ಸಂಸ್ಥೆಯಲ್ಲಿರುವ ‘ಆಸರೆ’ ಎದೆ ಹಾಲು ಸಂಸ್ಕರಣಾ ಕೇಂದ್ರದಲ್ಲಿ ಸಂಗ್ರಹಿಸಲಾದ ಎದೆ ಹಾಲನ್ನು ಪಾಶ್ಚರೀಕರಣ ಮಾಡಿದರು
ಪ್ರಜಾವಾಣಿ ಚಿತ್ರಗಳು: ರಂಜು ಪಿ.
ಬೆಂಗಳೂರು: ಅಗತ್ಯ ಪ್ರಮಾಣದಲ್ಲಿ ಎದೆ ಹಾಲು ಸಿಗದ, ಅಸ್ವಸ್ಥಗೊಂಡ ರೋಗ ಪೀಡಿತ ಮಕ್ಕಳಿಗೆ ಇಲ್ಲಿನ ಇಂದಿರಾ ಗಾಂಧಿ ಮಕ್ಕಳ ಆರೋಗ್ಯ ಸಂಸ್ಥೆಯ ‘ಆಸರೆ’ ಎದೆಹಾಲು ಸಂಸ್ಕರಣಾ ಕೇಂದ್ರ ನೆರವಾಗುತ್ತಿದ್ದು, ಈ ಕೇಂದ್ರದಲ್ಲಿ ಎದೆ ಹಾಲಿಗೆ ಭಾರಿ ಬೇಡಿಕೆ ಉಂಟಾಗಿದೆ.
ಈ ಸ್ವಾಯತ್ತ ಸಂಸ್ಥೆಯು ಮಕ್ಕಳ ಚಿಕಿತ್ಸೆಗೆ ಹೆಸರಾಗಿದ್ದು, ರಾಜ್ಯದ ವಿವಿಧೆಡೆಯಿಂದ ಚಿಕಿತ್ಸೆಗೆ ಇಲ್ಲಿಗೆ ಬರುತ್ತಾರೆ. ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಸಂಸ್ಥೆಯಲ್ಲಿ ಎದೆಹಾಲು ಸಂಸ್ಕರಣಾ ಕೇಂದ್ರವನ್ನು ನಿರ್ಮಿಸಲಾಗಿದೆ. ಚಿಕಿತ್ಸೆಗಾಗಿ ಮಕ್ಕಳನ್ನು ಕರೆತರುವ ತಾಯಂದಿರಿಂದಲೇ ಹೆಚ್ಚುವರಿ ಎದೆ ಹಾಲನ್ನು ದಾನವಾಗಿ ಪಡೆದು, ಸಂಸ್ಥೆಯಲ್ಲಿ ಅಗತ್ಯವಿರುವ ಮಕ್ಕಳಿಗೆ ವೈದ್ಯರ ಶಿಫಾರಸು ಅನುಸಾರ ಒದಗಿಸಲಾಗುತ್ತಿದೆ. ಈ ಕೇಂದ್ರ ಒಂದೂವರೆ ವರ್ಷದಿಂದ ಕಾರ್ಯನಿರ್ವಹಿಸುತ್ತಿದ್ದು, ಈವರೆಗೆ 54 ಲೀ. ಎದೆ ಹಾಲು ಸಂಗ್ರಹಿಸಿ, ವಿತರಿಸಲಾಗಿದೆ. ನೂರಕ್ಕೂ ಅಧಿಕ ಮಕ್ಕಳು ಈ ಕೇಂದ್ರದ ನೆರವಿನಿಂದ ನಿಯಮಿತವಾಗಿ ಎದೆಹಾಲು ಪಡೆದು, ಚೇತರಿಸಿಕೊಂಡಿದ್ದಾರೆ.
ಮಕ್ಕಳ ಚಿಕಿತ್ಸೆಗಾಗಿ ಸಂಸ್ಥೆಗೆ ಭೇಟಿ ನೀಡುವ ತಾಯಂದಿರಲ್ಲಿ ಪ್ರತಿನಿತ್ಯ ಸರಾಸರಿ 10ರಿಂದ 15 ತಾಯಂದಿರು ಈ ಕೇಂದ್ರಕ್ಕೆ ಭೇಟಿ ನೀಡುತ್ತಾರೆ. ಎದೆಹಾಲು ಪಂಪ್ ಮಾಡುವ ಐದು ಯಂತ್ರಗಳು ಇಲ್ಲಿದ್ದು, ಇದರ ಸಹಾಯದಿಂದ ಎದೆ ಹಾಲನ್ನು ಪಡೆಯಲಾಗುತ್ತದೆ. ಪ್ರತಿ ನಿತ್ಯ ಸರಾಸರಿ ನಾಲ್ಕರಿಂದ ಐದು ತಾಯಂದಿರು ಮಾತ್ರ ಹೆಚ್ಚುವರಿ ಎದೆ ಹಾಲನ್ನು ದಾನವಾಗಿ ನೀಡಿದರೆ, ಉಳಿದ ತಾಯಂದಿರು ಯಂತ್ರದ ಸಹಾಯದಿಂದ ಸಂಗ್ರಹಿಸಿದ ಹಾಲನ್ನು ತಮ್ಮ ಮಗುವಿಗೆ ಕೊಂಡೊಯ್ಯುತ್ತಿದ್ದಾರೆ.
