ADVERTISEMENT

ಸಲಹೆ ಕೋರಿದ ಪೊಲೀಸ್ ಕಮಿಷನರ್

ಚಾಲಕರ ಸೇವೆ ಸುಧಾರಣೆಗೆ ಕ್ರಮ

​ಪ್ರಜಾವಾಣಿ ವಾರ್ತೆ
Published 27 ಆಗಸ್ಟ್ 2019, 19:47 IST
Last Updated 27 ಆಗಸ್ಟ್ 2019, 19:47 IST
ಭಾಸ್ಕರ್ ರಾವ್
ಭಾಸ್ಕರ್ ರಾವ್   

ಬೆಂಗಳೂರು: ಆಟೊ, ಓಲಾ ಹಾಗೂ ಉಬರ್ ಕ್ಯಾಬ್ ಕಂಪನಿಗಳ ಚಾಲಕರ ಸೇವೆ ಸುಧಾರಿಸುವುದಕ್ಕಾಗಿ ಪೊಲೀಸ್ ಕಮಿಷನರ್ ಭಾಸ್ಕರ್ ರಾವ್, ‘ಟ್ವೀಟ್‌’ ಮೂಲಕ ಸಾರ್ವಜನಿಕರ ಸಲಹೆ ಕೋರಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಕೆಲ ಚಾಲಕರು ಅಪರಾಧ ಕೃತ್ಯಗಳನ್ನು ಎಸಗುತ್ತಿದ್ದು, ಅದರಿಂದ ಪ್ರಯಾಣಿಕರು ಆತಂಕಗೊಂಡಿದ್ದಾರೆ. ಹೀಗಾಗಿಯೇ ಚಾಲಕರ ಸುಧಾರಣೆಗೆ ಕೆಲ ಕ್ರಮಗಳನ್ನು ಜರುಗಿಸಲು ಭಾಸ್ಕರ್ ರಾವ್ ಮುಂದಾಗಿದ್ದಾರೆ.

‘ಚಾಲಕರ ಸೇವೆ ಸುಧಾರಣೆಗೆ ದಂಡ ವಿಧಿಸುವುದು ಬಿಟ್ಟು ಬೇರೆ ಏನಾದರೂ ಹೊಸ ಆಲೋಚನೆ ಇದ್ದರೆ ತಿಳಿಸಿ. ಜನರಿಗೆ ಉತ್ತಮ ಸೇವೆ ಸಿಗುವಂತೆ ಮಾಡಲು ಬೆಂಗಳೂರು ಪೊಲೀಸರು ಹಾಗೂ ಸಾರಿಗೆ ಇಲಾಖೆ ಅಧಿಕಾರಿಗಳು ಒಟ್ಟಿಗೆ ಶ್ರಮಿಸಲಿದ್ದೇವೆ. ದಯವಿಟ್ಟು ನಿಮ್ಮ ಆಲೋಚನೆಗಳನ್ನು ಹಂಚಿಕೊಳ್ಳಿ’ ಎಂದು ‘ಟ್ವೀಟ್‌’ ಮಾಡಿದ್ದಾರೆ.

ADVERTISEMENT

101 ಮಂದಿ ಮರು ಟ್ವೀಟ್ ಮಾಡಿದ್ದು, 427 ಮಂದಿ ಕಾಮೆಂಟ್ ಸಹ ಮಾಡಿದ್ದಾರೆ.

ಶ್ರೀ ಎಂಬುವರು, ‘ಚಾಲಕರು ಹಾಗೂ ಕಾರುಗಳ ಮಾಲೀಕರಿಗೆ ನಿರಂತರವಾಗಿ ಅರಿವು ಮೂಡಿಸಬೇಕು. ಅವರ ತಪ್ಪಿನ ಅರಿವಾದರೆ ಮಾತ್ರ ಉತ್ತಮ ಸೇವೆ ಸಿಗುತ್ತದೆ’ ಎಂದಿದ್ದಾರೆ.

ರಮೇಶ್ ರಾಮಚಂದ್ರನ್ ಎಂಬುವರು, ‘ಸಂಚಾರ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸುವ ಚಾಲಕರಿಗೆ ಬಹುಮಾನ ನೀಡಿ ಪ್ರೋತ್ಸಾಹಿಸಬೇಕು. ಪ್ರಯಾಣಿಕರ ಜೊತೆ ಉತ್ತಮ ನಡತೆ ತೋರಿಸುವ, ಸೇವೆ ನೀಡುವ ಚಾಲಕರಿಗೆ ಪ್ರಮಾಣ ಪತ್ರ ಸಮೇತ ಸನ್ಮಾನಿಸಬೇಕು. ಅದು ಇತರ ಚಾಲಕರಿಗೆ ಆದರ್ಶವಾಗುತ್ತದೆ’ ಎಂದಿದ್ದಾರೆ.

ಅಭಯ್ ಎಂಬುವರು, ‘ಬಹುಪಾಲು ಚಾಲಕರಿಗೆ, ಸಂಚಾರ ನಿಯಮಗಳ ಬಗ್ಗೆ ಗೊತ್ತಿಲ್ಲ. ಅವರಿಗೆ ತಿಳಿಸಿದರೆ ತಕ್ಕಮಟ್ಟಿಗೆ ಉಲ್ಲಂಘನೆ ಕಡಿಮೆ ಆಗಲಿದೆ’ ಎಂದು ತಿಳಿಸಿದ್ದಾರೆ.

ಎಚ್‌.ಎಸ್‌. ಶಾಮಾಚಾರ ಎಂಬುವರು, ‘ಕೆಲ ರೌಡಿಗಳೂ ಆಟೊ ಓಡಿಸುತ್ತಿದ್ದಾರೆ. ಅಂತವರನ್ನು ತಿಂಗಳಿಗೊಮ್ಮೆ ಸ್ಥಳೀಯ ಪೊಲೀಸರು ತಪಾಸಣೆಗೆ ಒಳಪಡಿಸಬೇಕು’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.