ADVERTISEMENT

ಬ್ರ್ಯಾಂಡ್ ಬೆಂಗಳೂರು | ನಗರಕ್ಕೆ ಮತ್ತೆ ತಿಪ್ಪಗೊಂಡನಹಳ್ಳಿ ನೀರು

10 ವರ್ಷದ ನಂತರ ನೀರು ಪೂರೈಕೆ; ವಿಶ್ವೇಶ್ವರಯ್ಯ ಬಡಾವಣೆಯ 6, 8ನೇ ಬ್ಲಾಕ್‌, ಲಿಂಗಧೀರನಹಳ್ಳಿಗೆ ಕುಡಿಯುವ ನೀರು

Published 16 ಆಗಸ್ಟ್ 2022, 3:09 IST
Last Updated 16 ಆಗಸ್ಟ್ 2022, 3:09 IST
ತಿಪ್ಪಗೊಂಡನಹಳ್ಳಿ ಜಲಾಶಯದಲ್ಲಿ ಹೂಳು ತೆಗೆಯಲು ಬಳಸಿದ ‘ಹೈಡ್ರಾಲಿಕ್‌ ಡ್ರೆಡ್ಜಿಂಗ್‌’ ವಿಧಾನ
ತಿಪ್ಪಗೊಂಡನಹಳ್ಳಿ ಜಲಾಶಯದಲ್ಲಿ ಹೂಳು ತೆಗೆಯಲು ಬಳಸಿದ ‘ಹೈಡ್ರಾಲಿಕ್‌ ಡ್ರೆಡ್ಜಿಂಗ್‌’ ವಿಧಾನ   

ಬೆಂಗಳೂರು: ರಾಜಧಾನಿ ಬೆಂಗಳೂರಿಗೆ 10 ವರ್ಷದ ನಂತರ ಕುಡಿಯುವ ನೀರು ಸರಬರಾಜು ಮಾಡಲು ತಿಪ್ಪಗೊಂಡನಹಳ್ಳಿ ಜಲಾಶಯ ಸಜ್ಜಾಗುತ್ತಿದೆ. ಮಾರ್ಚ್‌ ವೇಳೆಗೆ ಪ್ರತಿನಿತ್ಯ 110 ದಶಲಕ್ಷ ಲೀಟರ್‌ ನೀರು ಪೂರೈಕೆಯಾಗಲಿದೆ.

2015–16ರಲ್ಲಿ ತಿಪ್ಪಗೊಂಡನಹಳ್ಳಿಯಿಂದ ಸಂಸ್ಕರಣ ಘಟಕ ಪುನಶ್ಚೇತನ ಕಾಮಗಾರಿಗೆ ಸರ್ಕಾರ ಅನುಮತಿ ನೀಡಿದೆ. 2019ರಲ್ಲಿ ಕಾಮಗಾರಿ ಆರಂಭವಾಗಿದೆ. ತಿಪ್ಪಗೊಂಡನಹಳ್ಳಿಯಲ್ಲಿದ್ದ ನೀರು ಸಂಸ್ಕರಣೆ ಘಟಕ ಹಳೆಯದಾಗಿದ್ದು, ಅದು ಪೂರ್ಣವಾಗಿ ಬದಲಾಗುತ್ತಿದೆ. ವಿದೇಶಗಳಿಂದ ಆಮದು ಮಾಡಿಕೊಂಡ ಯಂತ್ರಗಳನ್ನು ಬಳಸಿ ಹೊಸ ತಂತ್ರಜ್ಞಾನವನ್ನು ಅಳವಡಿಸಿಕೊಂಡು ಏಳು ಹಂತಗಳಲ್ಲಿ ನೀರನ್ನು ಸಂಸ್ಕರಿಸಿ ಪೂರೈಸುವ ವ್ಯವಸ್ಥೆ ಇಲ್ಲಿ ಅನುಷ್ಠಾನವಾಗುತ್ತಿದೆ.

