ADVERTISEMENT

ಕ್ರಿಸ್‌ಮಸ್‌ ಸಂಭ್ರಮಕ್ಕೆ ಬೆಂಗಳೂರು ಸಜ್ಜು

ವಿದ್ಯುತ್‌ ದೀಪಗಳಿಂದ ಕಂಗೊಳಿಸುತ್ತಿರುವ ಚರ್ಚ್‌ಗಳು

​ಪ್ರಜಾವಾಣಿ ವಾರ್ತೆ
Published 25 ಡಿಸೆಂಬರ್ 2019, 3:01 IST
Last Updated 25 ಡಿಸೆಂಬರ್ 2019, 3:01 IST
ಶಿವಾಜಿನಗರದಲ್ಲಿರುವ ಸಂತ ಬೆಸಿಲಿಕಾ ಚರ್ಚ್‌ನಲ್ಲಿ ಮಂಗಳವಾರ ರಾತ್ರಿ ಕ್ರೈಸ್ತರು ಪ್ರಾರ್ಥನೆ ಸಲ್ಲಿಸಿದರು
ಶಿವಾಜಿನಗರದಲ್ಲಿರುವ ಸಂತ ಬೆಸಿಲಿಕಾ ಚರ್ಚ್‌ನಲ್ಲಿ ಮಂಗಳವಾರ ರಾತ್ರಿ ಕ್ರೈಸ್ತರು ಪ್ರಾರ್ಥನೆ ಸಲ್ಲಿಸಿದರು   

ಬೆಂಗಳೂರು: ಬಾಲ ಯೇಸು ಸ್ವಾಗತಕ್ಕೆ ಮಹಾನಗರ ಸಜ್ಜುಗೊಂಡಿದೆ. ಬುಧವಾರ ಕ್ರಿಸ್‌ಮಸ್‌ ಆಚರಿಸಲು ನಗರದ ಚರ್ಚ್‌ಗಳು ಸಕಲ ಸಿದ್ಧತೆ ಮಾಡಿಕೊಂಡಿದ್ದು, ವಿದ್ಯುತ್‌ ದೀಪಾಲಂಕಾರದಿಂದ ಕಂಗೊಳಿಸುತ್ತಿವೆ.

ಯೇಸುವಿನ ಜನ್ಮದಿನವನ್ನು ಸಂಭ್ರಮಿಸಲುವಿಭಿನ್ನ ವಿನ್ಯಾಸದ ಗೋದಲಿಗಳು, ಸಾಂತಾಕ್ಲಾಸ್‌ನ ಪ್ರತಿಬಿಂಬ,ಶುಭ ಸಂಕೇತದ ಗಂಟೆಗಳು ಮನೆಗಳು ಮತ್ತು ಚರ್ಚ್‌ಗಳನ್ನು ಅಲಂಕರಿಸಿವೆ. ಹಬ್ಬದ ಶುಭಕೋರುವ ‘ಕ್ರಿಸ್‌ಮಸ್‌ ಕಾರ್ಡ್‌ಗಳು’ ಮತ್ತು ಉಡುಗೊರೆಗಳ ಖರೀದಿಯೂ ಜೋರಾಗಿದೆ. ಅಶಕ್ತರಿಗೆ ಮತ್ತು ಬಡವರಿಗೆ ಬಟ್ಟೆ, ಉಡುಗೊರೆ, ಹಣ ನೀಡುವ ಮೂಲಕ ಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಲು ಹಲವರು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.

ನಗರದಎಂ.ಜಿ. ರಸ್ತೆ, ಚರ್ಚ್‍ಸ್ಟ್ರೀಟ್, ಶಿವಾಜಿನಗರ, ಕಮರ್ಷಿಯಲ್ ಸ್ಟ್ರೀಟ್, ಗಾಂಧಿಬಜಾರ್, ಬಸವನಗುಡಿ ಹೀಗೆ ನಗರದ ನಾನಾ ಭಾಗಗಳಲ್ಲಿ ಕ್ರೈಸ್ತರು ಬಟ್ಟೆ, ಉಡುಗೊರೆಗಳ ಖರೀದಿ ಮಾಡಿದರು.

ADVERTISEMENT

ಮಾಲ್‍ಗಳಲ್ಲಿ ಕ್ರಿಸ್‍ಮಸ್ ಸಡಗರ: ಕ್ರಿಸ್‌ಮಸ್‌ ನಿಮಿತ್ತ ನಗರದ ಹಲವು ಮಾಲ್‌ಗಳು ನವವಧುವಿನಂತೆ ಸಿಂಗಾರಗೊಂಡಿವೆ. ಪ್ರವೇಶ ದ್ವಾರಗಳ ಬಳಿ ಬೃಹತ್‌ ಕ್ರಿಸ್‌ಮಸ್‌ ಟ್ರೀ, ಸಾಂತಾಕ್ಲಾಸ್‌ನ ವೇಷಧಾರಿಗಳು ಮಾಲ್‌ಗೆ ಬರುವವರಿಗೆ ಸ್ವಾಗತ ಕೋರುತ್ತಿದ್ದಾರೆ.

