ಬೆಂಗಳೂರು: ಸಿಬ್ಬಂದಿ ಕೊರತೆ, ರಸ್ತೆ ವಿಸ್ತರಣೆ ಸೇರಿದಂತೆ ನಾನಾ ಕಾರಣಗಳಿಂದ ಮುಚ್ಚಿರುವ ಮಳಿಗೆಗಳನ್ನು ಪುನರಾಂಭಿಸಲು ವಿಶೇಷ ಅಭಿಯಾನ, ಖಾಸಗಿಯವರಿಗೆ ಫ್ರ್ಯಾಂಚೈಸಿ ನೀಡುವುದು ಸೇರಿದಂತೆ ಹಲವು ಕ್ರಮಗಳ ಮೂಲಕ ಹಾಪ್‌ಕಾಮ್ಸ್ (ತೋಟದ ಬೆಳೆಗಾರರ ಸಹಕಾರಿ ಮಾರಾಟ ಮತ್ತು ಸಂಸ್ಕರಣ ಸಂಘ) ಅನ್ನು ಲಾಭದ ಹಳಿಗೆ ತರುವ ಪ್ರಯತ್ನ ಆರಂಭವಾಗಿದೆ.
‘ಹಾಪ್‌ಕಾಮ್ಸ್: 142 ಮಳಿಗೆ ಬಂದ್’ ಶೀರ್ಷಿಕೆಯಡಿ ‘ಪ್ರಜಾವಾಣಿ’ಯ ಜನವರಿ 27ರ ಸಂಚಿಕೆಯಲ್ಲಿ ವಿಶೇಷ ವರದಿ ಪ್ರಕಟಿಸಿತ್ತು. ಈ ಬೆನ್ನಲ್ಲೇ, ಸಂಸ್ಥೆಯ ಬಲವರ್ಧನೆಗೆ ಆಡಳಿತ ಮಂಡಳಿ ಮುಂದಾಗಿದ್ದು, ಹಲವು ನಿರ್ಧಾರಗಳನ್ನು ತೆಗೆದುಕೊಂಡಿದೆ.
ಮುಕ್ತ ಮಾರುಕಟ್ಟೆಯಿಂದ ಎದುರಾಗಿರುವ ಸ್ಪರ್ಧೆ, ಖಾಸಗಿ ಕಂಪನಿಗಳ ಪೈಪೋಟಿಯ ಪರಿಣಾಮ, ನಾಲ್ಕು ಜಿಲ್ಲೆಗಳ ವ್ಯಾಪ್ತಿ ಒಳಗೊಂಡ ಬೆಂಗಳೂರು ಹಾಪ್‌ಕಾಮ್ಸ್ ಸೇರಿದಂತೆ ಜಿಲ್ಲಾ ಹಾಪ್‌ಕಾಮ್ಸ್‌ಗಳು ನಷ್ಟದಲ್ಲಿವೆ.
ನಷ್ಟದಲ್ಲಿರುವ ಹಾಪ್‌ಕಾಮ್ಸ್ ಮಳಿಗೆಗಳನ್ನು ಖಾಸಗಿಯವರಿಗೆ ಫ್ರಾಂಚೈಸಿ ನೀಡಲು ನಿರ್ಧರಿಸಲಾಗಿದೆ. ಸಂಸ್ಥೆ, ವ್ಯಕ್ತಿಗಳು ಫ್ರಾಂಚೈಸಿ ಪಡೆಯಬಹುದು. ಇದಕ್ಕಾಗಿ ₹1.50 ಲಕ್ಷ ಠೇವಣಿ ಇಡಬೇಕು. ಮೂರು ತಿಂಗಳವರೆಗೆ ₹ 50 ಸಾವಿರ ಮೊತ್ತದ ತರಕಾರಿ, ಹಣ್ಣುಗಳನ್ನು ಖರೀದಿಸುವುದು ಕಡ್ಡಾಯ. ಲಾಭಾಂಶದಲ್ಲಿ ಹಂಚಿಕೆ ಪದ್ಧತಿ ತರಲು ಹಾಪ್‌ಕಾಮ್ಸ್ ಮುಂದಾಗಿದೆ.
‘ಮುಚ್ಚಿರುವ ಮಳಿಗೆಗಳನ್ನು ತೆರೆಯೋಣ ಬಾರಾ’ ಎಂಬ ವಿಶೇಷ ಅಭಿಯಾನ ಆರಂಭಿಸಿ, ಮಳಿಗೆಗಳನ್ನು ತೆರೆಯುವ ಹಾಲಿ ಸಿಬ್ಬಂದಿಗೆ ವೇತನದ ಜೊತೆಗೆ ಶೇಕಡ 6ರಷ್ಟು ರಿಯಾಯಿತಿ ನೀಡಲಾಗುವುದು. ಮಂಜೂರಾದ 965 ಸಿಬ್ಬಂದಿ ಪೈಕಿ ನಿವೃತ್ತಿ, ನಿಧನ ಕಾರಣಗಳಿಂದ 389 ನೌಕರರು ಮಾತ್ರ ಕಾರ್ಯನಿರ್ವಹಿಸುತ್ತಿದ್ದಾರೆ. ಸಿಬ್ಬಂದಿ ಕೊರತೆ ನೀಗಿಸಲು 50 ಮಂದಿಯನ್ನು ಹೊರ ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಳ್ಳಲಾಗುತ್ತಿದೆ’ ಎಂದು ಹಾಪ್‌ಕಾಮ್ಸ್ ವ್ಯವಸ್ಥಾಪಕ ನಿರ್ದೇಶಕ ಮಿರ್ಜಿ ಉಮೇಶ್ ಶಂಕರ್ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.
