ADVERTISEMENT

ಗುಂಡಿಗಳ ಸಾಲು– ಸಂಚಾರದಟ್ಟಣೆ ಗೋಳು!

ಮುಖ್ಯರಸ್ತೆಯಲ್ಲಿ ಮೆಟ್ರೊ ಕಾಮಗಾರಿ– ಅಡ್ಡ ರಸ್ತೆಗಳಲ್ಲಿ ಜಲಮಂಡಳಿ ಪೈಪ್‌ ಕಿರಿಕಿರಿ * ಸ್ಥಳೀಯರಿಗೆ ನರಕ ದರ್ಶನ

ಗುರು ಪಿ.ಎಸ್‌
Published 27 ಸೆಪ್ಟೆಂಬರ್ 2019, 20:22 IST
Last Updated 27 ಸೆಪ್ಟೆಂಬರ್ 2019, 20:22 IST
ಪರಪ್ಪನ ಅಗ್ರಹಾರ ಮುಖ್ಯರಸ್ತೆಯಲ್ಲಿ ಬೆಸ್ಕಾಂ ಕೇಬಲ್ ಅಳವಡಿಸಲು ಗುಂಡಿ ತೋಡಲಾಗಿದೆ. ರಸ್ತೆ ಕಿರಿದಾಗಿರುವ ಕಾರಣ ಸಂಚಾರ ದಟ್ಟಣೆ ಉಂಟಾಗುತ್ತಿದೆ(ಎಡಚಿತ್ರ). ಕಸವನಹಳ್ಳಿ ಬಳಿಯ ಓನರ್ಸ್‌ ಕೋರ್ಟ್‌ ಬಡಾವಣೆಯಲ್ಲಿ ಒಳಚರಂಡಿ ಪೈಪ್‌ ಅಳವಡಿಕೆಗಾಗಿ ರಸ್ತೆ ಅಗೆದಿರುವುದು- –ಪ್ರಜಾವಾಣಿ ಚಿತ್ರಗಳು
ಪರಪ್ಪನ ಅಗ್ರಹಾರ ಮುಖ್ಯರಸ್ತೆಯಲ್ಲಿ ಬೆಸ್ಕಾಂ ಕೇಬಲ್ ಅಳವಡಿಸಲು ಗುಂಡಿ ತೋಡಲಾಗಿದೆ. ರಸ್ತೆ ಕಿರಿದಾಗಿರುವ ಕಾರಣ ಸಂಚಾರ ದಟ್ಟಣೆ ಉಂಟಾಗುತ್ತಿದೆ(ಎಡಚಿತ್ರ). ಕಸವನಹಳ್ಳಿ ಬಳಿಯ ಓನರ್ಸ್‌ ಕೋರ್ಟ್‌ ಬಡಾವಣೆಯಲ್ಲಿ ಒಳಚರಂಡಿ ಪೈಪ್‌ ಅಳವಡಿಕೆಗಾಗಿ ರಸ್ತೆ ಅಗೆದಿರುವುದು- –ಪ್ರಜಾವಾಣಿ ಚಿತ್ರಗಳು   

ಬೆಂಗಳೂರು:ನರಕದ ಮಾರ್ಗ ಹೇಗಿರುತ್ತದೆ ಎಂದು ನೋಡಬೇಕು ಎನಿಸಿದರೆ ಹೊಸೂರು, ಬನ್ನೇರುಘಟ್ಟ, ಬೇವೂರು, ಪರಪ್ಪನ ಅಗ್ರಹಾರ, ನಾಗನಾಥಪುರದ ರಸ್ತೆಯಲ್ಲಿ ಒಮ್ಮೆ ನೀವು ಓಡಾಡಬೇಕು. ಒಳಚರಂಡಿ ಪೈಪ್‌ಗಳನ್ನು ಅಳವಡಿಸಲು ಜಲಮಂಡಳಿಯು ಒಂದು ಕಡೆ ರಸ್ತೆ ಅಗೆದಿದ್ದರೆ, ಕೇಬಲ್‌ಗಳನ್ನು ಹಾಕಲು ಬೆಸ್ಕಾಂ ರಸ್ತೆಯನ್ನು ಅಗೆಯಲು ಆರಂಭಿಸಿದೆ.

