ADVERTISEMENT

ಕಾಂಗ್ರೆಸ್‌ ಸ್ವತಂತ್ರವಾಗಿ ಅಧಿಕಾರಕ್ಕೆ ಬರಲ್ಲ: ಎಚ್‌.ಡಿ. ಕುಮಾರಸ್ವಾಮಿ

‘ಜೆಡಿಎಸ್‌ ನಾಶ ಮಾಡಲು ಅವಕಾಶ ಕೊಡುವುದಿಲ್ಲ’

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2020, 20:19 IST
Last Updated 28 ನವೆಂಬರ್ 2020, 20:19 IST
ಎಚ್‌. ಡಿ. ಕುಮಾರಸ್ವಾಮಿ
ಎಚ್‌. ಡಿ. ಕುಮಾರಸ್ವಾಮಿ   

ಬೆಂಗಳೂರು: ‘ಕಾಂಗ್ರೆಸ್‌ನವರು ಮುಂದಿನ ದಿನಗಳಲ್ಲಿ ಸ್ವತಂತ್ರವಾಗಿ ಅಧಿಕಾರಕ್ಕೆ ಬರಲು ಸಾಧ್ಯವೇ ಇಲ್ಲ’ ಎಂದು ವಾಗ್ದಾಳಿ ನಡೆಸಿದ ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ, ‘ರಾಜ್ಯದಲ್ಲಿ ಜೆಡಿಎಸ್‌ ಅನ್ನು ನಾಶ ಮಾಡಲು ಕುತಂತ್ರ ನಡೆಯುತ್ತಿದೆ. ಇದಕ್ಕೆ ಅವಕಾಶ ಕೊಡುವುದಿಲ್ಲ’ ಎಂದರು.

ಜೆಪಿ ಭವನದಲ್ಲಿ ಪಕ್ಷದ ಪ್ರಮುಖರ ಸಭೆಯಲ್ಲಿ ಶನಿವಾರ ಮಾತನಾಡಿದ ಅವರು, ‘ಬಿಜೆಪಿ ಸರ್ಕಾರದ ಅವಧಿ ಯಲ್ಲಿ ನಡೆದ ಭ್ರಷ್ಟಾಚಾರದ ಬಗ್ಗೆ ದಾಖಲೆಗಳ ಸಮೇತ ನಾನು ಹೋರಾಟ ಮಾಡಿದ್ದರಿಂದ ಮೂವರು ಮುಖ್ಯಮಂತ್ರಿಗಳು ಬದಲಾದರು. ನನ್ನ ಹೋರಾಟದ ಫಲವಾಗಿ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಸಾಧ್ಯವಾಗಿತ್ತು’ ಎಂದರು.

‘ಬಾದಾಮಿಯಲ್ಲಿ ಸಿದ್ದರಾಮಯ್ಯ ಗೆಲ್ಲಲು ಜೆಡಿಎಸ್‌ ಕಾರಣ. ಅಲ್ಲಿ ನಮ್ಮ ಅಭ್ಯರ್ಥಿ ಹನುಮಂತಪ್ಪ ಅಭ್ಯರ್ಥಿ ಆಗದೇ ಇದ್ದಿದ್ದರೆ, ಚಾಮುಂಡೇಶ್ವರಿ ಕ್ಷೇತ್ರದಂತೆ ಮೂವತ್ತು ಸಾವಿರಕ್ಕೂ ಹೆಚ್ಚು ಮತಗಳ ಅಂತರದಲ್ಲೇ ಸೋಲಬೇಕಾಗುತ್ತಿತ್ತು ಎನ್ನುವುದನ್ನು ಸಿದ್ದರಾಮಯ್ಯ ಅರ್ಥ ಮಾಡಿಕೊಳ್ಳಬೇಕು’ ಎಂದರು.

