ADVERTISEMENT

ಒಳಮೀಸಲಾತಿ | ಮಕ್ಕಳನ್ನು ಹೊರಗಿಡದೇ ಸಮೀಕ್ಷೆ ನಡೆಸಿ: ಸಚಿವ ಕೆ.ಎಚ್‌. ಮುನಿಯಪ್ಪ

ಗ್ರೇಟರ್ ಬೆಂಗಳೂರು ವ್ಯಾಪ್ತಿಯ ಪರಿಶಿಷ್ಟ ಜಾತಿಯ ಸಮಗ್ರ ಸಮೀಕ್ಷೆಯ ಜನಜಾಗೃತಿ ಸಭೆ

​ಪ್ರಜಾವಾಣಿ ವಾರ್ತೆ
Published 25 ಜೂನ್ 2025, 14:36 IST
Last Updated 25 ಜೂನ್ 2025, 14:36 IST
<div class="paragraphs"><p>ಗ್ರೇಟರ್‌ ಬೆಂಗಳೂರು ವ್ಯಾಪ್ತಿಯ ಪರಿಶಿಷ್ಟ ಜಾತಿಯ ಸಮಗ್ರ ಸಮೀಕ್ಷೆ–2025 ಜನಜಾಗೃತಿ ಸಭೆಯಲ್ಲಿ ಕೋಗಿಲು ವೆಂಕಟೇಶ್, ಎಚ್. ಆಂಜನೇಯ, ಎ. ನಾರಾಯಣಸ್ವಾಮಿ, ಕೆ.ಎಚ್ ಮುನಿಯಪ್ಪ, ಬಿ.ಎನ್. ಚಂದ್ರಪ್ಪ ಚರ್ಚೆಯಲ್ಲಿ ತೊಡಗಿದ್ದರು </p></div>

ಗ್ರೇಟರ್‌ ಬೆಂಗಳೂರು ವ್ಯಾಪ್ತಿಯ ಪರಿಶಿಷ್ಟ ಜಾತಿಯ ಸಮಗ್ರ ಸಮೀಕ್ಷೆ–2025 ಜನಜಾಗೃತಿ ಸಭೆಯಲ್ಲಿ ಕೋಗಿಲು ವೆಂಕಟೇಶ್, ಎಚ್. ಆಂಜನೇಯ, ಎ. ನಾರಾಯಣಸ್ವಾಮಿ, ಕೆ.ಎಚ್ ಮುನಿಯಪ್ಪ, ಬಿ.ಎನ್. ಚಂದ್ರಪ್ಪ ಚರ್ಚೆಯಲ್ಲಿ ತೊಡಗಿದ್ದರು

   

ಪ್ರಜಾವಾಣಿ ಚಿತ್ರ

ಬೆಂಗಳೂರು: ಒಳಮೀಸಲಾತಿಗಾಗಿ ನಡೆಯುತ್ತಿರುವ ಪರಿಶಿಷ್ಟ ಜಾತಿ ಸಮೀಕ್ಷೆಯಿಂದ ಮಕ್ಕಳನ್ನು ಹೊರಗಿಡಬಾರದು. ಮನೆಗೆ ಬೀಗ ಹಾಕಿ ಕೆಲಸಕ್ಕೆ ಹೋಗಿದ್ದ ಸಮಯದಲ್ಲಿ ಸಮೀಕ್ಷೆ ನಡೆಸುವ ಬದಲು ಬೆಳಿಗ್ಗೆ ಮತ್ತು ಸಂಜೆ ಜನರು ಮನೆಯಲ್ಲಿರುವ ಸಮಯದಲ್ಲಿ ಸಮೀಕ್ಷೆ ಮಾಡಿ ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಕೆ.ಎಚ್. ಮುನಿಯಪ್ಪ ತಿಳಿಸಿದರು.

ADVERTISEMENT

ಗ್ರೇಟರ್ ಬೆಂಗಳೂರು ವ್ಯಾಪ್ತಿಯ ಪರಿಶಿಷ್ಟ ಜಾತಿಯ ಸಮಗ್ರ ಸಮೀಕ್ಷೆ–2025ರ ಜನಜಾಗೃತಿ ಸಭೆಯನ್ನು ಬುಧವಾರ ಉದ್ಘಾಟಿಸಿ ಅವರು ಮಾತನಾಡಿದರು.