ಮುಖ್ಯರಸ್ತೆಗಳಲ್ಲಿ ‘ನಮ್ಮ ಮೆಟ್ರೊ’ ಕಾಮಗಾರಿ ನಡೆಯುತ್ತಿದ್ದು, ದೂಳಿನ ಶಿಕ್ಷೆಯ ಜೊತೆಗೆ ಸಂಚಾರ ದಟ್ಟಣೆಯ ಸಜೆಯನ್ನೂ ವಾಹನ ಸವಾರರು ಅನುಭವಿಸುತ್ತಿದ್ದಾರೆ. ಆರೇಳು ತಿಂಗಳುಗಳಿಂದ ಸಮಸ್ಯೆ ಬಗೆಹರಿದಿಲ್ಲ.

ಬನ್ನೇರುಘಟ್ಟ ರಸ್ತೆಯ ಬಿಳೇಕಹಳ್ಳಿಯಿಂದ ಮೀನಾಕ್ಷಿ ಮಾಲ್‌ವರೆಗಿನ ರಸ್ತೆಯನ್ನು ಬೆಂಗಳೂರು ಮೆಟ್ರೊ ರೈಲು ನಿಗಮ (ಬಿಎಂಆರ್‌ಸಿಎಲ್‌) ದುರಸ್ತಿಗೊಳಿಸಬೇಕಾಗಿತ್ತು ಎಂದು ಜಲಮಂಡಳಿ ಹೇಳುತ್ತದೆ. ಈ ರಸ್ತೆಯ ಇನ್ನೊಂದು ಬದಿಯಲ್ಲಿ ಒಳಚರಂಡಿ ಪೈಪ್‌ಗಳನ್ನು ಮಂಡಳಿ ಅಳವಡಿಸಬೇಕಾಗಿದೆ. ಈ ಯಾವ ಕಾರ್ಯವೂ ನಡೆಯುತ್ತಿಲ್ಲವಾದ್ದರಿಂದ, ರಸ್ತೆಗಳು ಗುಂಡಿಮಯವಾಗಿದ್ದು, ಮಲಿನ ನೀರು ಈ ಪ್ರದೇಶವನ್ನು ಆವರಿಸಿದೆ.

ADVERTISEMENT

ವಿಪ್ರೊ, ಮೈಕ್ರೋಸಾಫ್ಟ್‌, ರಿಲಯನ್ಸ್‌ ಜಿಯೊದಂತಹ ಹಲವು ಪ್ರತಿಷ್ಠಿತ ಐಟಿ ಕಂಪನಿಗಳು ಈ ಪ್ರದೇಶದಲ್ಲಿದ್ದು, ಹೊಸೂರು, ಬನ್ನೇರುಘಟ್ಟ ರಸ್ತೆಯ ಮೂಲಕವೇ ಉದ್ಯೋಗಿಗಳು ಸಾಗಬೇಕು. ಹದಗೆಟ್ಟ ರಸ್ತೆಗಳಿಂದ ಸಂಚಾರ ದಟ್ಟಣೆ ಹೆಚ್ಚುತ್ತಿದೆ. ಆರೋಗ್ಯವೂ ಹದಗೆಡುತ್ತಿದೆ ಎಂದು ಅಳಲು ತೋಡಿಕೊಳ್ಳುತ್ತಾರೆ ಐಟಿ ಕಂಪನಿಯೊಂದರ ಉದ್ಯೋಗಿ ವಿ. ಪ್ರಕಾಶ್‌.