ADVERTISEMENT

‘ಕಾಂಗ್ರೆಸ್‌ನವರ ಸಹವಾಸ ಮಾಡಿದ ಕಾರಣ ಜನರು ನನ್ನನ್ನು ಅಪನಂಬಿಕೆಯಿಂದ ನೋಡುವಂತಾ ಯಿತು. ಕೆಪಿಸಿಸಿಗೆ ಹೊಸ ಅಧ್ಯಕ್ಷರು ಬಂದ ನಂತರ ಜೆಡಿಎಸ್ ಭದ್ರಕೋಟೆ ಛಿದ್ರವಾಯಿತು ಎಂದು ಅಪಪ್ರಚಾರ ನಡೆಯಿತು. ನನ್ನ ಸರ್ಕಾರವನ್ನು ಡಿ.ಕೆ. ಶಿವಕುಮಾರ್ ಎಂದೂ ಉಳಿಸಲಿಲ್ಲ. ಬಜೆಟ್ ಮಂಡನೆ ಸಮಯದಲ್ಲೇ ಸರ್ಕಾರ ಉರುಳಿಸಲು ಹೊರಟಿದ್ದರು. ನಮ್ಮ‌ ಪಕ್ಷದ ಶರಣಗೌಡ ಪಾಟೀಲನಿಂದ ನಾಲ್ಕು ತಿಂಗಳು ಸರ್ಕಾರ ಉಳಿಯಿತು. ಡಿ.ಕೆ. ಶಿವಕುಮಾರ್ ಬೆಳಗಾವಿ ವಿಚಾರದಲ್ಲಿ ತಲೆ ಹಾಕಿದ ಕಾರಣ ಸರ್ಕಾರ ಬಿತ್ತು, ನಾನು ಮುಖ್ಯಮಂತ್ರಿ ಆಗಿದ್ದಾಗ ನನ್ನ ಸುತ್ತಮುತ್ತ ನಿಖಿಲ್ ಕುಮಾರಸ್ವಾಮಿ ಕಾಣಿಸಿಕೊಂಡಿದ್ದನಾ’ ಎಂದು ಪ್ರಶ್ನಿಸಿದರು.

‘ಕುಮಾರಸ್ವಾಮಿ ಐದು ವರ್ಷ ಮುಖ್ಯಮಂತ್ರಿ ಆಗಿರಬಹುದಾಗಿತ್ತು. ಆದರೆ, ಕೆಲವರು ಬೆನ್ನಿಗೆ ಚೂರಿ ಹಾಕಿದರು. ದೇವೇಗೌಡರು ಬದುಕಿರುವಾಗಲೇ ಪಕ್ಷವನ್ನು ಮತ್ತೊಮ್ಮೆ ಅಧಿಕಾರಕ್ಕೆ ತರಬೇಕು’ ಎಂದು ಪಕ್ಷದ ಪದಾಧಿಕಾರಿಗಳಿಗೆ ಜೆಡಿಎಸ್‌ ಶಾಸಕ ಎಚ್‌.ಡಿ. ರೇವಣ್ಣ ಮನವಿ ಮಾಡಿದರು.

ಮಾಜಿ ಶಾಸಕ ವೈಎಸ್‌ವಿ ದತ್ತ, ‘ಬಿಜೆಪಿ ಜೊತೆ ನಮ್ಮ ಪಕ್ಷ (ಜೆಡಿಎಸ್‌) ಹೊಂದಾಣಿಕೆ ಮಾಡಿಕೊಂಡಿದೆ ಎಂಬ ಅಪವಾದದ ಕಾರಣ ಸತತ ಸೋಲು ಕಾಣುತ್ತಿದ್ದೇವೆ. ಜೊತೆಗೆ ಅಲ್ಪಸಂಖ್ಯಾತರನ್ನೂ ಕಳೆದುಕೊಂಡಿದ್ದೇವೆ. ಕೆಲವರ ಅಪಪ್ರಚಾರದಿಂದ ಪಾರಂಪರಿಕ ಮತಗಳು ದೂರ ಸರಿಯುವಂತಾಗಿವೆ’ ಎಂದರು.

ಜೆಡಿಎಸ್‌ನ ಹಲವು ಜಿಲ್ಲಾ, ತಾಲ್ಲೂಕು ಘಟಕಗಳ ಅಧ್ಯಕ್ಷರು, ‘ಪ್ರಜ್ವಲ್ ರೇವಣ್ಣ ಮತ್ತು ನಿಖಿಲ್ ಕುಮಾರಸ್ವಾಮಿ ಅವರನ್ನು ಪಕ್ಷ ಸಂಘಟನೆಗೆ ಬಳಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಎಚ್.ಕೆ. ಕುಮಾರಸ್ವಾಮಿ, ಉಪ ಸಭಾಪತಿ ಧರ್ಮೇಗೌಡ, ಕೋನರಡ್ಡಿ, ಶಾಸಕ ಶಿವಲಿಂಗೇಗೌಡ, ಶ್ರೀನಿವಾಸ ಗೌಡ ಇದ್ದರು. ಜೆಡಿಎಸ್‌ ವರಿಷ್ಠ ಎಚ್.ಡಿ. ದೇವೇಗೌಡ ಗೈರಾಗಿದ್ದರು.

