ADVERTISEMENT

ಬೆಂಗಳೂರು: ಬಸ್‌ ದರ ನಿಗದಿಗೆ ಸಮಿತಿ ರಚಿಸಿದ ಸರ್ಕಾರ

ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ ಮಾದರಿಯಲ್ಲಿ ಪರಿಷ್ಕರಣೆಗೆ ಅವಕಾಶ

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2025, 15:58 IST
Last Updated 21 ಸೆಪ್ಟೆಂಬರ್ 2025, 15:58 IST
   

ಬೆಂಗಳೂರು: ಕೆಎಸ್‌ಆರ್‌ಟಿಸಿ ಸೇರಿದಂತೆ ಸಾರಿಗೆ ನಿಗಮಗಳ ಬಸ್‌ ದರವನ್ನು ಪರಿಷ್ಕರಿಸಲು ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗದ (ಕೆಇಆರ್‌ಸಿ) ಮಾದರಿಯಲ್ಲಿ ಸಾರ್ವಜನಿಕ ಸಾರಿಗೆ ದರ ನಿಯಂತ್ರಣ ಸಮಿತಿಯನ್ನು ರಚಿಸಲು ರಾಜ್ಯ ಸರ್ಕಾರ ಕರಡು ಅಧಿಸೂಚನೆಯನ್ನು ಪ್ರಕಟಿಸಿದೆ. 

ಕರ್ನಾಟಕ ಮೋಟಾರು ವಾಹನ ನಿಯಮಗಳು, 1989ರಡಿಯಲ್ಲಿ ರಚಿಸಿರುವ ಸಮಿತಿಗೆ ಸರ್ಕಾರದ ನಿವೃತ್ತ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅಥವಾ ಕರ್ನಾಟಕ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಅಧ್ಯಕ್ಷರಾಗಿರುತ್ತಾರೆ. ಇಬ್ಬರು ಸದಸ್ಯರು ಇರಲಿದ್ದಾರೆ. ಸದಸ್ಯರು ಕಾನೂನು ಶಿಕ್ಷಣ ಅರ್ಹತೆಯುಳ್ಳ ನಿವೃತ್ತ ಮುಖ್ಯ ಕಾರ್ಯದರ್ಶಿ ಅಥವಾ ಕಾರ್ಯದರ್ಶಿ ಮತ್ತು ಕೈಗಾರಿಕಾ ತಜ್ಞ ಅಥವಾ ಹಣಕಾಸು ತಜ್ಞರಾಗಿರುತ್ತಾರೆ. ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕರು ಸದಸ್ಯ ಕಾರ್ಯದರ್ಶಿಯಾಗಿರಲಿದ್ದಾರೆ.

ಈ ಸಮಿತಿಯು ರಸ್ತೆ ಸಾರಿಗೆ ನಿಗಮಗಳ ಆರ್ಥಿಕ ಪರಿಸ್ಥಿತಿಯನ್ನು ಅಧ್ಯಯನ ಮಾಡಿ, ಕಾಲಕಾಲಕ್ಕೆ ದರ ಪರಿಷ್ಕರಣೆಯನ್ನು ಸೂಚಿಸಲಿದೆ. ನಿಗಮಗಳ ಆರ್ಥಿಕ ಮತ್ತು ಕಾರ್ಯಾಚರಣೆಯ ದಕ್ಷತೆಯನ್ನು ಸುಧಾರಿಸಲು ದರಗಳ ಮೇಲೆ ವಿವಿಧ ಸರ್‌ಚಾರ್ಜ್‌ಗಳು ಮತ್ತು ಶುಲ್ಕಗಳನ್ನು ವಿಧಿಸಲು ಸೂಚಿಸುವ ಅಧಿಕಾರ ಕೂಡ ಈ ಸಮಿತಿಗೆ ಇರಲಿದೆ.

ADVERTISEMENT

ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳಲ್ಲಿ ‌ವೈಜ್ಞಾನಿಕವಾಗಿ ಪ್ರಯಾಣ ದರ ಹೆಚ್ಚಿಸಲು ಈ ಹಿಂದೆ ಯಾವುದೇ ಸಮಿತಿ  ರಚನೆಯಾಗಿಲ್ಲ. ಕಾಲಕಾಲಕ್ಕೆ ಹೆಚ್ಚಳವಾಗುವ ಡೀಸೆಲ್ ಬೆಲೆ ಮತ್ತು ಇತರೆ ವೆಚ್ಚವನ್ನು ಸರಿದೂಗಿಸಲು ದರ ಪರಿಷ್ಕರಣೆ ಅಗತ್ಯವಾದರೂ ಪರಿಷ್ಕರಣೆ ಆಗದೇ ಇರುವುದರಿಂದ ಸಾರಿಗೆ ನಿಗಮಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕುತ್ತಿವೆ. ಬಿಎಂಟಿಸಿಯಲ್ಲಿ 2014ರಲ್ಲಿ ದರ ಪರಿಷ್ಕರಣೆಯಾಗಿತ್ತು. ಅದಾದ 11 ವರ್ಷಗಳ ಬಳಿಕ ಈ ವರ್ಷ ಪರಿಷ್ಕರಣೆಯಾಗಿದೆ. ಈ ಅವಧಿಯಲ್ಲಿ ಇಂಧನ ವೆಚ್ಚ ₹7 ಕೋಟಿಯಿಂದ ₹13 ಕೋಟಿಗೆ, ಸಿಬ್ಬಂದಿ ವೆಚ್ಚ ₹6 ಕೋಟಿಯಿಂದ ₹12 ಕೋಟಿಗೆ ಹೆಚ್ಚಳವಾಗಿತ್ತು.