ತಾಯಂದಿರಿಗೆ ಸಮಾಲೋಚನೆ: ಕೇಂದ್ರಕ್ಕೆ ಭೇಟಿ ನೀಡುವ ತಾಯಂದಿರಿಗೆ ಮೊದಲು ಸಮಾಲೋಚನೆ ನಡೆಸಲಾಗುತ್ತದೆ. ಎದೆಹಾಲು ದಾನದ ಪ್ರಕ್ರಿಯೆ, ಮಹತ್ವ ಹಾಗೂ ವಿಧಾನದ ಬಗ್ಗೆ ತಿಳಿಸಿಕೊಡಲು ಟಿ.ವಿ. ಪರದೆಯಲ್ಲಿ ವಿಡಿಯೊಗಳನ್ನೂ ಪ್ರಸಾರ ಮಾಡಲಾಗುತ್ತದೆ. ಎದೆ ಹಾಲು ಸಂಗ್ರಹ ಹಾಗೂ ಶೇಖರಣೆಗೆ ಪ್ರತ್ಯೇಕ ಕೊಠಡಿಗಳಿವೆ. ಹಾಲನ್ನು ದಾನವಾಗಿ ಪಡೆದ ಬಳಿಕ ಅಗತ್ಯ ಪರೀಕ್ಷೆಗಳನ್ನೂ ನಡೆಸಿ, ಶೇಖರಿಸಿ ಇಡಲಾಗುತ್ತದೆ. ವೈದ್ಯರಿಂದ ಶಿಫಾರಸು ಪತ್ರ ತಂದವರಿಗೆ ಎದೆಹಾಲು ಒದಗಿಸಲಾಗುತ್ತದೆ. ಆಸ್ಪತ್ರೆಗೆ ಚಿಕಿತ್ಸೆಗೆ ಬರುವ ಬಹುತೇಕ ಮಕ್ಕಳು ಅಸ್ವಸ್ಥರಾಗಿರುವುದು, ವಿವಿಧ ರೋಗಗಳಿಂದ ಬಳಲುತ್ತಿರುವ ಕಾರಣ, ತಾಯಂದಿರಿಂದ ಅಧಿಕ ಹಾಲನ್ನು ದಾನವಾಗಿ ಪಡೆಯಲು ಸಾಧ್ಯವಾಗುತ್ತಿಲ್ಲ. ಬದಲಾಗಿ, ಪ್ರತಿನಿತ್ಯ ಹಾಲಿಗೆ ಸಲ್ಲಿಸುತ್ತಿರುವ ಬೇಡಿಕೆ ಪತ್ರ ಹೆಚ್ಚುತ್ತಿದೆ. ಸದ್ಯ 2 ಲೀ. ಹಾಲನ್ನು ಶೇಖರಿಸಿಟ್ಟುಕೊಳ್ಳಲಾಗಿದೆ.
‘ಎದೆ ಹಾಲಿನಿಂದ ವಂಚಿತರಾಗಿರುವ ಶಿಶುಗಳಿಗೆ ಈ ಕೇಂದ್ರದ ಮೂಲಕ ಎದೆ ಹಾಲು ಪೂರೈಸಲಾಗುತ್ತದೆ. ಎದೆ ಹಾಲನ್ನು ಪಡೆಯುವಾಗ ಅಗತ್ಯ ಪರೀಕ್ಷೆ ಮಾಡಲಾಗುತ್ತದೆ. ಆರೋಗ್ಯವಂತ ತಾಯಿಯಿಂದ ಮಾತ್ರ ಎದೆ ಹಾಲನ್ನು ಪಡೆಯಲಾಗುತ್ತದೆ’ ಎಂದು ಕೇಂದ್ರದ ನಿರ್ವಾಹಕಿ ಡೈಸಿ ತಿಳಿಸಿದರು.