ಅರ್ಕಾವತಿ ಮತ್ತು ಕುಮುದ್ವತಿ ನದಿಯಿಂದ ಜಲಾಶಯಕ್ಕೆ ನೀರು ಬರುತ್ತದೆ. ಇದಲ್ಲದೆ, ಎತ್ತಿನಹೊಳೆ ಯೋಜನೆಯಿಂದ ಬರುವ ನೀರಿನಲ್ಲಿ ನೆಲಮಂಗಲದ ಸಮೀಪ 1.7 ಟಿಎಂಸಿ ನೀರನ್ನು ತಿಪ್ಪಗೊಂಡನಹಳ್ಳಿಗೆ ಹರಿಸಲಾಗುತ್ತದೆ. ಈ ನೀರನ್ನು ಜಲಾಶಯದಲ್ಲಿ ಶೇಖರಿಸಿಟ್ಟುಕೊಂಡು, ಚಾನೆಲ್‌ ಮೂಲಕ ಅದನ್ನು ಸಂಸ್ಕರಣೆ ಘಟಕಕ್ಕೆ ಹರಿಸಲಾಗುತ್ತದೆ. ಶುದ್ಧೀಕರಣಗೊಂಡ ನೀರನ್ನು ಅಲ್ಲಿಂದ ಅಳವಡಿಸಲಾಗಿರುವ ಸುಮಾರು 22 ಕಿ.ಮೀ. ಪೈಪ್‌ಲೈನ್‌ ಮೂಲಕ ಹರಿಸಲಾಗುತ್ತದೆ. ಈ ಮಧ್ಯೆ ತಾವರೆಕೆರೆ ಪಂಪಿಂಗ್‌ ಸ್ಟೇಷನ್‌ ಮೂಲಕ ಪೂರೈಸಲಾಗುತ್ತದೆ.

ADVERTISEMENT

ಬಿಡಿಎ ನಿರ್ಮಿಸಿರುವ ಸರ್‌ ಎಂ. ವಿಶ್ವೇಶ್ವರಯ್ಯ ಬಡಾವಣೆಯ 6 ಮತ್ತು 8ನೇ ಬ್ಲಾಕ್‌ಗೆ ತಿಪ್ಪಗೊಂಡನಹಳ್ಳಿ ಜಲಾಶಯದಿಂದ ಕುಡಿಯುವ ನೀರು ಪೂರೈಕೆಯಾಗಿದೆ. ಜೊತೆಗೆ ಲಿಂಗಧೀರನಹಳ್ಳಿ ಪ್ರದೇಶಕ್ಕೂ ನೀರು ಸರಬರಾಜು ಆಗಲಿದೆ. ಈ ಯೋಜನೆಯ ವೆಚ್ಚ ಸುಮಾರು ₹300 ಕೋಟಿ.

‘ಕೊಳವೆ ಮಾರ್ಗ ಸಿದ್ಧವಾಗಿದೆ. ಅದರ ಪ್ರಾಯೋಗಿಕ ಪರೀಕ್ಷೆಯನ್ನು ಮುಂದಿನ ತಿಂಗಳಲ್ಲಿ ಮಾಡಲಾಗುತ್ತದೆ. ಈ ಬಾರಿ ಜಲಾಶಯದಲ್ಲಿ 50 ಅಡಿಗೂ ಹೆಚ್ಚು ನೀರಿದೆ. ಇಷ್ಟು ನೀರಿದ್ದರೂ ನಾವು ಸುಮಾರು 8 ತಿಂಗಳು ನಗರಕ್ಕೆ ಪ್ರತಿನಿತ್ಯ 110 ದಶಲಕ್ಷ ಲೀಟರ್‌ ನೀರು ನೀಡಬಹುದಾಗಿದೆ’ ಎಂದು ಜಲಮಂಡಳಿಯ ಕಾವೇರಿ ನಿರ್ವಹಣೆ ವಿಭಾಗ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ರಾಮಕೃಷ್ಣ ಗೌಡ ಎಸ್‌. ತಿಳಿಸಿದರು.

