ADVERTISEMENT

ಕಾರಲ್ಲಿ ಬಂದು ಚೂರಿ ಇರಿದ ಸರಗಳ್ಳರು!

​ಪ್ರಜಾವಾಣಿ ವಾರ್ತೆ
Published 13 ಮೇ 2019, 19:48 IST
Last Updated 13 ಮೇ 2019, 19:48 IST

ಬೆಂಗಳೂರು: ಇಷ್ಟು ದಿನ ಬೈಕ್‌ಗಳಲ್ಲಿ ಬಂದು ಸರ ದೋಚುತ್ತಿದ್ದ ಕಿಡಿಗೇಡಿಗಳು, ಈಗ ಕಾರಿನಲ್ಲಿ ಬಂದು ದುಷ್ಕೃತ್ಯ ಎಸಗುತ್ತಿದ್ದಾರೆ!

ಬನಶಂಕರಿ 2ನೇ ಹಂತದ ಟೀಚರ್ಸ್ ಕಾಲೊನಿಯಲ್ಲಿ ಮೂವರು ಕಿಡಿಗೇಡಿಗಳು, ದಂಪತಿ ಮೇಲೆ ಹಲ್ಲೆ ನಡೆಸಿ 40 ಗ್ರಾಂನ ಚಿನ್ನದ ಸರದೊಂದಿಗೆ ಕಾರಿನಲ್ಲಿ ಪರಾರಿಯಾಗಿದ್ದಾರೆ. ಈ ಸಂಬಂಧ ಮಾಲತಿ (47) ಎಂಬುವರು ಶನಿವಾರ ಬನಶಂಕರಿ ಠಾಣೆಗೆ ದೂರು ಕೊಟ್ಟಿದ್ದಾರೆ.

‘ಬೆಳಿಗ್ಗೆ 5 ಗಂಟೆ ಸುಮಾರಿಗೆ ನಾನು ಅಂಗಳಕ್ಕೆ ನೀರು ಹಾಕುತ್ತಿದ್ದೆ. ಆಗ ಮನೆಯಿಂದ ಸ್ವಲ್ಪ ದೂರದ ಕ್ರಾಸ್‌ನಲ್ಲಿ ಕಾರು ನಿಂತಿತ್ತು. ಅದರಲ್ಲಿ ಮೂವರು ಇದ್ದರು. ಸ್ವಲ್ಪ ಸಮಯದ ಬಳಿಕ ಕಾರಿನಿಂದ ಇಳಿದು ನನ್ನ ಬಳಿ ಬಂದ ಇಬ್ಬರು, ಚಾಕುವಿನಿಂದ ಬೆದರಿಸಿ ಮಾಂಗಲ್ಯ ಸರ ಕಿತ್ತುಕೊಳ್ಳಲು ಯತ್ನಿಸಿದರು. ನಾನು ಕಿರುಚಿಕೊಂಡಾಗ ಪತಿ ಅನಿಲ್ ಕುಮಾರ್ ರಕ್ಷಣೆಗೆ ಧಾವಿಸಿದರು’ ಎಂದು ಮಾಲತಿ ವಿವರಿಸಿದ್ದಾರೆ.

ADVERTISEMENT

‘ನನ್ನ ಬಲಗೈ ತಿರುವಿ ಸರ ಕಿತ್ತುಕೊಂಡು ಹೊರಟ ಅವರು, ಹಿಡಿಯಲು ಬೆನ್ನಟ್ಟಿದ ಪತಿಯ ಮುಖಕ್ಕೂ ಚಾಕುವಿನಿಂದ ಹಲ್ಲೆ ನಡೆಸಿದರು. ರಸ್ತೆಯಲ್ಲಿ ಕುಸಿದು ಬಿದ್ದಿದ್ದ ನಮ್ಮನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದರು. ಕಳವಾದ ಮಾಂಗಲ್ಯ ಸರದ ಮೌಲ್ಯ ₹ 40 ಲಕ್ಷ’ ಎಂದು ಅವರು ಹೇಳಿದ್ದಾರೆ. ಪೊಲೀಸರು ಸಿ.ಸಿ ಟಿ.ವಿ ಕ್ಯಾಮೆರಾದ ದೃಶ್ಯಾವಳಿ ಆಧರಿಸಿ ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.