ನಮ್ಮ ಮಧ್ಯೆ ಗೊಂದಲವಿಲ್ಲ: ಪ್ರಜ್ವಲ್‌– ನಿಖಿಲ್‌ ಸ್ಪಷ್ಟನೆ
ಸಭೆಯಲ್ಲಿ ಪ್ರಜ್ವಲ್‌ ರೇವಣ್ಣ ಮತ್ತು ನಿಖಿಲ್‌ ಕುಮಾರಸ್ವಾಮಿ ಅಕ್ಕಪಕ್ಕ ಕುಳಿತದ್ದು ಗಮನಸೆಳೆಯಿತು. ಶಿರಾ ಉಪ ಚುನಾವಣೆ ಸಂದರ್ಭದಲ್ಲಿ ಈ ಇಬ್ಬರ ಮಧ್ಯೆ ಹೊಂದಾಣಿಕೆ ಇಲ್ಲ ಎಂದು ಸುದ್ದಿ ಹಬ್ಬಿತ್ತು. ಅದನ್ನು ಪ್ರಸ್ತಾಪಿಸಿದ ನಿಖಿಲ್‌, ಪ್ರಜ್ವಲ್ ಅವರನ್ನು ಹತ್ತಿರ ಕರೆದು, ‘ನಮ್ಮಲ್ಲಿ ಯಾವುದೇ ಗೊಂದಲ ಇಲ್ಲ’ ಎಂದರು. ‘ರಾಜ್ಯದ ಎಲ್ಲಾ ಜಿಲ್ಲೆಗಳಿಗೂ ಯುವಪಡೆ ಕಟ್ಟಿಕೊಂಡು ಪ್ರವಾಸ ಮಾಡುತ್ತೇನೆ. ಅದಕ್ಕೆ ನೀಲನಕ್ಷೆ ಸಿದ್ಧಪಡಿಸಿಕೊಂಡಿದ್ದೇನೆ’ ಎಂದರು.

‘ಪಕ್ಷಕ್ಕೆ ದೊಡ್ಡ ಶಕ್ತಿಯೇ ಕಾರ್ಯಕರ್ತರು. ನಾನು, ನಿಖಿಲ್ ಮುಂದೆ ಬರುತ್ತೇವೆ. ಒಟ್ಟಿಗೆ ಕೆಲಸ ಮಾಡುತ್ತೇವೆ’ ಎಂದು ಪ್ರಜ್ವಲ್‌ ಹೇಳಿದರು. ‘ನೀವು ಯಾರಿಗೂ ಹೆದರುವುದು ಬೇಡ. ನೀವಿಬ್ಬರೂ ನಮ್ಮ ಪಕ್ಷದ ಯುವಶಕ್ತಿ, ನೀವು ಅಧಿಕಾರಕ್ಕಾಗಿ ಹೋರಾಟ ಮಾಡಬೇಡಿ. ಪಕ್ಷ, ಜನರ ಉಳಿವಿಗೆ ಹೋರಾಟ ಮಾಡಿ’ ಎಂದು ಪ್ರಜ್ವಲ್–ನಿಖಿಲ್‌ಗೆ ಕುಮಾರಸ್ವಾಮಿಕಿವಿಮಾತು ಹೇಳಿದರು.

*

ಬಿಜೆಪಿ ನಾಯಕರಾಗಿ ಸಾಹು ಕಾರ್ (ರಮೇಶ ಜಾರಕಿಹೊಳಿ) ಈಗ ಜೋರಾಗಿ ಓಡಾಡುತ್ತಿದ್ದಾರೆ. ಯಡಿಯೂರಪ್ಪಗೆ ಯಾವಾಗ ಟೋಪಿ ಹಾಕ್ತಾರೋ ಗೊತ್ತಿಲ್ಲ.
-ಎಚ್‌.ಡಿ. ಕುಮಾರಸ್ವಾಮಿ, ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.