ಬೆಂಗಳೂರು: ಚಿನ್ನದ ವ್ಯಾಪಾರಿಗೆ ವಂಚನೆ ಹಾಗೂ ಹಣ ಅಕ್ರಮ ವರ್ಗಾವಣೆ ಕುರಿತು ಐಶ್ವರ್ಯಾ ಗೌಡ ವಿರುದ್ಧ ದಾಖಲಾಗಿದ್ದ ವಂಚನೆ ಪ್ರಕರಣಗಳ ಸಮಗ್ರ ತನಿಖೆ ನಡೆಸುವಂತೆ ಸಿಐಡಿಗೆ ಪೊಲೀಸ್ ಇಲಾಖೆಯು ಆದೇಶಿಸಿದೆ.
ಚಂದ್ರಾಲೇಔಟ್, ಆರ್.ಆರ್. ನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ನಾಲ್ಕು ಪ್ರಕರಣಗಳು ಹಾಗೂ ಮಂಡ್ಯದಲ್ಲಿ ದಾಖಲಾಗಿದ್ದ ಎರಡು ಪ್ರಕರಣ ಸೇರಿದಂತೆ ಒಟ್ಟು ಆರು ಪ್ರಕರಣಗಳ ತನಿಖೆ ನಡೆಸುವಂತೆ ಆದೇಶಿಸಲಾಗಿದೆ.
ರಾಜಕೀಯ ನಾಯಕರ ಪರಿಚಯವಿದೆ ಎಂದು ಹೇಳಿ ಸಾಲದ ರೂಪದಲ್ಲಿ ₹9.82 ಕೋಟಿ ಮೌಲ್ಯದ ಚಿನ್ನ ಪಡೆದು ವಂಚಿಸಿದ ಆರೋಪದಡಿ ಕಳೆದ ವರ್ಷ ವಾರಾಹಿ ವರ್ಲ್ಡ್ ಆಫ್ ಗೋಲ್ಡ್ ಚಿನ್ನದಂಗಡಿಯ ಮಾಲೀಕರಾದ ವನಿತಾ ಎಸ್. ಐತಾಳ್ ಅವರು ನೀಡಿದ್ದ ದೂರಿನನ್ವಯ ಐಶ್ವರ್ಯಾ ವಿರುದ್ಧ ಪ್ರಕರಣ ದಾಖಲಾಗಿತ್ತು. ಇದೇ ಪ್ರಕರಣದಲ್ಲಿ ಚಿತ್ರನಟ ಧರ್ಮೇಂದ್ರ ವಿರುದ್ದವೂ ಎಫ್ಐಆರ್ ದಾಖಲಾಗಿತ್ತು.
ಆರ್.ಆರ್. ನಗರ ಸೇರಿದಂತೆ ಮಂಡ್ಯ ಪೊಲೀಸ್ ಠಾಣೆಯಲ್ಲಿ ಈಕೆಯ ವಿರುದ್ಧ ಪ್ರಕರಣಗಳು ದಾಖಲಾಗಿದ್ದವು.
ಬಹುಕೋಟಿ ಹಣ ವರ್ಗಾವಣೆ ಆರೋಪ ಸಂಬಂಧ ಐಶ್ವರ್ಯಾ ವಿರುದ್ಧ ಜಾರಿ ನಿರ್ದೇಶನಾಲಯ (ಇ.ಡಿ) ಸ್ವಯಂಪ್ರೇರಿತವಾಗಿ ಪಿಎಂಎಲ್ಎ ಕಾಯ್ದೆಯಡಿ ಪ್ರಕರಣ ದಾಖಲಿಸಿ, ಏಪ್ರಿಲ್ 25ರಂದು ಬಂಧಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.