**

ಬೆಂಗಳೂರಿನಿಂದ ಮಾಗಡಿ ರಸ್ತೆಯಲ್ಲಿ ಸಾಗಿದರೆ ತಾವರೆಕೆರೆಯಿಂದ ಸುಮಾರು 8 ಕಿ.ಮೀ. ದೂರದಲ್ಲಿ ತಿಪ್ಪಗೊಂಡನಹಳ್ಳಿ ಜಲಾಶಯವಿದೆ. ಕಾವೇರಿಗೆ ಮುನ್ನ ಅದರ ಉಪನದಿ ಅರ್ಕಾವತಿಗೆ ಅಡ್ಡಲಾಗಿ ಸರ್‌ ಎಂ. ವಿಶ್ವೇಶ್ವರಯ್ಯ ಅವರ ಮೇಲುಸ್ತುವಾರಿಯಲ್ಲಿ ನಿರ್ಮಿಸಲಾಗಿರುವ ಚಾಮರಾಜಸಾಗರ ಜಲಾಶಯದಿಂದ ನಗರಕ್ಕೆ 1933ರ ಏಪ್ರಿಲ್‌ನಲ್ಲಿ ನೀರು ಪೂರೈಸಲಾಗುತ್ತಿತ್ತು. ಮೊದಲು 27 ಎಂಎಲ್‌ಡಿ ನೀರು ಬರುತ್ತಿತ್ತು. 1946ರಲ್ಲಿ 45 ಎಂಎಲ್‌ಡಿಗೆ ವೃದ್ಧಿಯಾಯಿತು. 1954–58ರಲ್ಲಿ ಶೇಖರಣಾ ಸಾಮರ್ಥ್ಯವನ್ನು ವೃದ್ಧಿಸಿ 54 ಎಂಎಲ್‌ಡಿ ನೀರು ತರಲಾಯಿತು. ಮೂರನೇ ಹಂತದಲ್ಲಿ 20 ಎಂಎಲ್‌ಡಿ ನೀರನ್ನು ಸಂಸ್ಕರಿಸುವ ಘಟಕಗಳನ್ನು ಸ್ಥಾಪಿಸಲಾಯಿತು. 1974ರ ವೇಳೆಗೆ 135 ಎಂಎಲ್‌ಡಿ ನೀರು ನಗರಕ್ಕೆ ಸರಬರಾಜಾಗುತ್ತಿತ್ತು. 1998ರ ನಂತರ ನೀರು ಸರಬರಾಜು ಕಡಿಮೆಯಾಗುತ್ತಾ ಬಂದಿತು. 2012ರ ಡಿಸೆಂಬರ್‌ನಲ್ಲಿ ನೀರಿನ ಗುಣಮಟ್ಟ ಕಳಪೆಯಾದ್ದರಿಂದ ಸರಬರಾಜು ಪೂರ್ಣ ಸ್ಥಗಿತಗೊಂಡಿತು.‌

– 1980ರ ನಂತರ ನೀರಿನ ಹರಿವು ಕಡಿಮೆಯಾಗಿ ಈವರೆಗೆ 1988, 1994 ಮತ್ತು 1998ರಲ್ಲಿ ಮಾತ್ರ ಜಲಾಶಯ ಪೂರ್ಣ ಭರ್ತಿಯಾಗಿತ್ತು.

– 1998 ರ ನಂತರ ಪೀಣ್ಯ, ದಾಸರಹಳ್ಳಿಯಲ್ಲಿ ಕೈಗಾರಿಕೆ ಪ್ರದೇಶ ಹಾಗೂ ನಗರ ಪ್ರದೇಶಗಳಿಂದ ತ್ಯಾಜ್ಯ ಹರಿದುಬರಲಾರಂಭಿಸಿತು.

– 1998ರಲ್ಲಿ ಜಲಾಗಾರದಲ್ಲಿ ಮೊದಲ ಬಾರಿಗೆ ಕೆಂಪು ಹುಳುಗಳು ಕಂಡುಬಂದವು. ಇವು ನೀರು ಮಲಿನಗೊಳ್ಳುತ್ತಿರುವುದನ್ನು ದೃಢೀಕರಿಸಿದವು.

– 2001ರಲ್ಲಿ ಕೇಂದ್ರ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ, ಕಾರ್ಖಾನೆಗಳಿಂದ ಅರ್ಕಾವತಿ ನದಿ ನೀರು ಮಲಿನವಾಗುತ್ತಿದೆ ಎಂದು ವರದಿ ನೀಡಿತು.