101 ಸಮುದಾಯಗಳು ಪರಿಶಿಷ್ಟ ಜಾತಿಯಲ್ಲಿವೆ. ಎಲ್ಲ ಸಮುದಾಯಗಳು ತಮ್ಮ ಮೂಲ ಜಾತಿಯನ್ನು ನಮೂದಿಸಬೇಕು. ಪಡಿತರ ಚೀಟಿಯಲ್ಲಿ ಹೆಸರಿಲ್ಲದ, ಆಧಾರ್‌ ಕಾರ್ಡ್‌ ಇನ್ನೂ ಮಾಡಿಸಿಲ್ಲದ ಪುಟ್ಟ ಮಕ್ಕಳ ಹೆಸರನ್ನೂ ಸೇರಿಸಬೇಕು ಎಂದು ಹೇಳಿದರು.

ಸಮೀಕ್ಷೆಗೆ ತೆರಳಿದಾಗ ಕಾಲೊನಿಗಳಲ್ಲಿ ಮನೆಗೆ ಬೀಗ ಹಾಕಿರುತ್ತಾರೆ ಎಂದು ಸಮೀಕ್ಷೆದಾರರು ತಿಳಿಸಿದ್ದಾರೆ. ಅದಕ್ಕಾಗಿ ಇನ್ನುಳಿದ ಐದು ದಿನಗಳಲ್ಲಿ ಬೆಳಿಗ್ಗೆ 6ರಿಂದ 10 ಮತ್ತು ಸಂಜೆ 5ರಿಂದ ರಾತ್ರಿ 9ರವರೆಗೆ ಮನೆಗಳಿಗೆ ಭೇಟಿ ನೀಡಬೇಕು. ಕೆಲಸಕ್ಕೆ ಹೋಗುವವರು ಈ ಹೊತ್ತಿನಲ್ಲಿ ಮನೆಯಲ್ಲಿ ಇರುತ್ತಾರೆ ಎಂದು ಸಲಹೆ ನೀಡಿದರು.

ನಗರದ 120 ಕಾಲೊನಿಗಳಲ್ಲಿ ಸಮೀಕ್ಷೆಗಳು ನಡೆಯಬೇಕು. ಅದಕ್ಕಾಗಿ ಪ್ರತಿ 200–250 ಜನರಿಗೊಬ್ಬರಂತೆ ಸಮೀಕ್ಷೆದಾರರು ಕೆಲಸ ಮಾಡಬೇಕು. ಕಾಲೊನಿಗಳಲ್ಲಿ ಶೇ 55ರಷ್ಟು ಜನರು ಮಾತ್ರ ಕನ್ನಡಿಗರಿದ್ದಾರೆ. ಉಳಿದವರು ಬೇರೆ ಬೇರೆ ರಾಜ್ಯಗಳಿಂದ ಬಂದವರಾಗಿದ್ದಾರೆ. ಅಲ್ಲದೇ ಕನ್ನಡಿಗರಲ್ಲಿಯೂ ಬೀದರ್‌, ಕಲಬುರಗಿ ಸಹಿತ ಬೇರೆಡೆಯಿಂದ ಬಂದವರಿರುತ್ತಾರೆ. ಬೇರೆ ಜಿಲ್ಲೆಯಿಂದ ಬಂದವರ ಸಮೀಕ್ಷೆ ಅವರ ಮೂಲ ಜಿಲ್ಲೆಗಳಲ್ಲಿ ಆಗಿಲ್ಲದಿದ್ದರೆ ಇಲ್ಲಿ ನಡೆಸಬೇಕು ಎಂದರು.