ಕೆಎಸ್‌ಆರ್‌ಟಿಸಿ, ಕೆಕೆಆರ್‌ಟಿಸಿ, ಎನ್‌ಡಬ್ಲ್ಯುಆರ್‌ಟಿಸಿಯಲ್ಲಿ 2020ರಲ್ಲಿ ಪರಿಷ್ಕರಣೆಯಾಗಿತ್ತು. ಆನಂತರದ ಪರಿಷ್ಕರಣೆಗೆ ಐದು ವರ್ಷ ಹಿಡಿದಿದೆ. ಇದನ್ನು ತಪ್ಪಿಸುವುದಕ್ಕಾಗಿ ಸರ್ಕಾರ ದರ ಸಮಿತಿ ರಚಿಸಲು ಮುಂದಾಗಿದೆ ಎಂದು ಸಾರಿಗೆ ಅಧಿಕಾರಿಗಳು ತಿಳಿಸಿದ್ದಾರೆ.

ಐದು–ಹತ್ತು ವರ್ಷಗಳಿಗೊಮ್ಮೆ ಟಿಕೆಟ್‌ ದರ ಒಮ್ಮೆಲೇ ಹೆಚ್ಚಿಸಿದರೆ ಪ್ರಯಾಣಿಕರಿಗೂ ಹೊರೆಯಾಗುತ್ತದೆ. ಕಾಲಕಾಲಕ್ಕೆ ಅಲ್ಪ ಪ್ರಮಾಣದಲ್ಲಿ ವೈಜ್ಞಾನಿಕವಾಗಿ ದರ ಏರಿಕೆ ಮಾಡಿದಾಗ ಹೊರೆಯಾಗುವುದು ತಪ್ಪಲಿದೆ. ಅಲ್ಲದೇ ರಾಜಕೀಯ ಹಿತಾಸಕ್ತಿಗಳಿಂದ ದೂರ ಇದ್ದು, ಸ್ವತಂತ್ರವಾಗಿ ಸಮಿತಿಯು ಕಾರ್ಯನಿರ್ವಹಿಸುವುದರಿಂದ ಸಂಸ್ಥೆಗಳಿಗೂ ಒಳಿತಾಗಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಪ್ರತಿ ವರ್ಷ ಶಿಫಾರಸು ಸಲ್ಲಿಕೆ

ಸಮಿತಿಯು, ರಸ್ತೆ ಸಾರಿಗೆ ನಿಗಮಗಳಿಗೆ ನೀಡಲಾದ ಶಿಫಾರಸುಗಳ ಪ್ರತಿಯನ್ನು ಉಭಯ ಸದನಗಳ ಮುಂದೆ ಮಂಡಿಸಲು ಸರ್ಕಾರಕ್ಕೆ ಪ್ರತಿ ವರ್ಷ ಏಪ್ರಿಲ್ 1ರ ನಂತರ ಸಲ್ಲಿಸಬೇಕು. ಡಿಸೆಂಬರ್ 31ರ ಒಳಗೆ ವಾರ್ಷಿಕ ವರದಿಯಾಗಿ ಸಲ್ಲಿಸಬೇಕು ಎಂದು ಸೂಚಿಸಲಾಗಿದೆ.

30 ದಿನಗಳ ಬಳಿಕ ಪರಿಗಣನೆ

ರಾಜ್ಯಪತ್ರದಲ್ಲಿ ಅಧಿಸೂಚನೆಯ ಕರಡುಪ್ರತಿಯನ್ನು ಸೆ.9ರಂದು ಪ್ರಕಟಿಸಲಾಗಿದೆ. 30 ದಿನಗಳ ಬಳಿಕ ಪರಿಗಣಿಸಲಾಗುವುದು. 

ಕರಡು ನಿಯಮಗಳಿಗೆ ಸಂಬಂಧಿಸಿದಂತೆ ಸಾರ್ವಜನಿಕರು ಯಾವುದೇ ಆಕ್ಷೇಪಣೆ ಅಥವಾ ಸಲಹೆಯನ್ನು ಸಚಿವರು, ಸಾರಿಗೆ ಇಲಾಖೆ, ಕೊಠಡಿ ಸಂಖ್ಯೆ 123, ನೆಲ ಮಹಡಿ, ಎಂ.ಎಸ್. ಕಟ್ಟಡ, 3ನೇ ದ್ವಾರ, ಬೆಂಗಳೂರು – 560 001 ಇಲ್ಲಿಗೆ ಸಲ್ಲಿಸಬಹುದು ಎಂದು ಸಾರಿಗೆ ಇಲಾಖೆಯ ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.