ADVERTISEMENT

ಕೋಗಿಲು | ಕನ್ನಡಿಗರ ಹಿತಾಸಕ್ತಿ ಬಲಿ ಕೊಡಲು ಅವಕಾಶ ನೀಡಲ್ಲ: ವಿಜಯೇಂದ್ರ

​ಪ್ರಜಾವಾಣಿ ವಾರ್ತೆ
Published 30 ಡಿಸೆಂಬರ್ 2025, 6:24 IST
Last Updated 30 ಡಿಸೆಂಬರ್ 2025, 6:24 IST
ವಿಜಯೇಂದ್ರ
ವಿಜಯೇಂದ್ರ   

ಬೆಳಗಾವಿ: ‘ಬೆಂಗಳೂರಿನ ಬಯಪ್ಪನಹಳ್ಳಿಯಲ್ಲಿ ಕನ್ನಡಿಗರಿಗೆ ಹಸ್ತಾಂತರಿಸಲು ನಿರ್ಮಿಸಿದ ಮನೆಗಳನ್ನು ಕೇರಳದ ಅಕ್ರಮ ವಲಸಿಗರಿಗೆ ನೀಡುವ ಮೂಲಕ ರಾಜಕೀಯವಾಗಿ ಲಾಭ ಮಾಡಿಕೊಳ್ಳಲು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಮುಂದಾಗಿದ್ದಾರೆ. ಆದರೆ, ಕನ್ನಡಿಗರ ಹಿತಾಸಕ್ತಿ ಬಲಿ ಕೊಡಲು ನಾವು ಅವಕಾಶ ಕೊಡಲ್ಲ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.

ಇಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಬೆಂಗಳೂರಿನ ಯಲಹಂಕದ ಕೋಗಿಲು ಬಡಾವಣೆಯಲ್ಲಿನ ಮನೆಗಳನ್ನು ರಾಜ್ಯ ಸರ್ಕಾರ ಈಗ ಏಕಾಏಕಿ ನೆಲಸಮ ಮಾಡಿತು. ಈಗ ಕೇರಳದ ಮುಖ್ಯಮಂತ್ರಿ ಮತ್ತು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ ಒತ್ತಡಕ್ಕೆ ಮಣಿದ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್‌ ಅವರು, ಬಯ್ಯಪ್ಪನಹಳ್ಳಿಯಲ್ಲಿ ಕೇರಳದ ವಲಸಿಗರಿಗೆ ಮನೆ ಮಂಜೂರು ಮಾಡುತ್ತಿದ್ದಾರೆ’ ಎಂದು ಆರೋಪಿಸಿದರು.

‘ರಾಜೀವ್‌ ಗಾಂಧಿ ವಸತಿ ನಿಗಮದ ಯೋಜನೆಯಡಿ ಬಡವರು ಮತ್ತು ಪರಿಶಿಷ್ಟ ವರ್ಗದವರಿಗೆ ಹಂಚಿಕೆ ಮಾಡಲು ಬಯ್ಯಪ್ಪನಹಳ್ಳಿಯಲ್ಲಿ ನಿರ್ಮಿಸಿರುವ ಮನೆಗಳು ಅರ್ಹರಿಗೆ ಸಿಗಬೇಕು. ಕನ್ನಡರಿಗೆ ಸಿಗಬೇಕಾದ ಮನೆಗಳನ್ನು ಕೇರಳದ ಅಕ್ರಮ ವಲಸಿಗರಿಗೆ ನೀಡಲು ಮುಂದಾಗಿರುವುದು ಕಾನೂನಿನ ವಿರುದ್ಧವಾಗಿದೆ. ಇದು ಕನ್ನಡರಿಗ ಆತ್ಮಗೌರವಕ್ಕೆ ಚ್ಯುತಿ  ತರುವ ಕೆಲಸವಾಗಿದೆ’ ಎಂದು ದೂರಿದರು.

