ADVERTISEMENT

ಬೆಂಗಳೂರು | ವಾಲಿದ ಐದು ಅಂತಸ್ತಿನ ಕಟ್ಟಡ; ತೆರವು ಆರಂಭ

​ಪ್ರಜಾವಾಣಿ ವಾರ್ತೆ
Published 28 ಸೆಪ್ಟೆಂಬರ್ 2025, 0:06 IST
Last Updated 28 ಸೆಪ್ಟೆಂಬರ್ 2025, 0:06 IST
ವಾಲಿದ ಕಟ್ಟಡ
ವಾಲಿದ ಕಟ್ಟಡ   

ಬೆಂಗಳೂರು: ಕೋರಮಂಗಲದಲ್ಲಿ 1ನೇ ಬ್ಲಾಕ್‌ನ ವೆಂಕಟಾಪುರದಲ್ಲಿ ನಿರ್ಮಾಣ ಹಂತದಲ್ಲಿರುವ ಐದು ಅಂತಸ್ತಿನ ಕಟ್ಟಡ ಕುಸಿದು ಒಂದು ಕಡೆ ವಾಲಿರುವುದು ಸ್ಥಳೀಯರಲ್ಲಿ ಆತಂಕ ಮೂಡಿಸಿದ ಬೆನ್ನಲ್ಲೇ ಕಟ್ಟಡ ತೆರವು ಕಾರ್ಯಾಚರಣೆ ಆರಂಭಗೊಂಡಿದೆ.

ಬಿಟಿಎಂ ಲೇಔಟ್‌ನಲ್ಲಿ ಅಂದಾಜು 15 ಅಡಿX15 ಅಡಿ ವಿಸ್ತೀರ್ಣದ ಜಾಗದಲ್ಲಿ ನಿರ್ಮಾಣವಾಗಿರುವ ಕಟ್ಟಡದ ಅಡಿಪಾಯ ಮತ್ತು ಪಿಲ್ಲರ್ ಗಳಲ್ಲಿ ಬಿರುಕು ಕಾಣಿಸಿಕೊಂಡಿತ್ತು. ಕಟ್ಟಡದ ಒಂದು ಕಡೆಯ ಬುನಾದಿ ಕುಸಿದಿತ್ತು. ಅಕ್ಕಪಕ್ಕದ ಕಟ್ಟಡಗಳ ಮೇಲೆ ಬೀಳದಂತೆ ಮುಂಜಾಗ್ರತಾ ಕ್ರಮವಾಗಿ ಕಟ್ಟಡಕ್ಕೆ ಕಬ್ಬಿಣದ ರಾಡ್‌ಗಳನ್ನು ಅಡ್ಡಲಾಗಿ ನಿಲ್ಲಿಸಲಾಗಿತ್ತು.

ಆಸ್ತಿ ಸಂಖ್ಯೆ 17/ಬಿ ನಲ್ಲಿ ನಿರ್ಮಿಸುತ್ತಿರುವ ಕಟ್ಟಡ ಶಾಂತಮ್ಮ ಎಂಬುವರಿಗೆ ಸೇರಿದ್ದು, ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಅಧಿಕಾರಿಗಳು ನೋಟಿಸ್ ನೀಡಿದ್ದರು. ಕಟ್ಟಡ ವಾಲಿದ್ದರಿಂದ ಮಾಲೀಕರು ತಾವೇ ನೆಲಸಮಗೊಳಿಸಲು ಮುಂದಾಗಿದ್ದಾರೆ.

ADVERTISEMENT

‘ಅಕ್ಕಪಕ್ಕದ ನಿವಾಸಿಗಳಿಗೆ ಹಾಗೂ ಸಾರ್ವಜನಿಕರಿಗೆ ಕಟ್ಟಡ ತೆರವು ಕಾರ್ಯಾಚರಣೆಯಿಂದ ಯಾವುದೇ ರೀತಿಯ ತೊಂದರೆ ಆಗದಂತೆ ನೋಡಿಕೊಳ್ಳುವಂತೆ ಮಾಲೀಕರಿಗೆ ಸೂಚನೆ ನೀಡಲಾಗಿದೆ. ಈ ಕಟ್ಟಡವನ್ನು ನೆಲಸಮಗೊಳಿಸುವವರೆಗೂ ನಿಗಾ ವಹಿಸಲಾಗುವುದು. ತೆರವು ಕಾರ್ಯಾಚರಣೆ ವಿಳಂಬ ಮಾಡಿದರೆ ಪಾಲಿಕೆ ವತಿಯಿಂದ ಕಟ್ಟಡ ನೆಲಸಮಗೊಳಿಸಲು ನಿಯಮಾನುಸಾರ ಕ್ರಮ ಕೈಗೊಳ್ಳಲಾಗುವುದು’ ಎಂದು ಸಹಾಯಕ ಕಾರ್ಯಪಾಲಕ ಎಂಜಿನಿಯರ್ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.