ADVERTISEMENT

ಬೆಂಗಳೂರು | ಗೋದಾಮು ಮೇಲೆ ದಾಳಿ: ₹40 ಲಕ್ಷ ಮೌಲ್ಯದ ಪಟಾಕಿ ಜಪ್ತಿ

​ಪ್ರಜಾವಾಣಿ ವಾರ್ತೆ
Published 3 ನವೆಂಬರ್ 2023, 13:59 IST
Last Updated 3 ನವೆಂಬರ್ 2023, 13:59 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಬೆಂಗಳೂರು: ಅಕ್ರಮವಾಗಿ ಪಟಾಕಿಗಳನ್ನು ದಾಸ್ತಾನು ಮಾಡಿದ್ದ ಎರಡು ಗೋದಾಮುಗಳ ಮೇಲೆ ಸಿಸಿಬಿ ಪೊಲೀಸರು ದಾಳಿ ಮಾಡಿದ್ದು, ₹ 40 ಲಕ್ಷ ಮೌಲ್ಯದ ಪಟಾಕಿ ಜಪ್ತಿ ಮಾಡಿದ್ದಾರೆ.

‘ಜೀವನ್‌ಭಿಮಾನಗರ ಠಾಣೆ ವ್ಯಾಪ್ತಿಯ ನ್ಯೂ ತಿಪ್ಪಸಂದ್ರ ಮುಖ್ಯರಸ್ತೆ ಹಾಗೂ ಜ್ಞಾನಭಾರತಿ ಠಾಣೆ ವ್ಯಾಪ್ತಿಯ ಸ್ಥಳವೊಂದರಲ್ಲಿದ್ದ ಗೋದಾಮುಗಳ ಮೇಲೆ ಪ್ರತ್ಯೇಕವಾಗಿ ದಾಳಿ ಮಾಡಲಾಗಿದೆ’ ಎಂದು ಸಿಸಿಬಿ ಪೊಲೀಸರು ಹೇಳಿದರು.

ADVERTISEMENT

‘ಪಟಾಕಿ ಮಾರಾಟ ಹಾಗೂ ದಾಸ್ತಾನು ಮಾಡಲು ಸಂಬಂಧಪಟ್ಟ ಪ್ರಾಧಿಕಾರಗಳ ಅನುಮತಿ ಕಡ್ಡಾಯ. ಆದರೆ, ದೀಪಾವಳಿ ಹಬ್ಬಕ್ಕಾಗಿ ಕೆಲವರು ಅಕ್ರಮವಾಗಿ ಪಟಾಕಿ ದಾಸ್ತಾನು ಮಾಡಿದ್ದರು. ಈ ಬಗ್ಗೆ ಮಾಹಿತಿ ಬರುತ್ತಿದ್ದಂತೆ ಕಾರ್ಯಾಚರಣೆ ನಡೆಸಲಾಯಿತು’ ಎಂದು ತಿಳಿಸಿದರು.

‘ನ್ಯೂ ತಿಪ್ಪಸಂದ್ರ ಮುಖ್ಯ ರಸ್ತೆಯಲ್ಲಿ ಹಲವು ದಿನಗಳಿಂದ ಪಟಾಕಿ ಸಂಗ್ರಹಿಸಲಾಗಿತ್ತು. ಅದೇ ಗೋದಾಮಿನಲ್ಲಿ ₹25 ಲಕ್ಷ ಮೌಲ್ಯದ ಪಟಾಕಿ ಜಪ್ತಿ ಮಾಡಲಾಗಿದೆ. ಜ್ಞಾನಭಾರತಿ ಠಾಣೆ ವ್ಯಾಪ್ತಿಯ ಗೋದಾಮಿನಲ್ಲಿ ₹15 ಲಕ್ಷ ಮೌಲ್ಯದ ಪಟಾಕಿ ಸಿಕ್ಕಿದೆ’ ಎಂದರು.

‘ಎರಡೂ ಗೋದಾಮು ಮಾಲೀಕರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. ಆರೋಪಿಗಳಿಗೆ ನೋಟಿಸ್ ನೀಡಿ ವಿಚಾರಣೆ ನಡೆಸಲಾಗುವುದು’ ಎಂದು ಪೊಲೀಸರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.