ADVERTISEMENT

‘ಸಿದ್ದರಾಮಯ್ಯ ಮತ್ತು ಶಿವಕುಮಾರ್‌ ಈಗ ಅತಂತ್ರ ಸ್ಥಿತಿಯಲ್ಲಿದ್ದಾರೆ. ಒಬ್ಬರು ಸಿ.ಎಂ ಸ್ಥಾನ ಉಳಿಸಿಕೊಳ್ಳಲು ಮತ್ತು ಮತ್ತೊಬ್ಬರು ಸ್ಥಾನ ಪಡೆಯಲು ಹೋರಾಟ ಮಾಡುತ್ತಿದ್ದಾರೆ. ಕೋಗಿಲು ಲೇಔಟ್‌ನಲ್ಲಿ ಮನೆ ಕಡೆವಿದ ಮೂರ್ನಾಲ್ಕು ದಿನಗಳಲ್ಲೇ ಉಲ್ಟಾ ಹೊಡೆದಿದ್ದು, ಬಯ್ಯಪ್ಪನಹಳ್ಳಿ ಮನೆ ಕೊಡಲು ಮುಂದಾಗಿದ್ದಾರೆ. ವಿಶೇಷ ಪ್ರಕರಣವೆಂದು ಮನೆ ಹಂಚಿಕೆ ಮಾಡುವುದಾಗಿ ಘೋಷಿಸಿದ್ದಾರೆ. ರಾಜ್ಯಕ್ಕೆ ಸಂಬಂಧಿಸಿದ ನಿರ್ಧಾರಗಳನ್ನು ದೆಹಲಿಯಲ್ಲಿ ಕುಳಿತಿರುವ ಕೇರಳ ಮೂಲದ ವೇಣುಗೋಪಾಲ ನಿರ್ಧಾರ ಮಾಡಬೇಕೇ ಅಥವಾ ಮುಖ್ಯಮಂತ್ರಿಗಳು ಮಾಡಬೇಕೇ’ ಎಂದು ಪ್ರಶ್ನಿಸಿದರು.

‘ಕೇರಳದ ವಯನಾಡಿನಲ್ಲಿ ಭೀಕರ ಪ್ರವಾಹ ಪರಿಸ್ಥಿತಿ ತಲೆದೋರಿದಾಗ, ಕರ್ನಾಟಕ ಸರ್ಕಾರದವರು 100 ಮನೆ ಕಟ್ಟಿಸಿಕೊಟ್ಟರು. ಆದರೆ, ಕರ್ನಾಟಕದಲ್ಲಿ ಅತಿವೃಷ್ಟಿಯಿಂದ ಆಗಿರುವ ಹಾನಿಗೆ ಪರಿಹಾರ ಕೇಳಿದರೆ, ಕೇಂದ್ರ ಸರ್ಕಾರದತ್ತ ಮುಖ್ಯಮಂತ್ರಿ ಬೊಟ್ಟು ಮಾಡುತ್ತಾರೆ. ಕೇರಳದ ಅಕ್ರಮ ವಲಸಿಗರ ಬಗ್ಗೆ ಚಿಂತನೆ ಮಾಡುವ ಸಿದ್ದರಾಮಯ್ಯ, ಕನ್ನಡಿಗರ ಹೊಟ್ಟೆ ಹೊಡೆಯುವ ಕೆಲಸ ಮಾಡುತ್ತಿರುವುದು ದುರ್ದೈವದ ಸಂಗತಿ’ ಎಂದು ದೂರಿದರು.

‘ರಾಜ್ಯದಲ್ಲಿ ಡ್ರಗ್ಸ್‌ ಹಾವಳಿ ಮಿತಿಮೀರಿದೆ. ಮೈಸೂರಿನಲ್ಲಿ ಮಹಾರಾಷ್ಟ್ರದ ಪೊಲೀಸರು ಡ್ರಗ್ಸ್ ಫ್ಯಾಕ್ಟರಿ ಜಪ್ತಿ ಮಾಡಿದ್ದಾರೆ. ಬೆಂಗಳೂರಿನಲ್ಲೂ ಇಂಥದ್ದೇ ಪ್ರಕರಣ ನಡೆದಿದೆ. ಸರ್ಕಾರ ಇದನ್ನು ಮಟ್ಟ ಹಾಕುತ್ತಿಲ್ಲ. ಹಾಗಾದರೆ ಪೊಲೀಸ್‌ ಇಲಾಖೆ ಮತ್ತುಗೃಹ ಸಚಿವರು ಏನು ಮಾಡುತ್ತಿದ್ದಾರೆ’ ಎಂದು ಪ್ರಶ್ನಿಸಿದರು.

‘ಕರ್ನಾಟಕವನ್ನು ಉಡ್ತಾ ಪಂಜಾಬ್‌ ರೀತಿ ಮಾಡಲು ಹೊರಟಿದ್ದಾರೆ. ರಾಜ್ಯದಲ್ಲಿ ಡ್ರಗ್ಸ್ ಮಾಫಿಯಾಗೆ ಕಡಿವಾಣ ಹಾಕುವುದಕ್ಕೂ ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ, ಕೆ.ಸಿ.ವೇಣುಗೋಪಾಲ ಅನುಮತಿಗೆ ಕಾಯಬೇಕಿದೆ. ಸಿದ್ದರಾಮಯ್ಯ ಅವರಿಗೆ ಯಾವುದೇ ಸ್ವಾತಂತ್ರ್ಯ ಇಲ್ಲ. ಅವರೊಬ್ಬ ಅಸಮರ್ಥ ಮುಖ್ಯಮಂತ್ರಿ. ಇದು ಅಸಮರ್ಥ ಸರ್ಕಾರ’ ಎಂದು ವಾಗ್ದಾಳಿ ನಡೆಸಿದರು.