– 2003ರಲ್ಲಿ ಇಸ್ರೊ ಹಾಗೂ ತಜ್ಞರ ಸಲಹೆ ಮೇರೆಗೆ ಸರ್ಕಾರ ತಿಪ್ಪಗೊಂಡನಹಳ್ಳಿ ಜಲಾನಯನ ಪ್ರದೇಶ ರಕ್ಷಣೆಗೆ ನಿಯಮ ರೂಪಿಸಿ ಅಧಿಸೂಚನೆ ಹೊರಡಿಸಿತು. ನಂತರದ ದಿನಗಳಲ್ಲೂ ಅನಧಿಕೃತ ಬಡಾವಣೆ, ಕೈಗಾರಿಕೆಗಳು ನಿರ್ಮಾಣವಾಗಿ ಅರ್ಕಾವತಿ ನದಿ ಸೇತುವೆ ಇರುವ ಮಾಕಳಿ ಬಳಿ ಬೃಹತ್‌ ಚಟುವಟಿಕೆಗಳು ಶುರುವಾದವು.

– 2007–08 ರಲ್ಲಿ ಒಳಹರಿವು ಮತ್ತಷ್ಟು ಕಡಿಮೆಯಾಯಿತು. ಮಾಲಿನ್ಯ ಪ್ರಮಾಣವೂ ಹೆಚ್ಚಾಯಿತು. ₹22 ಕೋಟಿ ವೆಚ್ಚದಲ್ಲಿ ನದಿಯ ಕಾಲುವೆ ಪುನಶ್ಚೇತನ ಮಾಡಲಾಯಿತು.

– 2012ರಲ್ಲಿ ಜಲಾಶಯ ದಲ್ಲಿರುವ ನೀರಿನ ಗುಣಮಟ್ಟ ಕಳಪೆ ಎಂಬುದು ಸಾಬೀತಾಗಿ, ನಗರಕ್ಕೆ ನೀರು ಸರಬರಾಜನ್ನು ಡಿಸೆಂಬರ್‌ನಿಂದ ಸ್ಥಗಿತಗೊಳಿಸಲಾಯಿತು.

ಹೂಳು ತೆಗೆಯಲು ‘ಹೈ’ ತಂತ್ರಜ್ಞಾನ
ಜಲಾಶಯದಲ್ಲಿ ಸುಮಾರು 25 ಅಡಿ ನೀರು ಇರುವ ಸಂದರ್ಭದಲ್ಲಿಯೇ ‘ಹೈಡ್ರಾಲಿಕ್‌ ಡ್ರೆಡ್ಜಿಂಗ್‌’ ವಿಧಾನದಿಂದ ಹೂಳು ತೆಗೆಯಲಾಗಿದೆ. ಯಂತ್ರಗಳ ಸಹಾಯದಿಂದ ಹೂಳು, ಕೊಳಕನ್ನು ಪೈಪ್‌ಗಳ ಮೂಲಕ ಹೊರಭಾಗಕ್ಕೆ ಸಾಗಿಸಲಾಗಿದೆ. ಅಲ್ಲಿ ಅದನ್ನು ಪೂರ್ಣವಾಗಿ ಒಣಗಿಸಿ, ನಂತರ ಅಲ್ಲಿಂದ ಲಾರಿಗಳ ಮೂಲಕ ಸಾಗಿಸಲಾಗಿದೆ. ಸುಮಾರು 1.25 ಲಕ್ಷ ಕ್ಯೂಬಿಕ್‌ ಮೀಟರ್‌ ಹೂಳನ್ನು ತೆಗೆಯಲಾಗಿದ್ದು, ಇದನ್ನು ಜಿಲ್ಲಾಡಳಿತದ ಅನುಮತಿ ಮೇರೆಗೆ ಅನುಪಯುಕ್ತ ಕ್ವಾರಿಯಲ್ಲಿ ತುಂಬಲಾಗಿದೆ.

ಕಲ್ಮಶ ಹರಿಯದಂತೆ ಎಸ್‌ಟಿಪಿ ತಡೆ
ಬೆಂಗಳೂರು ನಗರದಿಂದ ಕೈಗಾರಿಕೆ ಪ್ರದೇಶಗಳ ಮೂಲಕ ತಿಪ್ಪಗೊಂಡನಹಳ್ಳಿಗೆ ಈಗಲೂ ಪ್ರತಿನಿತ್ಯ ಸುಮಾರು 2 ಎಂಎಲ್‌ಡಿ ಕಲ್ಮಶ ನೀರು ಅರ್ಕಾವತಿ ನದಿ ನೀರಿನೊಂದಿಗೆ ಹರಿಯುತ್ತಿದೆ. ಇದನ್ನು ಜಲಾಶಯಕ್ಕೆ ಹರಿಯದಂತೆ ತಡೆಯಲು ಜಲಮಂಡಳಿಗೆ ಸೇರಿದ ಜಾಗದಲ್ಲಿ ಅತ್ಯಾಧುನಿಕ ತ್ಯಾಜ್ಯ ಸಂಸ್ಕರಣೆ ಘಟಕವನ್ನು ನಿರ್ಮಿಸಲಾಗುತ್ತಿದೆ.

