ADVERTISEMENT

ಲಸಿಕೆ ವಿಚಾರದಲ್ಲಿ ದ್ರೋಹ: ಕಾಂಗ್ರೆಸ್‌ ಕಿಡಿ

​ಪ್ರಜಾವಾಣಿ ವಾರ್ತೆ
Published 12 ಮೇ 2021, 20:00 IST
Last Updated 12 ಮೇ 2021, 20:00 IST
ವಿಕಾಸಸೌಧ ಆವರಣದಲ್ಲಿರುವ ಗಾಂಧಿ ಪ್ರತಿಮೆ ಮುಂಭಾಗದಲ್ಲಿ ಕಾಂಗ್ರೆಸ್ ಹಿರಿಯ ನಾಯಕರು ಬುಧವಾರ ಪ್ರತಿಭಟನೆ ನಡೆಸಿದರು
ವಿಕಾಸಸೌಧ ಆವರಣದಲ್ಲಿರುವ ಗಾಂಧಿ ಪ್ರತಿಮೆ ಮುಂಭಾಗದಲ್ಲಿ ಕಾಂಗ್ರೆಸ್ ಹಿರಿಯ ನಾಯಕರು ಬುಧವಾರ ಪ್ರತಿಭಟನೆ ನಡೆಸಿದರು   

ಬೆಂಗಳೂರು: ‘ಲಸಿಕೆ ವಿಚಾರದಲ್ಲಿ ಸುಳ್ಳು ಮಾಹಿತಿ ನೀಡುವ ಮೂಲಕ ಕೇಂದ್ರ ಮತ್ತು ರಾಜ್ಯ ಸರ್ಕಾರ ಜನರಿಗೆ ದ್ರೋಹ ಎಸಗಿದೆ. ಲಭ್ಯ ಇಲ್ಲ ಎಂದಾದರೆ ಎಲ್ಲರಿಗೂ ಲಸಿಕೆ ಹಾಕುವುದಾಗಿ ಏಕೆ ಹೇಳಬೇಕಿತ್ತು. ರಾಜ್ಯದಲ್ಲಿ ಅಭಿಯಾನಕ್ಕೆ ಚಾಲನೆ ನೀಡುವ ಅಗತ್ಯವಾದರೂ ಏನಿತ್ತು’ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.

ಕೊರೊನಾ ಸೋಂಕು ನಿಯಂತ್ರಿಸುವಲ್ಲಿ ಮತ್ತು ಸೋಂಕಿತರ ಪ್ರಾಣ ರಕ್ಷಣೆ ವಿಚಾರದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದನಿರ್ಲಕ್ಸ್ಯ ವಹಿಸುತ್ತಿದೆ ಎಂದು ಆರೋಪಿಸಿ ವಿಕಾಸಸೌಧ ಆವರಣದಲ್ಲಿರುವ ಗಾಂಧಿ ಪ್ರತಿಮೆ ಮುಂಭಾಗದಲ್ಲಿ ಕಾಂಗ್ರೆಸ್ ಹಿರಿಯ ನಾಯಕರು ಬುಧವಾರ ಸಂಜೆ ಸಾಂಕೇತಿಕವಾಗಿ ಪ್ರತಿಭಟನೆ ನಡೆಸಿದರು.

ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಸಿದ್ದರಾಮಯ್ಯ, ‘45, 60 ವರ್ಷ ಮೀರಿದವರಿಗೇ ಇನ್ನೂ ಲಸಿಕೆ ಸಿಗುತ್ತಿಲ್ಲ. ಮೊದಲ ಡೋಸ್ ಪಡೆದವರೇ ಎರಡನೇ ಡೋಸ್‍ಗೆ ಪರದಾಡುತ್ತಿದ್ದಾರೆ’ ಎಂದರು.

ADVERTISEMENT

‘18 ವರ್ಷ ದಾಟಿದವರಿಗೆ ಲಸಿಕೆ ಅಭಿಯಾನಕ್ಕೆಮುಖ್ಯಮಂತ್ರಿ ಮೇ 1ರಂದು ಚಾಲನೆ ನೀಡಿದರು. ಆಗ ಲಸಿಕೆ ಎಲ್ಲಿತ್ತು. ಮೇ ಮೂರು ಅಥವಾ ನಾಲ್ಕನೇ ವಾರದಲ್ಲಿ ಲಸಿಕೆ ಬರುತ್ತದೆ ಎಂದುಮುಖ್ಯ ಕಾರ್ಯದರ್ಶಿ ಹೇಳಿದ್ದಾರೆ. ಆರೋಗ್ಯ ಸಚಿವರು 15 ದಿನ ಲಸಿಕೆ ಹಾಕಲು ಸಾಧ್ಯವಿಲ್ಲ ಎನ್ನುತ್ತಾರೆ. ಇದನ್ನು ಜವಾಬ್ದಾರಿಯುತ ಸರ್ಕಾರ ಎಂದು ಕರೆಯಲು ಆಗುವುದೇ. ಜನರು ಲಸಿಕೆಗಾಗಿ ಸರದಿಯಲ್ಲಿ ದಿನಗಟ್ಟಲೇ ಕಾಯುತ್ತಿದ್ದಾರೆ. ಇದರ ಹೊಣೆಗಾರರು ಯಾರು’ ಎಂದು ಪ್ರಶ್ನಿಸಿದರು.

‘ದೇಶ ಮತ್ತು ರಾಜ್ಯ ಇಂಥ ಸ್ಥಿತಿಗೆ ಬರಲು ಕೇಂದ್ರ ಮತ್ತು ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವವರೇ ನೇರ ಹೊಣೆಗಾರರು. ಹೀಗಾದರೆ, ಮುಖ್ಯಮಂತ್ರಿಯಾಗಿ ಯಡಿಯೂರಪ್ಪ ಏಕಿರಬೇಕು? ಹಾಸಿಗೆಗೆ ಒಬ್ಬರು, ಲಸಿಕೆಗೆ ಇನ್ನೊಬ್ಬರು ಹೀಗೆ ಸಚಿವರನ್ನು ನೇಮಕ ಮಾಡಲಾಗಿದೆ. ಆದರೂ ಸೋಂಕಿತರ ಪರದಾಟ ನಿಂತಿಲ್ಲ. ಸಿದ್ಧತೆ ಮಾಡಿಕೊಳ್ಳದೆ ರಾಜ್ಯವನ್ನು ಇಂಥ ಸ್ಥಿತಿಗೆ ತಳ್ಳಿದ್ದಾರೆ’ ಎಂದು ವಾಗ್ದಾಳಿ ನಡೆಸಿದರು.

ಪ್ರತಿಭಟನೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಕಾಯಾಧ್ಯಕ್ಷರಾದ ರಾಮಲಿಂಗಾರೆಡ್ಡಿ, ಸಲೀಂ ಅಹಮದ್, ಶಾಸಕರಾದ ಜಿ. ಪರಮೇಶ್ವರ, ಕೆ.ಆರ್‌. ರಮೇಶ್ ಕುಮಾರ್, ಕೆ.ಜೆ. ಜಾರ್ಜ್, ಕೃಷ್ಣ ಬೈರೇಗೌಡ, ದಿನೇಶ್ ಗುಂಡೂರಾವ್, ಸಂಸದ ಜಿ.ಸಿ. ಚಂದ್ರಶೇಖರ್, ಯುವ ಕಾಂಗ್ರೆಸ್ ಅಧ್ಯಕ್ಷ ರಕ್ಷಾ ರಾಮಯ್ಯ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.