ADVERTISEMENT

ಬೆಂಗಳೂರು | ಅಧಿಕ ಬಡ್ಡಿ ಆಮಿಷವೊಡ್ಡಿ ಕೋಟ್ಯಂತರ ರೂಪಾಯಿ ವಂಚನೆ: ದಂಪತಿ ಪರಾರಿ

​ಪ್ರಜಾವಾಣಿ ವಾರ್ತೆ
Published 6 ಜುಲೈ 2025, 15:45 IST
Last Updated 6 ಜುಲೈ 2025, 15:45 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಬೆಂಗಳೂರು: ರಾಮಮೂರ್ತಿ ನಗರದಲ್ಲಿ ಎ ಆ್ಯಂಡ್ ಎ ಚಿಟ್ ಫಂಡ್ ಮತ್ತು ಫೈನಾನ್ಸ್ ಹೆಸರಿನಲ್ಲಿ ಕೇರಳ ಮೂಲದ ದಂಪತಿ ಅಧಿಕ ಬಡ್ಡಿ ಆಸೆ ತೋರಿಸಿ ಹಲವರಿಂದ ಕೋಟ್ಯಂತರ ರೂಪಾಯಿ ಪಡೆದು ವಂಚಿಸಿ ಪರಾರಿಯಾಗಿರುವ ಘಟನೆ ನಡೆದಿದೆ.

ರಾಮಮೂರ್ತಿನಗರ ನಿವಾಸಿ, ಪಿ.ಟಿ.ಸ್ಯಾವಿಯೊ ಅವರ ದೂರಿನ ಮೇರೆಗೆ ಸಂಸ್ಥೆಯ ಮಾಲೀಕರಾದ ಎ.ವಿ.ಟಾಮಿ ಮತ್ತು ಅವರ ಪತ್ನಿ ಶಿನಿ ಟಾಮಿ ವಿರುದ್ಧ ಚಿಟ್ ಫಂಡ್ ಕಾಯ್ದೆ, ಬಿಎನ್‌ಎಸ್‌ನ ವಿವಿಧ ಕಲಂಗಳ ಅಡಿ ರಾಮಮೂರ್ತಿ ನಗರ ಪೊಲೀಸರು ಎಫ್‌ಐಆರ್ ದಾಖಲಿಸಿ, ತನಿಖೆ ಕೈಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

‘ಫೈನಾನ್ಸ್ ಸಂಸ್ಥೆ ನಡೆಸುತ್ತಿದ್ದ ಎ.ವಿ.ಟಾಮಿ ದಂಪತಿ, ಅಧಿಕ ಬಡ್ಡಿ ಆಸೆ ತೋರಿಸಿ ನನ್ನನ್ನು ಸೇರಿದಂತೆ ಹಲವರಿಂದ ಠೇವಣಿ ಮತ್ತು ಚೀಟಿ ರೂಪದಲ್ಲಿ ಹಣ ಸಂಗ್ರಹಿಸಿದ್ದಾರೆ. ನಾನು ಹಾಗೂ ನನ್ನ ಕುಟುಂಬ ಈವರೆಗೆ ಸುಮಾರು ₹ 70 ಲಕ್ಷ ಹಣವನ್ನು ಅವರು ಸೂಚಿಸಿದ ಬ್ಯಾಂಕ್ ಖಾತೆಗಳಿಗೆ ಹಾಕಿದ್ದೇವೆ. ಇದೇ ರೀತಿ ಹಲವರು ಕೋಟ್ಯಂತರ ರೂಪಾಯಿ ಹಣವನ್ನು ಈ ಸಂಸ್ಥೆಗೆ ಕಟ್ಟಿದ್ದಾರೆ’ ಎಂದು ಸ್ಯಾವಿಯೊ ದೂರಿನಲ್ಲಿ ತಿಳಿಸಿದ್ದಾರೆ.

‘ಇತ್ತೀಚೆಗೆ ಕಚೇರಿ ಬಂದ್ ಆಗಿರುವುದು ಗಮನಕ್ಕೆ ಬಂತು. ಅಕ್ಕಪಕ್ಕದವರನ್ನು ವಿಚಾರಿಸಿದಾಗ ದಂಪತಿ ಬಗ್ಗೆ ಯಾವುದೇ ಮಾಹಿತಿ ಸಿಗಲಿಲ್ಲ. ಇಬ್ಬರ ಮೊಬೈಲ್‌ಗಳು ಸ್ವಿಚ್ಡ್ ಆಫ್ ಆಗಿವೆ. ಪರಾರಿಯಾಗಿರುವ ದಂಪತಿ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ದೂರಿನಲ್ಲಿ ಮನವಿ ಮಾಡಿದ್ದಾರೆ.

ಪ್ರಾಥಮಿಕ ತನಿಖೆ ಪ್ರಕಾರ ಟಾಮಿ ದಂಪತಿ ಅಂದಾಜು ₹14 ಕೋಟಿಗೂ ಅಧಿಕ ಹಣ ವಂಚಿಸಿರುವ ಸಾಧ್ಯತೆಯಿದೆ. ಸದ್ಯ ಇಬ್ಬರೂ ತಲೆಮರೆಸಿಕೊಂಡಿದ್ದು, ಬಂಧನಕ್ಕೆ ಪೊಲೀಸರು ಶೋಧ ಕಾರ್ಯ ಕೈಗೊಂಡಿದ್ದಾರೆ. ಆರೋಪಿಗಳು ನೂರಕ್ಕೂ ಹೆಚ್ಚು ಮಂದಿಗೆ ವಂಚಿಸಿರುವ ಕಾರಣ, ಈ ಪ್ರಕರಣದ ತನಿಖೆಯನ್ನು ಕೇಂದ್ರ ಅಪರಾಧ ವಿಭಾಗ(ಸಿಸಿಬಿ)ಕ್ಕೆ ವರ್ಗಾಯಿಸುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.