ADVERTISEMENT

‘ಗುಬ್ಬಿ’ ಮೇಲೆ ಚಿರತೆ ದಾಳಿ; ಮಾಧ್ಯಮದಲ್ಲಿ ಸಲಹೆ ಹಾವಳಿ!

‘ಶಾಲೆಗೆ ಬಂದ ಚಿರತೆ ಮತ್ತು ಇತರ ಕಥೆಗಳು’ ಪುಸ್ತಕ ಬಿಡುಗಡೆ: ಮುದ ನೀಡಿದ ಪ್ರೊ.ಕೃಷ್ಣೇಗೌಡರ ಮಾತು

​ಪ್ರಜಾವಾಣಿ ವಾರ್ತೆ
Published 25 ಆಗಸ್ಟ್ 2019, 19:46 IST
Last Updated 25 ಆಗಸ್ಟ್ 2019, 19:46 IST
ಸಂವಾದದಲ್ಲಿ ಪಾಲ್ಗೊಂಡಿದ್ದ ಸಂಜಯ್‌ ಗುಬ್ಬಿ ಮತ್ತು ಪ್ರೊ. ಎಂ. ಕೃಷ್ಣೇಗೌಡ ––ಪ್ರಜಾವಾಣಿ ಚಿತ್ರ
ಸಂವಾದದಲ್ಲಿ ಪಾಲ್ಗೊಂಡಿದ್ದ ಸಂಜಯ್‌ ಗುಬ್ಬಿ ಮತ್ತು ಪ್ರೊ. ಎಂ. ಕೃಷ್ಣೇಗೌಡ ––ಪ್ರಜಾವಾಣಿ ಚಿತ್ರ   

ಬೆಂಗಳೂರು:ಹಂಸನಾದ ಹಾರ್ಮೋನಿಕ ತಂಡದಿಂದ ಕನ್ನಡದ ಅಮರ ಚಿತ್ರಗೀತೆಗಳ ಪ್ರಸ್ತುತಿ, ಪ್ರೊ.ಕೃಷ್ಣೇಗೌಡರ ಸಾಹಿತ್ಯ–ಸಂಸ್ಕೃತಿಭರಿತ ಮಾತುಗಳು, ಅರಣ್ಯ ಅಲೆದಾಟದ ಕುರಿತು ಸಂಜಯ್‌ ಗುಬ್ಬಿ ಕಟ್ಟಿಕೊಟ್ಟ ಅನುಭವಗಳು ಮತ್ತು ಅಪ್ಪಟ ಕನ್ನಡ ಮನಸಿನ ಪ್ರೇಕ್ಷಕರು...

ನಗರದಲ್ಲಿ ಭಾನುವಾರ ಸಂಜೆ ಸಂಜಯ್‌ ಗುಬ್ಬಿ ಅವರ‘ಶಾಲೆಗೆ ಬಂದ ಚಿರತೆ ಮತ್ತು ಇತರ ಕಥೆಗಳು’ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಕಂಡು ಬಂದ ವಾತಾವರಣವಿದು. ಬೆಂಗಳೂರಿನ ಶಾಲೆಯೊಂದಕ್ಕೆ ಚಿರತೆ ನುಗ್ಗಿದ ಸಂದರ್ಭ ಮತ್ತು ತದನಂತರದ ಅನುಭವಗಳನ್ನು ಗುಬ್ಬಿ ಸ್ವಾರಸ್ಯಕರವಾಗಿ ವಿವರಿಸಿದರು.

‘ಶಾಲೆಯೊಂದಕ್ಕೆ ಚಿರತೆ ಬಂದಿದೆಯಂತೆ. ನೋಡಿಕೊಂಡು ಬರ್ತೀನಿ ಎಂದು ಪತ್ನಿಗೆ ಹೇಳಿ ಹೊರಟವನು 15 ದಿನ ಆಸ್ಪತ್ರೆಯಲ್ಲಿ ಕಳೆಯಬೇಕಾಯಿತು. ಚಿರತೆ ಕಚ್ಚ ಬಾರದ ಸ್ಥಳಕ್ಕೆ (ಹಿಂಭಾಗ) ಕಚ್ಚಿತ್ತು. ಆಸ್ಪತ್ರೆಯಲ್ಲಿ ಮಲಗಿಕೊಂಡಿದ್ದಾಗ ಟಿ.ವಿ ನೋಡುತ್ತಿದ್ದೆ. ‘ಸಂಜಯ್‌ ಗುಬ್ಬಿ ಪಕ್ಕದಲ್ಲಿದ್ದ ಈಜುಕೊಳಕ್ಕೆ ಹಾರಬೇಕಿತ್ತು’ ಎಂದು ತಮ್ಮ ಜೀವನದಲ್ಲಿ ಒಮ್ಮೆಯೂ ಚಿರತೆ–ಹುಲಿ ನೋಡದವರು ನ್ಯೂಸ್‌ ಚಾನೆಲ್‌ ಸ್ಟುಡಿಯೊದಲ್ಲಿ ಕುಳಿತು ಹೇಳುತ್ತಿದ್ದರು. ಆದರೆ, ಚಿರತೆಗೆ ನನಗಿಂತ ಚೆನ್ನಾಗಿ ಈಜು ಬರುತ್ತದೆ ಎನ್ನುವುದು ಅವರಿಗೇನು ಗೊತ್ತು’ ಎಂದಾಗ ಪ್ರೇಕ್ಷಕರು ಗೊಳ್ಳೆಂದು ನಕ್ಕರು.