ಮೂರು ಹಂತಗಳಲ್ಲಿ ಈ ಭಾಗದಿಂದ ಹರಿಯುವ ನೀರನ್ನು ಸಂಸ್ಕರಿಸುವ ತಂತ್ರಜ್ಞಾನ ಈ ಘಟಕದ್ದಾಗಿದೆ. ಇಲ್ಲಿ ಸಂಸ್ಕರಣೆಯಾದ ನೀರು ಮಾತ್ರ ಜಲಾಶಯ ತಲುಪುವಂತೆ ಮಾಡುವ ವ್ಯವಸ್ಥೆ ಇದಾಗಿದೆ. ನಿತ್ಯ 20 ದಶಲಕ್ಷ ಲೀಟರ್‌ ನೀರನ್ನು ಸಂಸ್ಕರಿಸುವ ಸಾಮರ್ಥ್ಯ ಈ ಘಟಕದ್ದು. ಜಲಮಂಡಳಿ ಅಧಿಕಾರಿಗಳ ಪ್ರಕಾರ, ಇನ್ನೊಂದು ತಿಂಗಳಲ್ಲಿ ಈ ಘಟಕ ಕಾರ್ಯಾರಂಭ ಮಾಡಲಿದೆ.

ಕೋವಿಡ್‌ನಿಂದ ವಿಳಂಬ
ತಿಪ್ಪಗೊಂಡನಹಳ್ಳಿ ಜಲಾನಯನ ಪುನಶ್ಚೇತನ ಯೋಜನೆ ಈಗಾಗಲೇ ಪೂರ್ಣಗೊಂಡು, ನೀರನ್ನು ಸರಬರಾಜು ಮಾಡಬೇಕಾಗಿತ್ತು. ಆದರೆ, ಕೋವಿಡ್‌ ಲಾಕ್‌ಡೌನ್‌ನಿಂದಾಗಿ ಸಾಕಷ್ಟು ಸಮಸ್ಯೆಯಾಗಿ ಯೋಜನೆ ವಿಳಂಬವಾಗಿದೆ. ಇದೀಗ ತ್ವರಿತಗತಿಯಲ್ಲಿ ಕಾಮಗಾರಿಯನ್ನು ’ಮೆಘ‘ ಸಂಸ್ಥೆ ನಡೆಸುತ್ತಿದೆ. ಆದಷ್ಟು ಬೇಗ ಎಲ್ಲ ರೀತಿಯ ಕಾಮಗಾರಿಗಳನ್ನು ಪೂರ್ಣಗೊಳಿಸಿ, ನೀರು ಸರಬರಾಜು ಮಾಡಲಾಗುತ್ತದೆ ಎಂದು ಜಲಮಂಡಳಿಯ ಕಾವೇರಿ ನಿರ್ವಹಣೆ ವಿಭಾಗ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ರಾಮಕೃಷ್ಣ ಗೌಡ ಎಸ್‌. ತಿಳಿಸಿದರು.

***

ಕಾಮಗಾರಿಗಳು ತ್ವರಿತಗತಿಯಲ್ಲಿ ನಡೆಯುತ್ತಿವೆ. ತಿಪ್ಪಗೊಂಡನಹಳ್ಳಿಯಿಂದ ಮಾರ್ಚ್‌ ವೇಳೆಗೆ ನಗರಕ್ಕೆ ನೀರು ‍ಪೂರೈಸಲಾಗುತ್ತದೆ.
–ಎ. ರಾಜಶೇಖರ್‌, ಮುಖ್ಯ ಎಂಜಿನಿಯರ್‌, ಕಾವೇರಿ ನಿರ್ವಹಣೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.