A separate tourism policy for the coastal
ಬೆಂಗಳೂರು: ‘ಕರಾವಳಿಗೆ ಪ್ರತ್ಯೇಕ ಪ್ರವಾಸೋದ್ಯಮ ನೀತಿ ರೂಪಿಸುವುದು, ಕರಾವಳಿಯನ್ನು ಪ್ರವಾಸಿ ಕೇಂದ್ರವನ್ನಾಗಿ ಮಾಡುವುದು ನಮ್ಮ ಆದ್ಯತೆ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದರು.
ಭಾನುವಾರ ಇಲ್ಲಿ ನಡೆದ ಕುಂದಾಪ್ರ ಕನ್ನಡ ಹಬ್ಬದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಕುಂದಾಪುರ ಭಾಗದ ಬೈಂದೂರಿನಲ್ಲಿ ವಿಮಾನ ನಿಲ್ದಾಣ ಬೇಕು ಎಂಬ ಬೇಡಿಕೆಯ ಬಗ್ಗೆ ಆಮೇಲೆ ನೋಡೋಣ. ಮೊದಲು ಪ್ರವಾಸಿ ತಾಣವಾಗಲಿ. ಕರಾವಳಿಯ ಜನರಿಗೆ ಅಲ್ಲೇ ಉದ್ಯೋಗ ಸಿಗುವಂತಾಗಬೇಕು. ಅಲ್ಲಿನ ಸಂಪ್ರದಾಯ, ಸಂಸ್ಕೃತಿಯನ್ನು ಅಲ್ಲಿಂದಲೇ ಲೋಕಕ್ಕೆ ತಿಳಿಸುವ ಕೆಲಸಗಳಾಗಬೇಕು. ಅದಕ್ಕಾಗಿ 340 ಕಿ.ಮೀ. ಉದ್ದದ ಕರಾವಳಿಗೆ ಪ್ರತ್ಯೇಕ ಪ್ರವಾಸೋದ್ಯಮ ನೀತಿ ರೂಪಿಸುವ ಬಗ್ಗೆ ಚಿಂತನೆ ನಡೆಸಲಾಗಿದೆ ಎಂದರು.
‘ಬಿಬಿಎಂಪಿಯನ್ನು ಐದು ಭಾಗ ಮಾಡಿದಾಗ ಕೆಲವರು ಆಕ್ಷೇಪಿಸಿದ್ದರು. ಆದರೆ, ಇದು ಕರ್ನಾಟಕದ ಹೃದಯ ಭಾಗ. ದಕ್ಷಿಣ ಕನ್ನಡ, ಉಡುಪಿ ಸೇರಿ ಎಲ್ಲ ಭಾಗದ ಜನರ ಕೇಂದ್ರ ಸ್ಥಳವಿದು, ಹೊರಗಡೆಯವರು ಅನ್ನೋ ಭಯ ಯಾರಿಗೂ ಬೇಡ’ ಎಂದು ಹೇಳಿದರು.
ನಟಿ ರಕ್ಷಿತಾ ಮಾತನಾಡಿ, ‘ನನ್ನ ತಂದೆಯ ಊರು ದಾವಣಗೆರೆ, ತಾಯಿಯ ಊರು ಕುಂದಾಪುರ. ಭಾಷೆಯನ್ನು ಹಬ್ಬದ ರೀತಿಯಲ್ಲಿ ಆಚರಿಸುವುದು ಹೆಮ್ಮೆಯ ಸಂಗತಿ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
‘ಊರ ಗೌರವ’ ವಿಶೇಷ ಪುರಸ್ಕಾರ ಸ್ವೀಕರಿಸಿದ ಚಿತ್ರನಿರ್ದೇಶಕ ಯೋಗರಾಜ್ ಭಟ್ ಮಾತನಾಡಿ, ‘ಊರು ಅಂದ್ರೆ ವ್ಯಕ್ತಿಗಿಂತ ದೊಡ್ದದು. ಜನ್ಮ ಕೊಟ್ಟ ಊರು ಎಲ್ಲರಿಗಿಂತ ದೊಡ್ಡದು, ಊರು-ಭಾಷೆ ಹೆಸರೇ ನನ್ನನ್ನು ಇಲ್ಲಿ ತಂದು ನಿಲ್ಲಿಸಿದೆ. ಕುಂದಾಪುರದ ತಂತ್ರಾಡಿ ನಾನು ಹುಟ್ಟಿದ ಊರು. ತಾಯಿ ತುಳು ಭಾಷೆಯವರು, ತಂದೆಯದ್ದು ಕುಂದಾಪ್ರರ ಕನ್ನಡ’ ಎಂದು ಹೇಳಿದರು.