ADVERTISEMENT

‘ಸ್ಥಳಕ್ಕೆ ಭೇಟಿಯೇ ಕೊಡದ ಅರಣ್ಯಾಧಿಕಾರಿಯೊಬ್ಬರು, ಆ ಚಿರತೆಗೆ ಎರಡೇ ಹಲ್ಲುಗಳಿದ್ದವು, ಒಂದು ಕಣ್ಣು ಕಾಣುತ್ತಿರಲಿಲ್ಲ. ಹಾಗಾಗಿ, ಸಂಜಯ್‌ ಗುಬ್ಬಿ ಪ್ರಾಣಾಪಾಯದಿಂದ ಬಚಾವ್‌ ಆದರು ಎಂದುಪತ್ರಿಕೆಯೊಂದಕ್ಕೆ ಹೇಳಿಕೆ ನೀಡಿದ್ದರು. ಆದರೆ, ನನ್ನ ಹಿಂಭಾಗದಲ್ಲಿ ಚಿರತೆಯ ನಾಲ್ಕು ಹಲ್ಲಿನ ಗುರುತುಗಳಿದ್ದವು. ಪತ್ರಿಕೆಯವರಿಗೆ ಕರೆದು ತೋರಿಸಬೇಕಾದ ಸ್ಥಳವೂ ಅದಾಗಿರಲಿಲ್ಲ. ಹೀಗಾಗಿ ನಕ್ಕು ಸುಮ್ಮನಾಗಬೇಕಾಯಿತು’ ಎಂದು ಗುಬ್ಬಿ ನೆನಪಿಸಿಕೊಂಡರು.

‘ಸಂವೇದನಾ ವಲಯವಿಸ್ತರಿಸುವ ವನ್ಯಜೀವಿ ಪ್ರಪಂಚ’
‘ವನ್ಯಜೀವಿ ಪ್ರಪಂಚ ನಮ್ಮ ಸಂವೇದನಾ ವಲಯವನ್ನು ವಿಸ್ತರಿಸುತ್ತದೆ. ಜಗತ್ತಿನ ರೋಚಕ ಅಂಶಗಳನ್ನು ಗುಬ್ಬಿ ಅವರ ಪುಸ್ತಕ ನಮಗೆ ಪರಿಚಯಿಸುತ್ತದೆ. ಬಗೆ ಬಗೆಯ ಮರಗಳ ಬಗ್ಗೆ ಅವರು ಹೆಸರಿಸಿದ್ದಾರೆ. ಇಂತಹ ಅಂಶಗಳೆಲ್ಲ ಪುಸ್ತಕವೊಂದರಲ್ಲಿ ದಾಖಲಾಗದಿದ್ದರೆ, ಮುಂದಿನ ಪೀಳಿಗೆಗೆ ಇವುಗಳ ಬಗ್ಗೆ ತಿಳಿಯುವುದೇ ಇಲ್ಲ. ಕನ್ನಡದಲ್ಲಿ ವನ್ಯಜೀವಿಗಳ ಕುರಿತ ಪುಸ್ತಕಗಳ ಸಂಖ್ಯೆ ತುಂಬಾ ಕಡಿಮೆ ಇದೆ’ ಎಂದು ಕೃಷ್ಣೇಗೌಡ ಹೇಳಿದರು.

ಕೃತಿ: ಶಾಲೆಗೆ ಬಂದ ಚಿರತೆ ಮತ್ತು ಇತರ ಕಥೆಗಳು
ಲೇಖಕ: ಸಂಜಯ್‌ ಗುಬ್ಬಿ
ಪ್ರಕಾಶನ: ನವಕರ್ನಾಟಕ
ಬೆಲೆ: ₹200
ಪುಟಗಳು: 200

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.