ಮಾಜಿ ಸಂಸದ ಬಿ.ಎನ್‌. ಚಂದ್ರಪ್ಪ ಹಾಗೂ ಮಾಜಿ ಶಾಸಕ ತಿಮ್ಮರಾಯಪ್ಪ, ಮುಖಂಡರಾದ ಕೇಶವಮೂರ್ತಿ, ದೊಡ್ಡೇರಿ ವೆಂಕಟೇಶ್, ದಾಸನೂರು ಕೂಸಣ್ಣ, ಕೋಗಿಲು ವೆಂಕಟೇಶ್, ಸಂಘಟನೆಗಳ ಪ್ರಮುಖರು ಉಪಸ್ಥಿತರಿದ್ದರು.

‘ಜುಲೈ 20ಕ್ಕೆ ಅನುಷ್ಠಾನಗೊಳಿಸಿ’

ಜೂನ್‌ 30ರ ಒಳಗೆ ಶೇ 100ರಷ್ಟು ಗಣತಿಯಾಗಬೇಕು. ಜುಲೈ 10ರ ಒಳಗೆ ವರದಿ ಸ್ವೀಕರಿಸಬೇಕು. ಜುಲೈ 20ಕ್ಕೆ ಒಳಮೀಸಲಾತಿ ಅನುಷ್ಠಾನಗೊಳಿಸಬೇಕು ಎಂದು ಮಾಜಿ ಸಚಿವ ಎಚ್‌. ಆಂಜನೇಯ ಸರ್ಕಾರವನ್ನು ಆಗ್ರಹಿಸಿದರು. ಒಳಮೀಸಲಾತಿಗಾಗಿ 35 ವರ್ಷಗಳಿಂದ ಮಾಡಿದ ಹೋರಾಟ ಈಗ ಫಲ ಕೊಡುವ ಹಂತಕ್ಕೆ ಬಂದಿದೆ. ಗಣತಿಯ ಅವಧಿಯನ್ನು ಮತ್ತೆ ವಿಸ್ತರಿಸಬಾರದು. ಇನ್ನು ಐದು ದಿನಗಳಲ್ಲಿ ಎಲ್ಲ ಗಣತಿ ಪೂರ್ಣಗೊಳಿಸಬೇಕು. ಸಮುದಾಯಗಳ ಹಿಂದುಳಿದಿರುವಿಕೆ ಶೈಕ್ಷಣಿಕ ಮಟ್ಟ ಜನಸಂಖ್ಯೆ ಸಹಿತ ಎಲ್ಲ ಮಾಹಿತಿಗಳು ಗಣತಿಯ ಮೂಲಕ ಸಿಗಲಿದೆ ಎಂದು ತಿಳಿಸಿದರು.

‘ಮತದಾರರ ಪಟ್ಟಿ ಪ್ರಕಾರ ಗಣತಿ ನಡೆಸಿ’

ಅಧಿಕಾರಿಗಳು ಗಣತಿದಾರರು ಮತದಾರರ ಪಟ್ಟಿಯಂತೆ ಮನೆಗಳಿಗೆ ಭೇಟಿ ನೀಡಬೇಕು. ಆ ನಂತರ ಆಧಾರ್ ಕಾರ್ಡ್‌ ಪಡಿತರ ಚೀಟಿಗಳನ್ನು ಗಣನೆಗೆ ತೆಗೆದುಕೊಳ್ಳಬೇಕು. ಆಗ ಮಾತ್ರ ಎಲ್ಲ ಮನೆಗಳಿಗೆ ಭೇಟಿ ನೀಡಲು ಸಾಧ್ಯ ಎಂದು ಕೇಂದ್ರದ ಮಾಜಿ ಸಚಿವ ಎ. ನಾರಾಯಣಸ್ವಾಮಿ ಸಲಹೆ ನೀಡಿದರು. ಅದು ಬಿಟ್ಟು ಎಲ್ಲರ ಸಮೀಕ್ಷೆ ನಡೆಸುತ್ತೇವೆ ಎಂದು ಪರಿಶಿಷ್ಟ ಜಾತಿಯವರ ಮನೆಗೂ ಬೇರೆಯವರ ಮನೆಗೂ ಭೇಟಿ ನೀಡುತ್ತಾ ಹೋದರೆ ಸಮಯ ಸಾಲದು. ಈಗ ಆಗಿರುವ ಗಣತಿ ಪ್ರಮಾಣ ಏನೇನೂ ಸಾಲದು ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.