ADVERTISEMENT

ಪತಿ ಕೊಲೆಗೆ ಸುಪಾರಿ: ಪತ್ನಿ ಸೇರಿ ಏಳು ಮಂದಿ ಬಂಧನ

​ಪ್ರಜಾವಾಣಿ ವಾರ್ತೆ
Published 3 ಮೇ 2025, 15:57 IST
Last Updated 3 ಮೇ 2025, 15:57 IST
<div class="paragraphs"><p>ಬಂಧನ </p></div>

ಬಂಧನ

   

ಬೆಂಗಳೂರು: ಸೋಲದೇವನಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಕ್ಯಾಬ್ ಚಾಲಕ ಚಂದ್ರಶೇಖರ್‌ (40) ಅಪಹರಣ ಮತ್ತು ಕೊಲೆಗೆ ಪತ್ನಿಯೇ ಸುಪಾರಿ ನೀಡಿರುವುದು ತನಿಖೆ ವೇಳೆ ಪತ್ತೆಯಾಗಿದ್ದು, ಪ‍್ರಕರಣ ಸಂಬಂಧ ಪತ್ನಿ ಸೇರಿ ಮೂವರನ್ನು ಬಂಧಿಸಲಾಗಿದೆ.

ಪ್ರಕರಣ ಸಂಬಂಧ ಚಂದ್ರು ಪತ್ನಿ ವನಜಾಕ್ಷಿ, ಪ್ರಿಯಕರ ನಾಗರಾಜ್, ಮೈಸೂರಿನ ಪುರುಷೋತ್ತಮ್, ಮಂಡ್ಯದ ನಂದನ್ ಹಾಗೂ ಮೂವರು ಅಪ್ರಾಪ್ತರನ್ನು ಪೊಲೀಸರು ಬಂಧಿಸಿದ್ದಾರೆ.

ADVERTISEMENT

‘ಪ್ರಿಯಕರ ನಾಗರಾಜ್ ಜತೆ ವನಜಾಕ್ಷಿ ಸಲುಗೆಯಿಂದ ಇದ್ದರು. ಈ ವಿಷಯ ಗೊತ್ತಾಗಿ ಚಂದ್ರಶೇಖರ್ ಬುದ್ದಿ ಹೇಳಿದ್ದರು. ಹಾಗಾಗಿ ಪತಿಯ ಹತ್ಯೆ ಮಾಡಲು ವನಜಾಕ್ಷಿ ತನ್ನ ಪ್ರಿಯಕರನಿಗೆ ₹ 1 ಲಕ್ಷ ಸುಪಾರಿ ನೀಡಿದ್ದಳು. ಏಪ‍್ರಿಲ್ 26ರಂದು ಚಂದ್ರಶೇಖರ್‌ನನ್ನು ಅಪಹರಿಸಿ ಕೊಲೆ ಮಾಡಲಾಗಿತ್ತು’ ಎಂದು ಪೊಲೀಸರು ತಿಳಿಸಿದ್ದಾರೆ.

ಕ್ಯಾಬ್ ಚಾಲಕನಾಗಿದ್ದ ಚಿಕ್ಕಬ್ಯಾಲಕೆರೆಯ ಚಂದ್ರು, 15 ವರ್ಷಗಳ ಹಿಂದೆ ವನಜಾಕ್ಷಿಯನ್ನು ಪ್ರೀತಿಸಿ ಮದುವೆಯಾಗಿದ್ದ. ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ನಾಗರಾಜ್‌ನಿಂದ ದೂರವಿರುವಂತೆ ಪತ್ನಿಗೆ ಬುದ್ದಿ ಹೇಳುತ್ತಿದ್ದ. ಈ ವಿಚಾರಕ್ಕೆ ಸಂಬಂಧಿಸಿದಂತೆ ದಂಪತಿ ನಡುವೆ ಜಗಳ ನಡೆಯುತ್ತಿತ್ತು. ಇತ್ತೀಚೆಗೆ ಪತಿ ಜತೆ ಜಗಳವಾಡಿಕೊಂಡು, ದೊಡ್ಡಬ್ಯಾಲಕೆರೆಯಲ್ಲಿ ಬಾಡಿಗೆ ಮನೆ ಮಾಡಿಕೊಂಡು ತನ್ನ ತಾಯಿ ಜತೆ ವನಜಾಕ್ಷಿ ವಾಸವಿದ್ದಳು ಎಂದು ಹೇಳಿದ್ದಾರೆ.

ಆರೋಪಿ ನಾಗರಾಜ್, ಪರಿಚಿತ ನಂದನ್ ಎಂಬಾತನಿಗೆ ₹ 1 ಲಕ್ಷಕ್ಕೆ ಸುಪಾರಿ ನೀಡಿ, ₹ 30 ಸಾವಿರ ಮುಂಗಡ ಪಾವತಿಸಿದ್ದ. ನಂದನ್ ಹಾಗೂ ಆತನ ಸಹಚರರು ಚಂದ್ರಶೇಖರ್‌ನನ್ನು ನಗರದಲ್ಲಿ ಅಪಹರಿಸಿ ಕನಕಪುರ ಸಮೀಪದ ಸಾತನೂರು ಬಳಿ ಕೊಲೆ ಮಾಡಿ ಮೃತದೇಹ ಎಸೆದು ಪರಾರಿಯಾಗಿದ್ದರು. ಪೊಲೀಸರ ವಿಚಾರಣೆಯಲ್ಲಿ ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ ಎಂದು ಪೊಲೀಸ್ ಮೂಲಗಳು ಹೇಳಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.