ಗೃಹಲಕ್ಷ್ಮಿ: ಅವ್ಯವಹಾರ ಹೊರಬರಬೇಕು

‘ಗೃಹಲಕ್ಷ್ಮಿ ಯೋಜನೆಯ ಫೆಬ್ರುವರಿ, ಮಾರ್ಚ್‌ ತಿಂಗಳ ಎರಡು ಕಂತಿನ ಹಣ ₹5 ಸಾವಿರ ಕೋಟಿ ಫಲಾನುಭವಿಗಳ ಖಾತೆಗೆ ಜಮೆ ಆಗಿಲ್ಲ. ಈ ಬಗ್ಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳಕರ ಸದನದಲ್ಲೂ ತಪ್ಪು ಮಾಹಿತಿ ನೀಡಿದ್ದಾರೆ. ಹಣ ಎಲ್ಲಿ ಎನ್ನುವ ಕುರಿತು ಆರ್ಥಿಕ ಸಚಿವರೂ ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಲಕ್ಷ್ಮಿ ಹೆಬ್ಬಾಳಕರ ಈವರೆಗೂ ಸ್ಪಷ್ಟನೆ ನೀಡಿಲ್ಲ. ಈ ಪ್ರಕರಣದಲ್ಲಿ ಆಗಿರುವ ಅವ್ಯವಹಾರ ಹೊರಬರಬೇಕು’ ಎಂದು ಒತ್ತಾಯಿಸಿದರು.

ಲಕ್ಷ್ಮಿ ಹೆಬ್ಬಾಳಕರ‘ಕುಡುಕರ ರಾಜ್ಯ’ವೆಂದು ಘೋಷಿಸಿ: ವ್ಯಂಗ್ಯ

‘ಗ್ಯಾರಂಟಿ ಯೋಜನೆಗೆ ಹಣ ಕ್ರೋಢೀಕರಿಸಲು ಆಗದೆ ಪರದಾಡುತ್ತಿರುವ ಕಾಂಗ್ರೆಸ್‌ ಸರ್ಕಾರ, ಅಬಕಾರಿ ಇಲಾಖೆಗೆ ನೀಡಿದ ಗುರಿಯನ್ನು ಶೇ 35ರಷ್ಟು ಹೆಚ್ಚಿಸಿದೆ. ಸಣ್ಣ ಅಂಗಡಿಗಳಲ್ಲೂ ಮದ್ಯ ಮಾರಲು ಅವಕಾಶ ಕೊಟ್ಟಿದೆ. ಈ ಮೂಲಕ ಕರ್ನಾಟಕವನ್ನು ‘ಕುಡುಕರ ರಾಜ್ಯ’ ಮಾಡಲು ಹೊರಟಿದೆ. ಕಾಂಗ್ರೆಸ್‌ನ ಆರನೇ ಗ್ಯಾರಂಟಿಯಾಗಿ ‘ಕುಡುಕರ ರಾಜ್ಯ’ವೆಂದು ಘೋಷಿಸಬೇಕು’ ಎಂದು ವ್ಯಂಗ್ಯವಾಡಿದರು.

‘ಕಾಂಗ್ರೆಸ್‌ ಸರ್ಕಾರ ಅಲ್ಪಸಂಖ್ಯಾತ ಓಲೈಕೆಗೆ ಮುಂದಾಗಿದೆ. ಬೆಂಗಳೂರಿನ ವಿಧಾನಸೌಧದಲ್ಲಿ ಪಾಕಿಸ್ತಾನ ಪರ ಜೈಕಾರ ಕೂಗಿದರೂ ಕ್ರಮವಾಗಿಲ್ಲ’ ಎಂದು ದೂರಿದರು.

ಜ.5ರಂದು ಕೋರ್‌ ಕಮಿಟಿ ಸಭೆ

‘ಜ.5ರಂದು ಬಿಜೆಪಿ ಕೋರ್‌ ಕಮಿಟಿ ಸಭೆ ಇದೆ. ಅಂದು ಸರ್ಕಾರದ ಜನವಿರೋಧಿ ನೀತಿಗಳ ಬಗ್ಗೆ ಚರ್ಚಿಸಿ, ಹೋರಾಟಕ್ಕೆ ರೂಪುರೇಷೆ ಸಿದ್ಧಪಡಿಸುತ್ತೇವೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.