ಅಂಕಿ–ಅಂಶಗಳು
*500 - ಇಂದಿರಾ ಗಾಂಧಿ ಮಕ್ಕಳ ಆರೋಗ್ಯ ಸಂಸ್ಥೆಯಲ್ಲಿರುವ ಹಾಸಿಗೆಗಳು
*500ರಿಂದ 600 - ಸಂಸ್ಥೆಗೆ ಪ್ರತಿನಿತ್ಯ ಭೇಟಿ ನೀಡುವ ಹೊರರೋಗಿಗಳು
ಎದೆ ಹಾಲು ದಾನದ ಬಗ್ಗೆ ಜಾಗೃತಿ ಕೊರತೆಯಿಂದ ಕೆಲ ತಾಯಂದಿರು ಹಿಂದೇಟು ಹಾಕುತ್ತಾರೆ. ಹೆಚ್ಚುವರಿ ಹಾಲನ್ನು ಮಾತ್ರ ದಾನವಾಗಿ ಪಡೆದು ಅಗತ್ಯವಿರುವ ಮಕ್ಕಳಿಗೆ ಒದಗಿಸಲಾಗುತ್ತದೆಡಾ. ಸಂಜಯ್ ಕೆ.ಎಸ್. ಇಂದಿರಾಗಾಂಧಿ ಮಕ್ಕಳ ಆರೋಗ್ಯ ಸಂಸ್ಥೆ ನಿರ್ದೇಶಕ
‘6 ತಿಂಗಳು ಶೇಖರಣೆ ಸಾಧ್ಯ’
‘ಕೇಂದ್ರದಲ್ಲಿ ಸಂಗ್ರಹಿಸಿದ ಹಾಲನ್ನು ಪಾಶ್ಚರೀಕರಿಸಿದ ಬಳಿಕ ಪ್ಯಾಕ್ ಮಾಡಿ 120 ಡಿಗ್ರಿ ಸೆಲ್ಸಿಯಸ್‌ನಲ್ಲಿ ಸಂರಕ್ಷಿಸಿ ಇಡಲಾಗುತ್ತದೆ. ಮಗುವಿಗೆ ಕುಡಿಸುವಾಗ ಅದನ್ನು ಸಾಮಾನ್ಯ ಉಷ್ಣಾಂಶಕ್ಕೆ ತರಲಾಗುತ್ತದೆ. ಇದನ್ನು ಆರು ತಿಂಗಳವರೆಗೂ ಶೇಖರಿಸಿಡಲು ಸಾಧ್ಯ. ಕೇಂದ್ರಕ್ಕೆ ಭಾನುವಾರ ಮಾತ್ರ ರಜೆ ಇರಲಿದ್ದು ಉಳಿದ ದಿನಗಳಲ್ಲಿ ಬೆಳಿಗ್ಗೆ 9ರಿಂದ ಸಂಜೆ 4 ಗಂಟೆಯವರೆಗೆ ಕಾರ್ಯನಿರ್ವಹಿಸಲಿದೆ’ ಎಂದು ಕೇಂದ್ರದ ಶುಶ್ರೂಷಕರು ತಿಳಿಸಿದರು. ‘ಅವಧಿ ಪೂರ್ವ ಜನಿಸಿದ ಶಿಶುಗಳು ಅಸ್ವಸ್ಥ ಶಿಶುಗಳು ಅನಾರೋಗ್ಯ ಸಮಸ್ಯೆ ಎದುರಿಸುತ್ತಿರುವ ಶಿಶುಗಳು ಎದೆ ಹಾಲು ಉತ್ಪಾದನೆ ಆಗದಿರುವ ತಾಯಂದಿರ ಶಿಶುಗಳಿಗೆ ಈ ಕೇಂದ್ರದಿಂದ ಎದೆ ಹಾಲನ್ನು ನೀಡಲಾಗುತ್ತಿದೆ’ ಎಂದು ಹೇಳಿದರು.
ಸ್ವಯಂಪ್ರೇರಿತ ದಾನಕ್ಕೆ ಅವಕಾಶ
ಸ್ವಯಂಪ್ರೇರಿತವಾಗಿ ಎದೆ ಹಾಲು ದಾನ ಮಾಡಲು ಕೇಂದ್ರದಲ್ಲಿ ತಾಯಂದಿರಿಗೆ ಅವಕಾಶ ನೀಡಲಾಗಿದೆ. ಹೊರ ರೋಗಿ ವಿಭಾಗಕ್ಕೆ ಭೇಟಿ ನೀಡುವ ಕೆಲ ತಾಯಂದಿರು ಹೆಚ್ಚುವರಿ ಎದೆ ಹಾಲನ್ನು ದಾನವಾಗಿ ನೀಡುತ್ತಿದ್ದಾರೆ. ಈ ರೀತಿ ದಾನ ನೀಡಲು ಇಚ್ಛಿಸುವವರು ನೇರವಾಗಿ ಕೇಂದ್ರಕ್ಕೆ ಭೇಟಿ ನೀಡಬಹುದಾಗಿದೆ. ಸಂಸ್ಥೆಯಲ್ಲಿನ ಮಕ್ಕಳಿಗೆ ಪ್ರತಿನಿತ್ಯ ಸರಾಸರಿ 1500 ಎಂ.ಎಲ್. ಎದೆ ಹಾಲಿಗೆ ಬೇಡಿಕೆ ಸಲ್ಲಿಕೆಯಾಗುತ್ತಿದ್ದು ಲಭ್ಯತೆ ಆಧಾರದಲ್ಲಿ 600ರಿಂದ 700 ಎಂ.ಎಲ್. ಒದಗಿಸಲಾಗುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.