‘ತಂದೆ-ತಾಯಿಗೆ ನಾನು ಒಂಬತ್ತನೇ ಮಗ, ನಾನು ಹುಟ್ಟುವ ಮೊದಲೇ ತಾಯಿಗೆ ತಂದೆ ಕುಂದಾಪ್ರ ಕನ್ನಡ ಕಲಿಸಿದ್ದರು. ಹೀಗಾಗಿ ನಾನು ಬೆಳೆದದ್ದು ಧಾರವಾಡ ಜಿಲ್ಲೆಯಾದ್ರೂ ಮನೆಯಲ್ಲಿ ಕುಂದಾಪ್ರದ ವಾತಾವರಣ ಇತ್ತು’ ಎಂದು ನೆನಪು ಮಾಡಿಕೊಂಡರು.
ಪತ್ರಕರ್ತ ಗಿರೀಶ್ ರಾವ್ (ಜೋಗಿ), ಯುನಿವರ್ಸಲ್ ಗ್ರೂಪ್ ಆಫ್ ಇನ್‌ಸ್ಟಿಟ್ಯೂಟ್‌ನ ಉಪೇಂದ್ರ ಶೆಟ್ಟಿ, ನಟರಾದ ಶೈನ್ ಶೆಟ್ಟಿ, ಪ್ರವೀರ್ ಶೆಟ್ಟಿ, ಲೈಫ್‌ಲೈನ್ ಟೆಂಡರ್ ಚಿಕನ್‌ನ ಮ್ಯಾನೇಜಿಂಗ್ ಡೈರೆಕ್ಟರ್ ಕಿಶೋರ್ ಹೆಗ್ಡೆ, ವಿಎಲ್ ಗ್ರೂಪ್ ಮ್ಯಾನೇಜಿಂಗ್ ಡೈರೆಕ್ಟರ್ ಅಂಜಲಿ ವಿಜಯ್, ಎಎಸ್ ಗ್ರೂಪ್ಸ್ ಮ್ಯಾನೇಜಿಂಗ್ ಡೈರೆಕ್ಟರ್ ಸತೀಶ್ ಶೆಟ್ಟಿ, ಕುಂದಾಪ್ರ ಕನ್ನಡ ಪ್ರತಿಷ್ಠಾನದ ಗೌರವಾಧ್ಯಕ್ಷ ಉದಯ ಹೆಗ್ಡೆ, ಅಧ್ಯಕ್ಷ ದೀಪಕ್ ಶೆಟ್ಟಿ ಬಾರ್ಕೂರು, ಉಪಾಧ್ಯಕ್ಷ ನರಸಿಂಹ ಬೀಜಾಡಿ, ಕಾರ್ಯದರ್ಶಿ ರಾಘವೇಂದ್ರ ಕಾಂಚನ್, ಜಂಟಿ ಕಾರ್ಯದರ್ಶಿ ಅಜಿತ್ ಶೆಟ್ಟಿ ಉಳ್ತೂರು, ಕೋಶಾಧಿಕಾರಿ ವಿಜಯ್ ಶೆಟ್ಟಿ ಹಾಲಾಡಿ ಉಪಸ್ಥಿತರಿದ್ದರು.
ಮೈಸೂರಿನಲ್ಲಿ ಕಂಬಳ
‘ಮೈಸೂರು ದಸರಾದಲ್ಲಿ ಕಂಬಳ ಆಯೋಜನೆ ಮಾಡುವ ಆಲೋಚನೆಯಿತ್ತು. ಆ ಗಡಿಬಿಡಿಯಲ್ಲಿ ಮಾಡುವುದು ಬೇಡ ಮಧ್ಯದಲ್ಲಿ ಯಾವಾಗಲಾದರೂ ಮಾಡೋಣ ಎಂದು ಮುಖ್ಯಮಂತ್ರಿಯವರು ತಿಳಿಸಿದ್ದಾರೆ’ ಎಂದು ಡಿ.ಕೆ. ಶಿವಕುಮಾರ್ ಹೇಳಿದರು.
‘ಕರಾವಳಿಯ ಕಲೆಯಾದ ಯಕ್ಷಗಾನ ಸೇರಿದಂತೆ ನಾಟಕ ಸಾಹಿತ್ಯ ಯಾವುದೂ ಅಳಿಸಿ ಹೋಗಬಾರದು ಎಂಬುದು ನಮ್ಮ ಕಾಳಜಿ. ನಿಮ್ಮ ಬೇಡಿಕೆಗಳನ್ನು ಈಡೇರಿಸುವ ಕೆಲಸ ಆದಷ್ಟು ಬೇಗ ಮಾಡಲಾಗುವುದು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.