
ಬೆಂಗಳೂರು: ‘ರಾಜ್ಯದಲ್ಲಿ ಕುರುಬ ಸಮುದಾಯದ ಸಂಘಟಕರಾಗಿ, ಶಾಸಕ, ಸಚಿವರಾಗಿ ಕೆಲಸ ಮಾಡಿದ ಆರ್.ಕೃಷ್ಣಪ್ಪ ಅವರಿಗೆ ಕಾಂಗ್ರೆಸ್‌ನಲ್ಲಿ ಅಧಿಕಾರ ತಪ್ಪಿಸಲಾಯಿತು’ ಎಂದು ಕರ್ನಾಟಕ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎಚ್.ಎಂ.ರೇವಣ್ಣ ಬೇಸರ ವ್ಯಕ್ತಪಡಿಸಿದರು.
ಆರ್. ಕೃಷ್ಣಪ್ಪ ಅಭಿನಂದನಾ ಸಮಿತಿ, ಮೀಡಿಯಾ ಸಲ್ಯೂಷನ್ಸ್ ನಗರದ ಗಾಂಧಿಭವನದಲ್ಲಿ ಸೋಮವಾರ ಆಯೋಜಿಸಿದ್ದ ‘ಸುಗುಣಾಂತರಂಗ’ ಅಭಿನಂದನಾ ಗ್ರಂಥ ಜನಾರ್ಪಣೆ ಸಮಾರಂಭದಲ್ಲಿ ಅವರು ಮಾತನಾಡಿದರು.
‘ಕೃಷ್ಣಪ್ಪ ಅವರು ಎರಡು ಬಾರಿ ಪಾಲಿಕೆ ಸದಸ್ಯ, ಜನತಾದಳದಿಂದ ಶಾಸಕ, ಗ್ರಂಥಾಲಯ, ವಯಸ್ಕರ ಶಿಕ್ಷಣ ಸಚಿವರಾಗಿದ್ದರು. ಆ ನಂತರ ಕಾಂಗ್ರೆಸ್ ಸೇರಿದರೂ ಸರಿಯಾದ ಸ್ಥಾನ ಸಿಗಲಿಲ್ಲ. ಅಹಿಂದ ಅಲ್ಲದೇ ಹಲವು ನಾಯಕರ ಬೆಂಬಲದಿಂದ ಸಿದ್ದರಾಮಯ್ಯ ಅವರು ಬೆಳೆದರೂ ಈಗ ಅವರ ಸುತ್ತ ಹೌದಪ್ಪಗಳು ಸುತ್ತಿಕೊಂಡಿದ್ದಾರೆ. ಇಂತಹ ಸಂಗತಿಗಳನ್ನು ಅವರಿಗೆ ತಿಳಿಸಿಕೊಡಬೇಕಿದೆ. ಕೃಷ್ಣಪ್ಪ ಅವರ ಅಭಿನಂದನಾ ಕಾರ್ಯಕ್ರಮಕ್ಕೆ ಸಿದ್ದರಾಮಯ್ಯ ಬರಬೇಕಿತ್ತು’ ಎಂದು ತಿಳಿಸಿದರು.
ಕೊಪ್ಪಳ ವಿಶ್ವವಿದ್ಯಾಲಯ ಕುಲಪತಿ ಬಿ.ಕೆ.ರವಿ ಮಾತನಾಡಿ, ‘ಶೋಷಿತ ಸಮುದಾಯಗಳು ಈಗಲೂ ಸೌಲಭ್ಯದಿಂದ ವಂಚಿತವಾಗಿವೆ. ಭಾರತದಲ್ಲಿ ಕುರುಬ ಸಮುದಾಯದ ಜನಸಂಖ್ಯೆ 12 ಕೋಟಿಯಷ್ಟಿದೆ. ಸಮುದಾಯವನ್ನು ಸಂಘಟಿಸಿ ಕನಕಗುರು ಪೀಠ ಸ್ಥಾಪಿಸುವಲ್ಲಿ ಕೃಷ್ಣಪ್ಪ ಅವರ ಪಾತ್ರವೂ ಹಿರಿದಾದುದು. ಸಮುದಾಯಕ್ಕಾಗಿ ಕೆಲಸ ಮಾಡಿದ ನಾಯಕರ ಕುರಿತು ಇಂತಹ ಗ್ರಂಥಗಳು ಬರಬೇಕು’ ಎಂದು ಹೇಳಿದರು.
ಗ್ರಂಥ ಕುರಿತು ಮಾತನಾಡಿದ ಕರ್ನಾಟಕ ಗಾಂಧಿ ಸ್ಮಾರಕ ನಿಧಿಯ ಅಧ್ಯಕ್ಷ ವೂಡೇ ಪಿ.ಕೃಷ್ಣ, ‘ರಾಜಕಾರಣ ಈಗ ಸಂಪೂರ್ಣ ಬದಲಾಗಿದೆ. ದುಡ್ಡಿಲ್ಲದೇ ಗೆಲ್ಲಲು ಆಗುವುದಿಲ್ಲ ಎನ್ನುವ ಸ್ಥಿತಿ ನಿರ್ಮಾಣವಾಗಿದೆ. ಇದರ ನಡುವೆಯೂ ಕೃಷ್ಣಪ್ಪ ಅವರು ಜನಮುಖಿಯಾಗಿ ಕೆಲಸ ಮಾಡಿರುವುದನ್ನು ಮರೆಯಬಾರದು’ ಎಂದರು.
ಮಾಜಿ ಶಾಸಕರಾದ ಚಂದ್ರಣ್ಣ, ಶಿವರಾಜು, ಪಿ.ಎಸ್.ಪ್ರಕಾಶ್, ವಿಧಾನ ಪರಿಷತ್‌ನ ಮಾಜಿ ಸದಸ್ಯರಾದ ಹುಲಿನಾಯ್ಕರ್, ಆರ್.ವಿ.ವೆಂಕಟೇಶ್, ಮಾಜಿ ಮೇಯರ್ ಹುಚ್ಚಪ್ಪ, ಬಾಗಲಕೋಟೆ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಬಾಯಕ್ಕ ಮೇಟಿ, ರುಕ್ಮಿಣಿಯಮ್ಮ ಕೃಷ್ಣಪ್ಪ, ಕೃತಿಯ ಸಂಪಾದಕ ಆರ್.ಪಿ.ಸಾಂಬಸದಾಶಿವಾರೆಡ್ಡಿ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.