರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರು. ಬಾಂಬ್ ಬೆದರಿಕೆ ವಿಷಯ ತಿಳಿಯುತ್ತಿದ್ದಂತೆ, ಕಾರ್ಯಕ್ರಮದಲ್ಲಿದ್ದ ಜನರೆಲ್ಲರೂ ಗಾಬರಿಯಿಂದ ಹೊರಗೆ ಓಡಿದರು.

‘ಬಾಂಬ್ ಬೆದರಿಕೆ ಹಿನ್ನೆಲೆಯಲ್ಲಿ ಹೋಟೆಲ್‌ನ ಪ್ರತಿಯೊಂದು ಸ್ಥಳದಲ್ಲಿ ತಪಾಸಣೆ ನಡೆಸಲಾಗುತ್ತಿದೆ. ಸದ್ಯಕ್ಕೆ ಯಾವುದೇ ಅನುಮಾನಾಸ್ಪದ ವಸ್ತು ಸಿಕ್ಕಿಲ್ಲ. ಇದೊಂದು ಹುಸಿ ಬೆದರಿಕೆಯೆಂಬುದು ಮೇಲ್ನೋಟಕ್ಕೆ ಗೊತ್ತಾಗುತ್ತಿದೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

‘ಬಾಂಬ್ ಬೆದರಿಕೆ ಬಗ್ಗೆ ಪ್ರಕರಣ ದಾಖಲಿಸಿಕೊಳ್ಳಲಾಗುವುದು. ಯಾರೋ ಪರಿಚಯಸ್ಥರೇ ಕೃತ್ಯ ಎಸಗಿರುವ ಅನುಮಾನವಿದೆ. ಈ ಬಗ್ಗೆ ತನಿಖೆ ಮುಂದುವರಿಸಲಾಗಿದೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.