ADVERTISEMENT

ಸಾಹಿತ್ಯ ಬರವಣಿಗೆಯೂ ಕ್ರಿಕೆಟ್ ಪಂದ್ಯದಂತೆ: ಸಾಹಿತಿ ಕುಂ. ವೀರಭದ್ರಪ್ಪ

ವರುಣ ಹೆಗಡೆ
Published 10 ಆಗಸ್ಟ್ 2025, 23:30 IST
Last Updated 10 ಆಗಸ್ಟ್ 2025, 23:30 IST
 ಕುಂ. ವೀರಭದ್ರಪ್ಪ  
 ಕುಂ. ವೀರಭದ್ರಪ್ಪ     

ಬೆಂಗಳೂರು: ‘ಸಾಹಿತ್ಯ ಬರವಣಿಗೆಯೂ ಕ್ರಿಕೆಟ್ ಪಂದ್ಯದ ರೀತಿ. ಟೆಸ್ಟ್, ಏಕದಿನ, ಟ್ವೆಂಟಿ–20 ಮಾದರಿಗೆ ಆಟಗಾರ ಹೊಂದಿಕೊಂಡಂತೆ, ಬರಹಗಾರ ಕೂಡ ಕವನ, ಕಥೆ ಹಾಗೂ ಕಾದಂಬರಿಗೆ ಹೊರಳಬೇಕಾಗುತ್ತದೆ...’

ಸಾಹಿತ್ಯದ ವಿವಿಧ ಪ್ರಕಾರಗಳಿಗೆ ತಾವು ತೆರೆದುಕೊಂಡ ಬಗೆಗೆ ಸಾಹಿತಿ ಕುಂ. ವೀರಭದ್ರಪ್ಪ ಅವರ ಅಭಿಮತ ಇದಾಗಿತ್ತು. ಬುಕ್ ಬ್ರಹ್ಮ ಸಂಸ್ಥೆ ಹಮ್ಮಿಕೊಂಡಿದ್ದ ‘ಬುಕ್ ಬ್ರಹ್ಮ ಸಾಹಿತ್ಯ ಉತ್ಸವ’ದ ಕೊನೆಯ ದಿನವಾದ ಭಾನುವಾರ ನಡೆದ ‘ಮನದ ಮಾತು: ತಂದೆ–ಮಗನ ಜುಗಲ್ ಬಂದಿ’ ಗೋಷ್ಠಿಯಲ್ಲಿ ಪುತ್ರ ಪ್ರವರ ಕೊಟ್ಟೂರು ಜತೆಗೆ ಮುಖಾಮುಖಿಯಾದ ಅವರು, ಬರವಣಿಗೆ ಪ್ರಾರಂಭಿಸಿದ ಬಗೆ, ತಾವು ವಾಸವಿದ್ದ ಪ್ರದೇಶದ ವಾತಾವರಣ, ಕಾದಂಬರಿಯಲ್ಲಿ ಮಹಿಳೆಯರಿಗೆ ವಿಶೇಷ ಸ್ಥಾನ ನೀಡಲು ಕಾರಣ, ಬೆದರಿಕೆ ಪತ್ರಗಳಿಗೆ ಸ್ಪಂದಿಸಿದ ಪರಿ ಸೇರಿ ಹಲವು ಸಂಗತಿಗಳನ್ನು ಹಂಚಿಕೊಂಡರು. 

‘ಕವಿತೆ ಮೂಲಕ ಬರವಣಿಗೆ ಆರಂಭಿಸಿದ ತಾವು, ನಂತರ ಕಥೆಗಳಿಗೆ ಹೊರಳಿಕೊಂಡಿರಿ. ಬಳಿಕ ಕಾದಂಬರಿ ಬರೆಯಲು ಪ್ರಾರಂಭಿಸಿದಿರಿ. ಕವಿತೆಗಳನ್ನು ಮತ್ತೆ ಏಕೆ ಬರೆಯಲಿಲ್ಲ’ ಎಂಬ ಪ್ರವರ ಅವರ ಪ್ರಶ್ನೆಗೆ ಉತ್ತರಿಸಿದ ಕುಂವೀ, ‘ಕ್ರಿಕೆಟ್‌ನ ವಿವಿಧ ಪ್ರಕಾರಕ್ಕೆ ವಲಸೆ ಹೋದಂತೆ, ಸಾಹಿತ್ಯದ ಪ್ರಕಾರಗಳಿಗೂ ವಲಸೆ ಹೋಗಬೇಕಾಗುತ್ತದೆ. ಅದು ಸೃಜನಶೀಲ ಲೇಖಕನ ಲಕ್ಷಣ. ಆಂಧ್ರದ ಹಿರೇಹಳ್ಳದ ವಾತಾವರಣ, ಗ್ರಾಮೀಣ ಭಾಗದ ಜನರ ಸ್ಥಿತಿಗತಿ ಹಾಗೂ ಚಳವಳಿಗಳು ನನ್ನ ಮೇಲೆ ಪ್ರಭಾವ ಬೀರಿದ ಪರಿಣಾಮ, ಕಥೆ, ಕಾದಂಬರಿ ಬರವಣಿಗೆ ಪ್ರಾರಂಭಿಸಿದೆ’ ಎಂದರು. 

