ADVERTISEMENT

ಆರೆಸ್ಸೆಸ್ ಕಚೇರಿಗೆ ಬೊಮ್ಮಾಯಿ ಭೇಟಿ: ಪ್ರಮುಖರ ಜೊತೆ ಚರ್ಚೆ

​ಪ್ರಜಾವಾಣಿ ವಾರ್ತೆ
Published 25 ನವೆಂಬರ್ 2022, 2:22 IST
Last Updated 25 ನವೆಂಬರ್ 2022, 2:22 IST
ಬಸವರಾಜ ಬೊಮ್ಮಾಯಿ
ಬಸವರಾಜ ಬೊಮ್ಮಾಯಿ   

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರೆಸ್ಸೆಸ್‌) ರಾಜ್ಯ ಕಚೇರಿ ಕೇಶವಶಿಲ್ಪಕ್ಕೆ ಗುರುವಾರ ಸಂಜೆ ಭೇಟಿ ಕೊಟ್ಟು ಸುಮಾರು ಎರಡು ಗಂಟೆ ಸಂಘದ ಪ್ರಮುಖರ ಜತೆ ಸಮಾಲೋಚನೆ ನಡೆಸಿದರು.

ಸಚಿವರಾದ ಆರ್. ಅಶೋಕ, ಸಿ.ಎನ್‌. ಅಶ್ವತ್ಥನಾರಾಯಣ, ಡಾ.ಕೆ. ಸುಧಾಕರ್, ಮುನಿರತ್ನ ಅವರ ಜತೆಗೂಡಿ ಸಂಘದ ಕಚೇರಿಗೆ ಮುಖ್ಯಮಂತ್ರಿ ತೆರಳಿದ್ದರು.

ಬೆಂಗಳೂರಿನಲ್ಲಿ ರಾಷ್ಟ್ರಮಟ್ಟದ ಕಾರ್ಯಕ್ರಮವೊಂದನ್ನು ಆರೆಸ್ಸೆಸ್ ಹಮ್ಮಿಕೊಳ್ಳಲಿದೆ. ಕಾರ್ಯಕ್ರಮದ ಪೂರ್ವ ಸಿದ್ಧತೆ, ಸರ್ಕಾರದ ಕಡೆಯಿಂದ ನೀಡಬೇಕಾದ ಸಹಕಾರ ಕುರಿತು ಸಭೆಯಲ್ಲಿ ಚರ್ಚೆ ನಡೆಯಿತು ಎಂದು ಗೊತ್ತಾಗಿದೆ.

ADVERTISEMENT

ವಿಧಾನಸಭೆ ಚುನಾವಣೆಗೆ ಪಕ್ಷವನ್ನು ಸಜ್ಜುಗೊಳಿಸಲು ಡಿಸೆಂಬರ್‌ ಎಂಟರ ಹೊತ್ತಿಗೆ ಕೇಂದ್ರ ಸರ್ಕಾರದ ಆರು ಸಚಿವರು ಕರ್ನಾಟಕಕ್ಕೆ ಭೇಟಿ ನೀಡಲಿದ್ದು, ಇಲ್ಲಿಯೇ ಮೊಕ್ಕಾಂ ಹೂಡುವ ಸಾಧ್ಯತೆ ಇದೆ. ಮುಂದಿನ ಚುನಾವಣೆಯಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರಲು ಹೆಣೆಯಬೇಕಾದ ಕಾರ್ಯತಂತ್ರಗಳ ಬಗ್ಗೆಯೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಂಘ ಪ್ರಮುಖರ ಸಲಹೆ ಪಡೆದರು.

ಸರ್ಕಾರ ಮತ್ತು ಪಕ್ಷದ ಸಮನ್ವಯ ಹೇಗಿರಬೇಕು, ಸಚಿವರ ಪಾಲ್ಗೊಳ್ಳುವಿಕೆಯ ಅಗತ್ಯದ ಬಗ್ಗೆಯೂ ಚರ್ಚೆ ನಡೆಯಿತು ಎಂದು ತಿಳಿಸಿದರು.

‘ಈ ಭೇಟಿಯಲ್ಲಿ ವಿಶೇಷವೇನೂ ಇಲ್ಲ. ಸಂಘದ ಕಚೇರಿಗೆ ಆಗಾಗ್ಗೆ ಭೇಟಿ ನೀಡುವ ಮುಖ್ಯಮಂತ್ರಿ ಪ್ರಮುಖರ ಸಲಹೆ ಪಡೆಯುತ್ತಾರೆ. ಇದು ಕೂಡ ಔಪಚಾರಿಕ ಭೇಟಿಯಾಗಿತ್ತೇ ವಿನಃ ಮಹತ್ವದ ಚರ್ಚೆಗಳೇನೂ ನಡೆದಿಲ್ಲ. ಶುಕ್ರವಾರ (ನ.25) ಶಿವಮೊಗ್ಗದಲ್ಲಿ ಬಿಜೆಪಿಯ ಮೂರು ದಿನಗಳ ಪ್ರಶಿಕ್ಷಣ ವರ್ಗ(ಬೈಠಕ್‌) ಆರಂಭವಾಗಲಿದೆ. ಈ ಬಗ್ಗೆ ಸಲಹೆ ಪಡೆದಿದ್ದಾರೆ’ ಎಂದು ಮುಖ್ಯಮಂತ್ರಿ ಸಚಿವಾಲಯದ ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.