ADVERTISEMENT

ವಿದ್ಯಾರ್ಥಿಗಳ ಅಪಹರಣ: ಹಣ, ಮೊಬೈಲ್ ಸುಲಿಗೆ

​ಪ್ರಜಾವಾಣಿ ವಾರ್ತೆ
Published 23 ಡಿಸೆಂಬರ್ 2025, 16:34 IST
Last Updated 23 ಡಿಸೆಂಬರ್ 2025, 16:34 IST
   

ಬೆಂಗಳೂರು: ಹೊಸಕೋಟೆಯಲ್ಲಿ ಬಿರಿಯಾನಿ ತಿಂದು ನಗರಕ್ಕೆ ವಾಪಸ್ ಆಗುತ್ತಿದ್ದ ಕಾಲೇಜು ವಿದ್ಯಾರ್ಥಿಗಳನ್ನು 14ರಿಂದ 15 ಜನರ ಗುಂಪು ಅಪಹರಿಸಿ, ಹಣ ಹಾಗೂ ಮೊಬೈಲ್ ಸುಲಿಗೆ ಮಾಡಿರುವ ಘಟನೆ ಆವಲಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಸಂತ್ರಸ್ತ ವಿದ್ಯಾರ್ಥಿಯ ದೂರು ಆಧರಿಸಿ, ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಕೃತ್ಯ ಎಸಗಿದ ಕೆ.ಜಿ ಹಳ್ಳಿಯ ಅರ್ಫಾತ್‌ ಅಹಮದ್‌ (24) ಎಂಬಾತನನ್ನು ಬಂಧಿಸಿದ್ದಾರೆ. ಉಳಿದ ಆರೋಪಿಗಳ ಬಂಧನಕ್ಕೆ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ.

ಬಾಗಲೂರು ವ್ಯಾಪ್ತಿಯ ಕಾಲೇಜಿನಲ್ಲಿ ಬಿಬಿಎ ಓದುತ್ತಿರುವ ನಾಲ್ವರು ವಿದ್ಯಾರ್ಥಿಗಳು ಎರಡು ಬೈಕ್‌ಗಳಲ್ಲಿ ಭಾನುವಾರ ಹೊಸಕೋಟೆಗೆ ಬಿರಿಯಾನಿ ತಿನ್ನಲು ತೆರಳಿದ್ದರು. ಬಿರಿಯಾನಿ ತಿಂದು ವಾಪಸ್‌ ಬರುವಾಗ ಬೆಳಿಗ್ಗೆ ಆರು ಗಂಟೆ ಸುಮಾರಿಗೆ ಆದೂರು ಮುಖ್ಯರಸ್ತೆ ಬಳಿ ದುಷ್ಕರ್ಮಿಗಳು ಅಡ್ಡಗಟ್ಟಿ, ಹಲ್ಲೆ ನಡೆಸಿದ್ದಾರೆ. ಬಳಿಕ ವಿದ್ಯಾರ್ಥಿಗಳನ್ನು ಮೇಡಹಳ್ಳಿಗೆ ಕರೆದೊಯ್ದು ಕೊಠಡಿಯಲ್ಲಿ ಕೂಡಿ ಹಾಕಿದ್ದಾರೆ ಎಂದು ಪೊಲೀಸರು ತಿಳಿಸಿದರು.

ವಿದ್ಯಾರ್ಥಿಗಳ ಬಳಿ ಇದ್ದ ಮೂರು ಮೊಬೈಲ್‌, 23 ಗ್ರಾಂ ಚಿನ್ನದ ಸರ ಕಿತ್ತುಕೊಂಡಿದ್ದಾರೆ.  ₹1.48 ಲಕ್ಷವನ್ನು ಯುಪಿಐ ಮೂಲಕ  ತಮ್ಮ ಖಾತೆಗೆ ವರ್ಗಾವಣೆ ಮಾಡಿಸಿಕೊಂಡಿದ್ದಾರೆ. ಅಲ್ಲದೆ ವಿದ್ಯಾರ್ಥಿಗಳ ಮೊಬೈಲ್‌ಗಳಿಂದ ಅವರ ಸ್ನೇಹಿತರಿಗೆ ಕರೆ ಮಾಡಿಸಿ ಹಣ ತರುವಂತೆ ಬೆದರಿಸಿದ್ದಾರೆ ಎಂದರು.

ADVERTISEMENT

ವಿದ್ಯಾರ್ಥಿಗಳನ್ನು ಅಡ್ಡಗಟ್ಟಿ ಹಣ ಸುಲಿಗೆ ಮಾಡಿದ ಆರೋಪಿಗಳ ಪೈಕಿ ಒಬ್ಬನನ್ನು ಬಂಧಿಸಿದ್ದು, ಉಳಿದವರ ಬಂಧನಕ್ಕೆ ಶೋಧ ನಡೆಸಲಾಗುತ್ತಿದೆ. ಪ್ರಕರಣಕ್ಕೆ ಸಂಬಂಧಿಸಿ ತನಿಖೆ ಮುಂದುವರಿದಿದೆ ಎಂದು ಡಿಸಿಪಿ ಕೆ.ಪರಶುರಾಮ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.