ಬೆಂಗಳೂರಿನ ಗಾಂಧಿ ಭವನದಲ್ಲಿ ಜಾಗೃತ ಕರ್ನಾಟಕ ಆಯೋಜಿಸಿದ್ದ ‘ಲೋಕಸಭಾ ಕ್ಷೇತ್ರ ಮರು ವಿಂಗಡಣೆ: 25 ವರ್ಷ ಸ್ಥಗಿತಗೊಳಿಸಬೇಕೋ ಅಥವಾ ಶಾಶ್ವತವಾಗಿ ತಡೆಯಬೇಕೋ’ ಶೀರ್ಷಿಕೆಯಡಿ ದುಂಡು ಮೇಜಿನ ಸಭೆಯಲ್ಲಿ ಸುನಿಲ್ ಮಾತನಾಡಿದರು.
ಪ್ರಜಾವಾಣಿ ಚಿತ್ರ
ಬೆಂಗಳೂರು: ಜನಸಂಖ್ಯೆ ಆಧಾರದಲ್ಲಿ ಲೋಕಸಭಾ ಕ್ಷೇತ್ರಗಳ ಮರುವಿಂಗಡಣೆ ಮಾಡುವ ನಿರ್ಧಾರವನ್ನು ಕೇಂದ್ರ ಸರ್ಕಾರ ಕೈಬಿಡಬೇಕು. ಮುಂದೆಂದೂ ಮರುವಿಂಗಡಣೆ ಮಾಡದಂತೆ ನಿಯಮ ರೂಪಿಸಬೇಕು.
–ಜಾಗೃತ ಕರ್ನಾಟಕ ಹಮ್ಮಿಕೊಂಡಿದ್ದ ದುಂಡುಮೇಜಿನ ಸಭೆಯಲ್ಲಿ ಮೂಡಿದ ಒಕ್ಕೊರಲ ಆಗ್ರಹ ಇದು.
543 ಲೋಕಸಭಾ ಸದಸ್ಯರಿದ್ದಾರೆ. ಸಂವಿಧಾನಕ್ಕೆ ಬದ್ಧವಾಗಿ ನೀತಿ ನಿರೂಪಣೆ ಮಾಡುವ ಕೆಲಸ ಅವರದ್ದು. ಈಗಿರುವ ಸಂಖ್ಯೆಯನ್ನು ಹೆಚ್ಚಳ ಮಾಡಿದರೂ ಅವರ ಕೆಲಸ ಅಷ್ಟೇ ಇರುತ್ತದೆ. ದೇಶಕ್ಕೆ ಯಾವುದೇ ಪ್ರಯೋಜನವಿಲ್ಲದೇ 300ಕ್ಕೂ ಅಧಿಕ ಸಂಸದರಿಗೆ ಅನಗತ್ಯವಾಗಿ ವೇತನ, ಸಾರಿಗೆ ವೆಚ್ಚಗಳನ್ನು ನೀಡಬೇಕಾಗುತ್ತದೆ ಎಂದು ಸಭೆಯಲ್ಲಿ ಅಭಿಪ್ರಾಯ ಮೂಡಿತು.
ಇದು ಚುನಾವಣಾ ಗೆಲುವಿಗಾಗಿ ಬಿಜೆಪಿ ರೂಪಿಸಿದ್ದ ಗುಪ್ತ ಕಾರ್ಯಸೂಚಿ. ಕೋಮು ಧೃವೀಕರಣಗೊಳಿಸುವ ಮೂಲಕ ಚುನಾವಣೆಯನ್ನು ಗೆಲ್ಲುವ ಗುಪ್ತ ಕಾರ್ಯಸೂಚಿಯನ್ನು ಈಗ ಕ್ಷೇತ್ರ ಮರುವಿಂಗಡಣೆಯ ಮೂಲಕ ದೇಶದಲ್ಲಿ ಅನುಷ್ಠಾನಗೊಳಿಸಲು ಹೊರಟಿದೆ. ಕ್ಷೇತ್ರ ಮರುವಿಂಗಡಣೆ ನಡೆದರೆ ದಕ್ಷಿಣ ಭಾರತದ ರಾಜ್ಯಗಳ ಲೋಕಸಭಾ ಕ್ಷೇತ್ರಗಳ ಪ್ರಮಾಣ ಶೇಕಡ 24ರಿಂದ ಶೇ 19ಕ್ಕೆ ಇಳಿಯಲಿದೆ. ಎಂದು ಸಭೆಯಲ್ಲಿ ಆತಂಕ ವ್ಯಕ್ತವಾಯಿತು.
ಸಭೆಯಲ್ಲಿ ಜಾಗೃತ ಕರ್ನಾಟಕದ ರಾಜಶೇಖರ್ ಅಕ್ಕಿ, ಎಚ್.ವಿ. ವಾಸು, ಮುತ್ತುರಾಜ್, ಅರವಿಂದ, ಬಸವರಾಜ್, ನಾಗೇಶ್ ಅರಳಕುಪ್ಪೆ, ಡಾ. ಸುನೀಲ್, ನಗರಗೆರೆ ರಮೇಶ್, ಆಸ್ಮಾ, ನೀನಾ, ಬಸವರಾಜ್ ಕೌತಾಳ್, ಆದರ್ಶ, ಶರತ್. ಮುರಳಿ, ಮುರಳೀಧರ್, ಡಿ. ಉಮಾಪತಿ ಸಹಿತ ಹಲವರು ಅಭಿಪ್ರಾಯ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.