‘ಜಲಮಂಡಳಿಯವರನ್ನು ಪ್ರಶ್ನಿಸಿದರೆ ನಾವು ಬಿಬಿಎಂಪಿಗೆ ಹಣ ಪಾವತಿಸಿದ್ದೇವೆ ಎನ್ನುತ್ತಾರೆ. ಬಿಬಿಎಂಪಿ ಅಧಿಕಾರಿಗಳನ್ನು ಪ್ರಶ್ನಿಸಿದರೆ ಹಣ ಸಾಕಾಗುತ್ತಿಲ್ಲ ಎಂಬ ಸಬೂಬು ಹೇಳುತ್ತಿದ್ದಾರೆ. ಒಂದಾದ ನಂತರ ಕಾಮಗಾರಿ ಕೈಗೆತ್ತಿಕೊಳ್ಳುವುದರಿಂದ ರಸ್ತೆಯ ಸ್ಥಿತಿ ಹೀಗಿದೆ ಎನ್ನುತ್ತಾರೆ.

ಹಣ ಇಲ್ಲ ಎಂದ ಮೇಲೆ ಎಲ್ಲ ರಸ್ತೆಗಳನ್ನು ಏಕೆ ಅಗೆಯಬೇಕಿತ್ತು’ ಎಂದು ಪ್ರಶ್ನಿಸುತ್ತಾರೆ ಬೇಗೂರಿನ ಸಂಜಯ್‌ ರಮಾನಾಥ್‌.

‘ಬಿಸಿಲಿದ್ದಾಗ ದೂಳು ಮುಖಕ್ಕೆ ರಾಚುತ್ತದೆ.ಮಳೆ ಬಂದರೆ ರಸ್ತೆಗಳು ನದಿಗಳಂತಾಗುತ್ತವೆ. ನೀರು ಹರಿದು ಹೋಗಲು ಸೂಕ್ತವಾದ ವ್ಯವಸ್ಥೆಯಿಲ್ಲ’ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸುತ್ತಾರೆ.

‘ಕಿ.ಮೀ.ರಸ್ತೆ ರಿಪೇರಿಗೆ ₹15 ಲಕ್ಷ ಬೇಕು’
‘ಒಳಚರಂಡಿ ಪೈಪ್‌ಲೈನ್‌ ಅಳವಡಿಕೆಗೆ ಅಗೆಯಲಾಗಿರುವ ರಸ್ತೆಗಳ ದುರಸ್ತಿಗಾಗಿ ಜಲಮಂಡಳಿಯು ಬಿಬಿಎಂಪಿಗೆ ₹100 ಕೋಟಿ ಕೊಟ್ಟಿದೆ. ಆದರೆ, ಈ ಹಣ ಯಾವುದಕ್ಕೂ ಸಾಲುವುದಿಲ್ಲ’ ಎನ್ನುತ್ತಾರೆ ಬಿಬಿಎಂಪಿ ಆಯುಕ್ತ ಬಿ.ಎಚ್. ಅನಿಲ್‌ಕುಮಾರ್.

‘ಜಲಮಂಡಳಿಯು ಈವರೆಗೆ 3,000 ಕಿ.ಮೀ.ನಷ್ಟು ರಸ್ತೆ ಅಗೆದಿದೆ. ಆದರೆ, ಪ್ರತಿ ಒಂದು ಕಿ.ಮೀ. ರಸ್ತೆ ದುರಸ್ತಿ ಅಥವಾ ಪುನರ್‌ಅಭಿವೃದ್ಧಿಗೆ ₹10 ಲಕ್ಷದಿಂದ ₹15 ಲಕ್ಷ ಬೇಕಾಗುತ್ತದೆ’ ಎಂದು ಅವರು ತಿಳಿಸಿದರು.

‘ಅನುದಾನವಿಲ್ಲ ಎಂದು ನಾವು ರಸ್ತೆ ದುರಸ್ತಿ ಕಾರ್ಯವನ್ನು ಕೈಬಿಟ್ಟಿಲ್ಲ. ನಮ್ಮ ಸಿಬ್ಬಂದಿ ಈ ಕಾರ್ಯ ಮಾಡುತ್ತಲೇ ಇದ್ದಾರೆ. ಮುಖ್ಯಮಂತ್ರಿಗಳ ನವನಗರೋತ್ಥಾನ ಯೋಜನೆಯಡಿ ರಸ್ತೆ ದುರಸ್ತಿ ಮತ್ತು ಪುನರ್‌ಅಭಿವೃದ್ಧಿಗಾಗಿಯೇ ₹250 ಕೋಟಿ ತೆಗೆದಿರಿಸಲಾಗಿದೆ’ ಎಂದು ಅವರು ತಿಳಿಸಿದರು.