‘ಹಾಪ್‌ಕಾಮ್ಸ್‌ಗೆ ₹ 15 ಕೋಟಿ ದುಡಿಯುವ ಬಂಡವಾಳವನ್ನು ಬಡ್ಡಿ ಸಹಿತ ಸಾಲವಾಗಿ ನೀಡುವ ಪ್ರಸ್ತಾವಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆಡಳಿತಾತ್ಮಕ ಮಂಜೂರಾತಿ ನೀಡಿದ್ದಾರೆ. ಬೆಂಗಳೂರು ಅಪಾರ್ಟ್‌ಮೆಂಟ್ ಫೆಡರೇಷನ್ (ಬಿಎಎಫ್) ಸಹಯೋಗದಲ್ಲಿ ಮಹಾನಗರ ಪಾಲಿಕೆಯ ವಿವಿಧ ಅಪಾರ್ಟ್‌ಮೆಂಟ್‌ಗಳಲ್ಲಿ ಸಂಚಾರಿ ವ್ಯಾಪಾರ ವ್ಯವಸ್ಥೆ ಹಾಗೂ ಮಳಿಗೆಗಳಲ್ಲಿ ಸಿರಿಧಾನ್ಯಗಳನ್ನು ಮಾರಾಟ ಮಾಡಲು ನಿರ್ಧರಿಸಲಾಗಿದೆ’ ಎಂದು ಹೇಳಿದರು.
‘ಮುಂದಿನ ದಿನಗಳಲ್ಲಿ ಬೃಹತ್ ಕಾರ್ಖಾನೆಗಳು, ಸಂಘ ಸಂಸ್ಥೆಗಳಿಗೆ ಹಣ್ಣು, ತರಕಾರಿಗಳನ್ನು ಸಗಟು ದರದಲ್ಲಿ ಮಾರಾಟ ಮಾಡಲಾಗುವುದು. ಮುಜರಾಯಿ ಇಲಾಖೆಯ ದೇವಾಲಯಗಳಿಗೆ ಬೇಕಾದ ಹಣ್ಣು, ತರಕಾರಿಗಳನ್ನು ಹಾಪ್‌ಕಾಮ್ಸ್‌ನಿಂದ ಖರೀದಿಸಲು ಸಚಿವರು ಸೂಚನೆ ನೀಡಿದ್ದಾರೆ. ಕರ್ನಾಟಕ ಆಯಿಲ್ ಫೆಡರೇಷನ್‌ನ ತೊಗರಿ ಬೇಳೆ, ಕಡಲೆ ಬೇಳೆ, ಉದ್ದಿನ ಬೇಳೆ, ಅಕ್ಕಿ ಸೇರಿದಂತೆ ವಿವಿಧ ಉತ್ಪನ್ನಗಳನ್ನು ಹಾಪ್‌ಕಾಮ್ಸ್‌ಗಳಲ್ಲಿ ಮಾರಾಟ ಮಾಡಲಾಗುವುದು. ಇದರಿಂದ ಸಂಸ್ಥೆಗೂ ಲಾಭವಾಗಲಿದೆ’ ಎಂದು ಹಾಪ್‌ಕಾಮ್ಸ್ ಅಧ್ಯಕ್ಷ ಎನ್.ಗೋಪಾಲಕೃಷ್ಣ ತಿಳಿಸಿದರು.
ಪ್ರತಿ ತಿಂಗಳು ₹2 ಕೋಟಿ ದಾಸ್ತಾನು ಉಳಿಕೆ
‘ಸರ್ಕಾರಿ ಆಸ್ಪತ್ರೆ ಹಾಸ್ಟೆಲ್ ಕೈಗಾರಿಕೆಗಳಿಗೆ ನಿತ್ಯ ಹಣ್ಣು ತರಕಾರಿಗಳನ್ನು ಸಾಲದ ರೂಪದಲ್ಲಿ ಸರಬರಾಜು ಮಾಡಲಾಗುತ್ತಿದೆ. 2–3 ತಿಂಗಳ ಬಳಿಕ ಅವರು ಹಣ ಪಾವತಿ ಮಾಡುತ್ತಿದ್ದಾರೆ. ಅಲ್ಲದೇ ಮಳಿಗೆಗಳು ಕೇಂದ್ರೀಯ ಉಗ್ರಾಣಗಳಲ್ಲಿ ಪ್ರತಿ ತಿಂಗಳು ₹ 2 ಕೋಟಿ ಮೌಲ್ಯದ ದಾಸ್ತಾನು ಉಳಿಕೆ ಆಗುತ್ತದೆ. ಇದರಿಂದ ಸಂಸ್ಥೆಗೆ ದುಡಿಯುವ ಬಂಡವಾಳ ಕೊರತೆಯಾಗಿ ಹಣ್ಣು ತರಕಾರಿ ಸರಬರಾಜು ಮಾಡಿದ ರೈತರಿಗೆ ನಿಗದಿತ ಸಮಯಕ್ಕೆ ಹಣ ಪಾವತಿ ಸಾಧ್ಯವಾಗಿಲ್ಲ’ ಎಂದು ಹಾಪ್‌ಕಾಮ್ಸ್ ಅಧ್ಯಕ್ಷ ಗೋಪಾಲಕೃಷ್ಣ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.