‘ಕ್ರಿಸ್‌ಮಸ್‌ ಎಂದರೆ ಸಂಭ್ರಮ ಮಾತ್ರವಲ್ಲ,ಪರರ ದುಃಖದಲ್ಲಿ ಭಾಗಿಯಾಗುವುದು, ಹಸಿದವರಿಗೆ, ಬಡತನದಬೇಗೆಯಲ್ಲಿರುವವರಿಗೆ ನೆರವು ನೀಡುವ ಹಬ್ಬ. ಪ್ರತಿ ಉತ್ತಮ ಕೆಲಸ ಮಾಡಿದಾಗ ಯೇಸು ಜನ್ಮ ತಾಳುತ್ತಾರೆ ಎಂಬ ಸಂದೇಶ ಸಾರುವ ಹಬ್ಬವಿದು’ ಎಂದು ಜಿಮ್ಮಿ ಜೋಸೆಫ್‌ ಹೇಳುತ್ತಾರೆ.

ಶಿವಾಜಿನಗರದಲ್ಲಿರುವ ಸಂತ ಬೆಸಿಲಿಕಾ ಚರ್ಚನಲ್ಲಿ ಕ್ರಿಸ್‌ಮಸ್‌ ಅಂಗವಾಗಿ ಮಂಗಳವಾರ ರಾತ್ರಿ ಫಾದರ್ ಅವರು ಬಾಲ ಯೇಸುವಿನ ಮೂರ್ತಿಯನ್ನು ಗೋದಲಿಯಲ್ಲಿ ಇಡುತ್ತಿರುವುದು

ಪ್ರಾರ್ಥನಾ ಸಭೆ:ಶಿವಾಜಿನಗರದ ಸೇಂಟ್ ಮೇರಿಸ್ ಬೆಸಿಲಿಕಾ ಚರ್ಚ್, ಫ್ರೇಜರ್‌ಟೌನ್‌ನಲ್ಲಿರುವ ಸೇಂಟ್ ಫ್ರಾನ್ಸಿಸ್ ಕ್ಸೇವಿಯರ್ ಕೆಥೆಡ್ರಲ್ ಚರ್ಚ್, ಬ್ರಿಗೇಡ್ ರಸ್ತೆಯಲ್ಲಿರುವ ಸೇಂಟ್‌ ಪ್ಯಾಟ್ರಿಕ್ಸ್ ಚರ್ಚ್, ಸೇಂಟ್ ಮಾರ್ಕ್ಸ್‌ ಕೆಥೆಡ್ರಲ್, ಚಾಮರಾಜಪೇಟೆಯ ಸೇಂಟ್ ಜೋಸೆಫ್ ಚರ್ಚ್, ಲಿಂಗರಾಜಪುರದ ಹೋಲಿ ಗೋಸ್ಟ್ ಚರ್ಚ್, ಹಲಸೂರಿನ ಹೋಲಿ ಟ್ರಿನಿಟಿ ಚರ್ಚ್, ಎಂ.ಜಿ. ರಸ್ತೆಯ ಈಸ್ಟ್‌ ಪರೇಡ್ ಚರ್ಚ್, ರಿಚ್ಮಂಡ್‌ರಸ್ತೆಯಲ್ಲಿರುವ ಸೇಕ್ರೆಡ್‌ ಹಾರ್ಟ್ ಚರ್ಚ್, ಸಂಪಂಗಿರಾಮನಗರದ ಹಡ್ಸನ್ ಸ್ಮಾರಕ ಚರ್ಚ್ ಸೇರಿದಂತೆ ನಗರದ ಹಲವು ಚರ್ಚ್‌ಗಳಲ್ಲಿ ಬುಧವಾರ ವಿಶೇಷ ಪ್ರಾರ್ಥನಾ ಸಭೆಗಳು ನಡೆಯಲಿವೆ.

ಮೇರಿಮಾತೆ ಚಿತ್ರಕ್ಕೆ ಮಕ್ಕಳು ನಮಸ್ಕರಿಸಿದರು
ಶಾಂತಿನಿಕೇತನ ಪ್ರತಿಷ್ಠಾನದ ವತಿಯಿಂದ ನಗರದಲ್ಲಿ ಮಂಗಳವಾರ ಆಯೋಜಿಸಿದ್ದ ಕ್ರಿಸ್‌ಮಸ್‌ ಆಚರಣೆಯಲ್ಲಿ ಶಾಂತಿನಿಕೇತನ ಗ್ಲೋಬಲ್ ಶಾಲೆ ವಿದ್ಯಾರ್ಥಿಗಳು ಹೊಸಬಟ್ಟೆ ತೊಟ್ಟು ಸಂಭ್ರಮಿಸಿದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.