ADVERTISEMENT

ತ್ಯಾಜ್ಯ ವಿಲೇವಾರಿಗೆ ಶುಲ್ಕ: ಅನುಮತಿ ಕೋರಿ BBMP ಪ್ರಸ್ತಾವ

ನವೀನ್‌ ಮಿನೇಜಸ್‌
Published 13 ನವೆಂಬರ್ 2023, 20:03 IST
Last Updated 13 ನವೆಂಬರ್ 2023, 20:03 IST
<div class="paragraphs"><p>BBMP</p></div>

BBMP

   

ಬೆಂಗಳೂರು: ತ್ಯಾಜ್ಯ ವಿಲೇವಾರಿ ದುಬಾರಿ ಆಗುತ್ತಿದ್ದು ಮನೆ ಹಾಗೂ ವಾಣಿಜ್ಯ ಕಟ್ಟಡಗಳಿಂದ ತ್ಯಾಜ್ಯ ಸಂಗ್ರಹಕ್ಕೆ ಮಾಸಿಕ ಶುಲ್ಕ ವಿಧಿಸಲು ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮುಂದಾಗಿದೆ.

ಮನೆ ಹಾಗೂ ವಾಣಿಜ್ಯ ಕಟ್ಟಡಗಳಲ್ಲಿ ವಿದ್ಯುತ್‌ ಬಳಕೆ ಆಧರಿಸಿ, ಶುಲ್ಕ ವಿಧಿಸಲು ಚಿಂತನೆ ನಡೆಸಿದೆ. ಕಳೆದ ವಾರ ಶುಲ್ಕ ರಚನೆ ಅಂತಿಮಗೊಳಿಸಿ ಅನುಮತಿಗಾಗಿ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ADVERTISEMENT

ಸರ್ಕಾರವು ಈ ಪ್ರಸ್ತಾವಕ್ಕೆ ಒಪ್ಪಿಗೆ ಸೂಚಿಸಿದರೆ ಕಸ ವಿಲೇವಾರಿಗೆ ನಾಗರಿಕರು ಮಾಸಿಕ ಕನಿಷ್ಠ ₹30 ಪಾವತಿಸಬೇಕಾಗಬಹುದು. ಈ ಪ್ರಸ್ತಾವಿತ ಯೋಜನೆ ವ್ಯಾಪ್ತಿಗೆ 46 ಲಕ್ಷ ಮನೆಗಳು ಬರಲಿವೆ. ಅಂದಾಜು 6.32 ಲಕ್ಷ ವಾಣಿಜ್ಯ ಕಟ್ಟಡಗಳು ಶುಲ್ಕದ ವ್ಯಾಪ್ತಿಗೆ ಬರಲಿದ್ದು, ತಿಂಗಳಿಗೆ ₹ 72.39 ಕೋಟಿ ಆದಾಯದ ನಿರೀಕ್ಷೆಯಲ್ಲಿ ಬಿಬಿಎಂಪಿ ಇದೆ.

ಆಸ್ತಿಗೆ ತೆರಿಗೆ ಆಧರಿಸಿ ಶುಲ್ಕ ಸಂಗ್ರಹಿಸುವ ಬದಲಿಗೆ, ವಿದ್ಯುತ್‌ ಬಳಕೆ ಪ್ರಮಾಣ ಆಧರಿಸಿಯೇ ಶುಲ್ಕ ನಿಗದಿಗೆ ಬಿಬಿಎಂಪಿ ಮುಂದಾಗಿದೆ. ಬೆಸ್ಕಾಂ ಸಿಬ್ಬಂದಿ ನೆರವು ಪಡೆಯುತ್ತಿರುವುದರಿಂದ ಬೆಸ್ಕಾಂಗೆ ನಿರ್ದಿಷ್ಟ ಶುಲ್ಕ ಪಾವತಿಸಲಾಗುವುದು ಎಂದು ಮೂಲಗಳು ಹೇಳಿವೆ.

ದೀರ್ಘಕಾಲದಿಂದ ಬಾಕಿ ಉಳಿದಿದ್ದ ಪ್ರಸ್ತಾವ ಇದಾಗಿದೆ. ಶುಲ್ಕ ನಿಗದಿ ಸಂಬಂಧ ಕಳೆದ ವಾರ ಬಿಬಿಎಂಪಿಯ ಘನತ್ಯಾಜ್ಯ ವಿಲೇವಾರಿ ಘಟಕದ ಅಧಿಕಾರಿಗಳ ನೇತೃತ್ವದಲ್ಲಿ ಸಭೆ ನಡೆದಿತ್ತು. ಬೆಸ್ಕಾಂ ಮೀಟರ್‌ ರೀಡರ್‌ಗಳನ್ನು ಬಳಸಿಕೊಂಡು ಶುಲ್ಕ ಸಂಗ್ರಹಿಸಲಾಗುವುದು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ತ್ಯಾಜ್ಯ ಉತ್ಪಾದನೆ ಆಧರಿಸಿ ಪ್ರತಿ ಮನೆಗೆ ತಿಂಗಳಿಗೆ ₹30 ರಿಂದ ₹500ರವರೆಗೆ ಹಾಗೂ ವಾಣಿಜ್ಯ ಕಟ್ಟಡಗಳಿಗೆ ₹75 ರಿಂದ ₹1,200ರ ಶುಲ್ಕ ನಿಗದಿಪಡಿಸುವುದಾಗಿ ಪ್ರಸ್ತಾವನೆಯಲ್ಲಿ ಉಲ್ಲೇಖಿಸಲಾಗಿದೆ.

ದೆಹಲಿ, ಚೆನ್ನೈ, ಮುಂಬೈ, ಪುಣೆ, ತಿರುಪತಿಯಲ್ಲಿ ಸ್ಥಳೀಯ ಸಂಸ್ಥೆಗಳು ಈಗಾಗಲೇ ಮನೆ ಹಾಗೂ ವಾಣಿಜ್ಯ ಕಟ್ಟಡಗಳಿಂದ ತ್ಯಾಜ್ಯ ಸಂಗ್ರಹಕ್ಕೆ ಶುಲ್ಕ ಸಂಗ್ರಹಿಸುತ್ತಿವೆ. ಅದನ್ನು ಪ್ರಸ್ತಾವನೆಯಲ್ಲಿ ವಿವರಿಸಲಾಗಿದೆ.

‘ನಗರದಲ್ಲಿ ಘನ ತ್ಯಾಜ್ಯ ನಿರ್ವಹಣೆಯಲ್ಲಿ ಸಾಕಷ್ಟು ಸಮಸ್ಯೆಗಳಿವೆ. ಮೂಲದಲ್ಲಿಯೇ ಹಸಿ ಹಾಗೂ ಒಣ ಕಸವನ್ನು ಬೇರ್ಪಡಿಸುವ ಕೆಲಸ ಆಗಬೇಕಿದೆ. ಎಷ್ಟು ಬಾರಿ ಮನವಿ ಮಾಡಿದ್ದರೂ ಕಸ ಬೇರ್ಪಡಿಸಿ ಹಾಕುತ್ತಿಲ್ಲ. ಕಸ ಸಂಗ್ರಹಣೆಯಲ್ಲಿ ಪ್ರತಿ ಪ್ರದೇಶಕ್ಕೂ ವಿಭಿನ್ನ ಸಮಸ್ಯೆಗಳಿವೆ’ ಎಂದು ಘನತ್ಯಾಜ್ಯ ನಿರ್ವಹಣಾ ತಜ್ಞರಾದ ಪಿಂಕಿ ಚಂದ್ರನ್ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.