ADVERTISEMENT

‘ನಾನು ಕಥೆ ಬರೆಯುತ್ತಿರುವ ವೇಳೆ ಗೆಳೆಯನೋರ್ವ ನಿನಗೆ ಕಾದಂಬರಿ ಬರೆಯಲು ಬರುವುದಿಲ್ಲ ಎಂದು ಹೇಳಿದ್ದ. ಆದ್ದರಿಂದ ಕಾದಂಬರಿ ಕಡೆಗೆ ಹೊರಳಿದೆ’ ಎಂದು ಸ್ಮರಿಸಿಕೊಂಡರು. 

ಕಾದಂಬರಿಗಳಲ್ಲಿ ಮಹಿಳೆಯರಿಗೆ, ಅದರಲ್ಲೂ ಮುದುಕಿಯರಿಗೆ ವಿಶಿಷ್ಟ ಸ್ಥಾನ ನೀಡಲು ಕಾರಣ ವಿವರಿಸಿದ ಅವರು, ‘ಹೆಣ್ಣುತನ ಯಾರಲ್ಲಿ ಹೆಚ್ಚಿರುತ್ತದೆಯೋ ಅವರು ಉತ್ತಮ ಲೇಖಕರಾಗುತ್ತಾರೆ. ಹೆಣ್ಣಿನ ನೋವು ನಲಿವಿಗೆ ಸ್ಪಂದಿಸಬೇಕು. ಮಹಿಳಾ ಬರಹಗಾರರಲ್ಲಿ ಪುರುಷ ಗುಣ, ಪುರುಷ ಬರಹಗಾರರಲ್ಲಿ ಹೆಣ್ಣುತನ ಇರಬೇಕಾಗುತ್ತದೆ’ ಎಂದು ಅಭಿಪ್ರಾಯಪಟ್ಟರು. 

ಸಾಹಿತ್ಯ ಭಾಷಾ ಬೆಳವಣಿಗೆ ಬಗ್ಗೆ ಮಾತುಗಳನ್ನು ವಿಸ್ತರಿಸಿದ ಅವರು, ‘ಎಲ್ಲಿ ಜಗಳ ಇರುತ್ತದೆಯೋ ಅಲ್ಲಿ ಭಾಷೆ ಬೆಳೆಯುತ್ತದೆ ನಾಗರಿಕ ಪ್ರಜ್ಞೆ ಇಲ್ಲದಿರುವ ಕಡೆ ಸಾಹಿತ್ಯ ವಿಸ್ತರಿಸಿಕೊಳ್ಳುತ್ತದೆ. ಶಿಸ್ತುಬದ್ಧ ಜೀವನ ಇರುವಲ್ಲಿ ಸಾಹಿತ್ಯ ಬೆಳೆಯದು’ ಎಂದರು. 

ಈ ನಡುವೆ ಕನ್ನಡ ಮಾಧ್ಯಮ ಶಾಲೆಗಳ ಸ್ಥಿತಿಗತಿಯ ಬಗ್ಗೆಯೂ ಕಳವಳ ವ್ಯಕ್ತಪಡಿಸಿದ ಅವರು, ‘ನಮ್ಮ ಶಾಸಕರು, ಸಂಸದರೇ ಖಾಸಗಿ ಶಾಲೆಗಳನ್ನು ನಿರ್ವಹಿಸುತ್ತಿರುವ ಪರಿಣಾಮ ಸರ್ಕಾರಿ ಶಾಲೆಗಳು ಬಾಗಿಲುಗಳನ್ನು ಮುಚ್ಚುತ್ತಿವೆ’ ಎಂಬ ಬೇಸರದ ನುಡಿಗಳನ್ನಾಡಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.