‘ಜಲಮಂಡಳಿಯವರು ಹೆಚ್ಚಿನ ಅನುದಾನ ಕೊಡಲಿ, ಬಿಡಲಿ. ರಸ್ತೆ ದುರಸ್ತಿಗೊಳಿಸುವುದು ಬಿಬಿಎಂಪಿ ಜವಾಬ್ದಾರಿ. ಆ ಕೆಲಸವನ್ನು ನಾವು ಮಾಡುತ್ತೇವೆ. ಬೇರೆ ಮೂಲಗಳಿಂದಲೂ ಹಣ ತಂದು ಈ ಕಾರ್ಯ ಕೈಗೆತ್ತಿಕೊಳ್ಳುತ್ತೇವೆ. ಈಗಾಗಲೇ ಪೈಪ್‌ಲೈನ್‌ ಅಳವಡಿಕೆ ಕಾರ್ಯ ಮುಗಿದಿರುವ ರಸ್ತೆಗಳನ್ನು ದುರಸ್ತಿಗೊಳಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ’ ಎಂದು ಅನಿಲ್‌ಕುಮಾರ್‌ ತಿಳಿಸಿದರು.

ಕಸವನಹಳ್ಳಿ ಬಳಿಯ ಓನರ್ಸ್‌ ಕೋರ್ಟ್‌ ಬಡಾವಣೆಯಲ್ಲಿ ಒಳಚರಂಡಿ ಪೈಪ್‌ ಅಳವಡಿಕೆಗಾಗಿ ರಸ್ತೆ ಅಗೆದಿರುವುದು- ಪ್ರಜಾವಾಣಿ ಚಿತ್ರ

**
ಮನವಿ ಮಾಡಿ ಸಾಕಾಯ್ತು..

ಜನಪ್ರತಿನಿಧಿಗಳು, ಅಧಿಕಾರಿಗಳಿಗೆ ಮನವಿ ಮಾಡಿ ಸಾಕಾಯಿತು. ರಸ್ತೆಯಲ್ಲಿ ವೃದ್ಧರು, ಮಹಿಳೆಯರು ಬಿದ್ದರೂ ಕೇಳುವವರಿಲ್ಲ. ಒಳಚರಂಡಿ ಪೈಪ್‌ಗಳ ಅಳವಡಿಕೆ ಕಾರ್ಯ ಮುಗಿದ ನಂತರವೂ ದುರಸ್ತಿ ಕಾರ್ಯ ಕೈಗೆತ್ತಿಕೊಂಡಿಲ್ಲ.
-ವಿಷ್ಣುಪ್ರಸಾದ್

**
ವಾಹನಗಳು ಕೆಸರಿನಲ್ಲಿ...
ಮಳೆ ಬಂದರೆ ಮನೆಯಿಂದ ಹೊರಗೆ ಬರಲು ಆಗುವುದೇ ಇಲ್ಲ. ಹೊರಗೆ ಬಂದರೂ, ರಸ್ತೆಯ ಕೆಸರಿನಲ್ಲಿ ಕಾರು, ಬೈಕ್‌ಗಳು ಸಿಕ್ಕಿಹಾಕಿಕೊಳ್ಳುತ್ತಿವೆ. ಎಲ್ಲ ರಸ್ತೆಯನ್ನೂ ಒಮ್ಮೆಗೆ ಅಗೆಯುವ ಬದಲಿಗೆ ಹಂತ–ಹಂತವಾಗಿ ಕಾಮಗಾರಿ ಕೈಗೆತ್ತಿಕೊಳ್ಳಬೇಕಾಗಿತ್ತು.
-ಶ್ರೀನಿವಾಸ ಮೂರ್ತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.